Ripponpet | ಜಾನಪದ ಕಲಾತಂಡಗಳ ಮೆರಗಿನೊಂದಿಗೆ ವಿಜೃಂಭಣೆಯಿಂದ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ

0 381

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 56ನೇ ವರ್ಷದ ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಸಿದ್ದಿವಿನಾಯಕ ಮೂರ್ತಿಯ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾದ ರಾಜಬೀದಿ ಉತ್ಸವ ಮೆರವಣಿಗೆ ವಿವಿಧ ಜಾನಪದ ಕಲಾ ತಂಡಗಳ ಮೆರಗಿನೊಂದಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಚಾಲನೆ ನೀಡಿದರು.

ಪ್ರತಿಷ್ಠಾಪಿಸಲಾದ ವಿನಾಯಕ ಮೂರ್ತಿ ತಿಲಕ್ ಮಂಟಪ ಸ್ಥಳದಿಂದ ವಿಸರ್ಜನಾ ಮೆರವಣಿಗೆ ಹೊರಡುತ್ತಿದ್ದಂತೆ ಜಾತಿ ಧರ್ಮದ ಭೇದವಿಲ್ಲದೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಜಯಘೋಷಣೆ ಹಾಕಿದರು.

ಶಿವಮೊಗ್ಗ ರಸ್ತೆಯ ವಿನಾಯಕ ದೇವಸ್ಥಾನದ ಮಾರ್ಗವಾಗಿ ಶಿವಮಂದಿರದ ಕಡೆ ಉತ್ಸವ ಬರುವ ರಸ್ತೆಯ ನಿವಾಸಿಗಳು ತಳಿರು ತೋರಣ ರಂಗೋಲಿ ಹಾಕಿ ವಿನಾಯಕ ಉತ್ಸವವನ್ನು ಸ್ವಾಗತಿಸಿ ಹಣ್ಣು-ಕಾಯಿ ಸಮರ್ಪಿಸಿ ಭಕ್ತಿಯ ಪರಾಕಾಷ್ಟತೆಯನ್ನು ಮೆರೆಯುತ್ತಿದ್ದಾರೆ.

ರಾಜಬೀದಿ ಉತ್ಸವದಲ್ಲಿ ಭದ್ರಾವತಿಯ ಅರಕೆರೆಯ ವೀರಗಾಸೆ, ಶಿಗ್ಗಾಂವ್‌ನ ಜಾಂಜಾ ಪಥಾಕ್, ಕೀಲುಕುದುರೆ, ಗೊಂಬೆ ಕುಣಿತ, ನಗಾರಿ ಹಾಗೂ ಸುತ್ತ-ಮುತ್ತಲಿನ ಹೆಸರಾಂತ ಡೊಳ್ಳು, ಭಜನೆ ವಾದ್ಯ ತಟ್ಟಿರಾಯ ತಂಡಗಳವರಿಂದ ಮನರಂಜಿಸುವ ಜಾನಪದ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಯುವತಿಯರು ಹಿರಿಯ ನಾಗರೀಕರು ಮತ್ತು ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದ ದೃಶ್ಯ ವಿಶೇಷವಾಗಿದೆ.

ವಿನಾಯಕ ಉತ್ಸವವು ವಿನಾಯಕ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ, ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಶ್ರೀಸಿದ್ದಿವಿನಾಯಕ ಧರ್ಮದರ್ಶಿ ಸಮಿತಿಯವರು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಅಖಿಲಭಾತರ ವೀರಶೈವ ಸಮಾಜದ ತಾಲ್ಲೂಕು ಮಹಿಳಾ ಘಟಕದ ಆಧ್ಯಕ್ಷೆ ಯಶೋಧ ಈಶ್ವರಪ್ಪಗೌಡ ನೇತೃತ್ವದಲ್ಲಿ ಇತರ ಮಹಿಳೆಯರು ವಿವಿಧ ಸಂಘ ಸಂಸ್ಥೆಯವರು ವಿನಾಯಕ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಲಿದೆ.

ಇದೇ ಸಂದರ್ಭದಲ್ಲಿ ವಿನಾಯಕ ವೃತ್ತದಲ್ಲಿ ಶಿವಮೊಗ್ಗ “ಗೀತಾ ಆರ್ಕೆಸ್ಟ್ರಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ನಂತರ ವಿನಾಯಕ ಉತ್ಸವವು ತೀರ್ಥಹಳ್ಳಿ ರಸ್ತೆ ಸಾಗರ ರಸ್ತೆ ತೆರಳಲಿದೆ‌.

ಕಟ್ಟಡ ಸಮಿತಿ ಆಧ್ಯಕ್ಷ ಎಂ.ಬಿ.ಮಂಜುನಾಥ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಗೌರವಾಧ್ಯಕ್ಷ ವೈ.ಜೆ.ಕೃಷ್ಣ,ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ಎಂ.ಸುರೇಶ್‌ಸಿಂಗ್, ಆರ್.ರಾಘವೇಂದ್ರ, ವಾಸುಶೆಟ್ಟಿ, ಕೆ.ಎ.ನಾರಾಯಣ, ಈಶ್ವರ ಮಳಕೊಪ್ಪ, ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ್‌ಅಚಾರ್, ಕೆ.ವಿ.ಮುರುಳಿ, ಭೀಮರಾಜ್, ಹೆಚ್.ಎನ್.ಉಮೇಶ್, ಪ್ರಕಾಶ್‌ಶೆಟ್ಟಿ ಡಿ.ಈ.ರವಿಭೂಷಣ, ರಾಮು ಬಳೆಗಾರ, ಆಟೋ ಲಕ್ಷ್ಮಣ, ಶಿವು ಗವಟೂರು, ದಾನಪ್ಪ, ಹೆಚ್.ಎನ್.ಚೋಳರಾಜ್, ನಾಗರಾಜ ಕೆದಲುಗುಡ್ಡೆ, ತೀರ್ಥೇಶ್ ಅಡಿಕಟ್ಟು ಇನ್ನಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದಾರೆ.

ಸಾಗರ ಉಪವಿಭಾಗಾಧಿಕಾರಿಗಳು ಮತ್ತು ಹೊಸನಗರ ತಹಶೀಲ್ದಾರ್, ತೀರ್ಥಹಳ್ಳಿ ಡಿ.ವೈ.ಎಸ್.ಪಿ, ಹೊಸನಗರ ವೃತ್ತ ನಿರೀಕ್ಷಕರು, ನಾಡಕಛೇರಿ ಉಪತಹಶೀಲ್ದಾರ್, ಪಿಎಸ್.ಐ, ಸಿಬ್ಬಂದಿ ವರ್ಗ ಸೇರಿದಂತೆ ಅಗ್ನಿಶಾಮಕದಳ ಗೃಹರಕ್ಷಕ ಹಾಗೂ ಸ್ವಯಂ ಸೇವಕರು ಅಧಿಕಾರಿಗಳು ಉತ್ಸವದಲ್ಲಿ ಹಾಜರಿದ್ದಾರೆ.

Leave A Reply

Your email address will not be published.

error: Content is protected !!