M.T. BIG IMPACT | ಎಚ್ಚೆತ್ತ ತಾಲೂಕು ಆಡಳಿತ | ನತದೃಷ್ಟ ಕುಟುಂಬಕ್ಕೆ ಆಧಾರ್, ರೇಷನ್ ಕಾರ್ಡ್

0 36

ಹೊಸನಗರ : ಸರ್ಕಾರಿ ಕಛೇರಿ ಕೆಲಸ ಮಾಡಿಸಿಕೊಳ್ಳಲು, ದಾಖಲಾತಿಗಳನ್ನು ಪಡೆಯಲು ಹತ್ತಾರು ಬಾರಿ ಅಲೆದಾಡುವುದು ಸಾಮಾನ್ಯವಾಗಿದೆ. ಆದರೆ ಜನಸಾಮಾನ್ಯರೊಬ್ಬರು ಜಿಲ್ಲಾಧಿಕಾರಿಗೆ ಮನವಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿದಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆಯ ತಹಶೀಲ್ದಾರ್ ರಾಕೇಶ್ ಮತ್ತು ಅಧಿಕಾರಿಗಳು ನತದೃಷ್ಟ ಕುಟುಂಬವೊಂದರ ಸಹಾಯಕ್ಕೆ ಧಾವಿಸಿರುವುದು ಗಮನ ಸೆಳೆದಿದೆ.


ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇರುವ ಓರ್ವ ಮಗಳು, ಪೂಜಾ ಹುಟ್ಟುವಾಗಲೇ ಮಾನಸಿಕ ಹಾಗೂ ದೈಹಿಕ ಅಸ್ವಸ್ಥೆ. ಶಶಿಕಲಾ ಅವರಿಗೂ ಕಿವಿ ಸರಿಯಾಗಿ ಕೇಳಿಸದು. ಜೋಪಡಿಯಂತಿದ್ದ ಮನೆ ಕೆಲ ವರ್ಷಗಳ ಹಿಂದೆ ಸಂಪೂರ್ಣ ಶಿಥಿಲಗೊಂಡು ಗ್ರಾಮದ ಸಮುದಾಯ ಭವನದಲ್ಲೇ ತಾಯಿ ಮಗಳು ವಾಸ ಮಾಡುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ಸರಕಾರದ ಯಾವ ಯೋಜನೆಗಳ ಫಲ ಸಹಾ ಇದುವರೆಗೆ ಸಿಕ್ಕಿಲ್ಲ. ಕಾರಣ ಈ ಕುಟುಂಬಕ್ಕೆ ಪಡಿತರ ಚೀಟಿಯನ್ನಾಗಲಿ ಮಾಡಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ.


ಮಹಿಳೆಯ ಕಷ್ಟವನ್ನು ಅರಿತ ಸಾಮಾಜಿಕ ಕಳಕಳಿಯ ಗ್ರಾಮಸ್ಥರೊಬ್ಬರು, ಈಕೆಯ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗೆ ವಾಟ್ಸಾಪ್ ಮೂಲಕ ತಿಳಿಸಿದ್ದರು. ಅಲ್ಲದೇ ಮಹಿಳೆಯ ನಿಷ್ಕೃಷ್ಟ ಬದುಕಿನ ಕುರಿತು ಮಲ್ನಾಡ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಒಂದೇ ದಿನದಲ್ಲಿ ಮಹಿಳೆಯನ್ನು ಸಂಪರ್ಕಿಸಿ ಸಹಾಯಹಸ್ತ ಚಾಚಿದ್ದಾರೆ. ವಿಶೇಷ ಚೇತನ ಮಹಿಳೆಗೆ ಸ್ಥಳದಲ್ಲಿಯೇ ಬೆರಳಚ್ಚು ಪಡೆದು, ಆಧಾರ್‌ ಕಾರ್ಡ್‌ಗೆ ಅರ್ಜಿ ಪಡೆದಿದ್ದಾರೆ.

“ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮಹಿಳೆಯನ್ನು ಸಂಪರ್ಕಿಸಿದ್ದೇವೆ. ವಿಶೇಷ ಚೇತನ ಯುವತಿಗೆ ಆಧಾರ್ ಕಾರ್ಡ್ ಅರ್ಜಿ ಪಡೆದಿದ್ದೇವೆ. ಕುಟುಂಬಕ್ಕೆ ಪಡಿತರ ಚೀಟಿ ನೀಡುವಲ್ಲಿ ತ್ವರಿತವಾಗಿ ಕಾರ‍್ಯ ನಿರ್ವಹಿಸುತ್ತೇವೆ. ದಾಖಲೆಗಳು ಸರಿಯಾದ ಬಳಿಕ ಗ್ರಾಮ ಪಂಚಾಯಿತಿಯಿಂದ ವಸತಿ ಯೋಜನೆಯಡಿಯಲ್ಲಿ ಮನೆ ಪಡೆಯಲು ಅವಕಾಶ ಆಗಲಿದೆ.”
– ರಾಕೇಶ್ ಫ್ರಾನ್ಸಿಸ್ ಬ್ರಿಟೋ, ಹೊಸನಗರ ತಹಸೀಲ್ದಾರ್


ಖುದ್ದು ಮುಖ್ಯಮಂತ್ರಿಗಳ ಕಛೇರಿಯಿಂದಲೇ ನಿರ್ದೇಶನ:
ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯ ಫಲ ಪಡೆಯಲು ಇಕೆವೈಸಿ ಮಾಡಿಸಿಕೊಳ್ಳಲು ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿದೆ. ಆದರೆ ಇಂತಹ ಕಷ್ಟದ ಬದುಕು ಸಾಗಿಸುತ್ತಿರುವವರಿಗೆ ಯಾವ ಸೌಲಭ್ಯವೂ ಇಲ್ಲ ಎಂಬುದಾಗಿ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಖುದ್ದು ಮುಖ್ಯಮಂತ್ರಿಗಳ ಕಛೇರಿಯಿಂದಲೇ ಹೊಸನಗರ ತಹಸೀಲ್ದಾರ್ ಅವರಿಗೆ ದೂರವಾಣಿ ಕರೆ ಬಂದಿದ್ದು, ಸರಕಾರಿ ಸೌಲಭ್ಯಗಳನ್ನು ಪಡೆಯಲು ಬೇಕಾದ ಅಗತ್ಯ ದಾಖಲೆಗಳನ್ನು ಮಾಡಿಕೊಡುವಂತೆ ಸೂಚಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳು ಸಹಃ ತ್ವರಿತವಾಗಿ ಸ್ಪಂದಿಸಿ, ಸಮಸ್ಯೆಯನ್ನು ಪರಿಹರಿಸಲು ಸಿಬ್ಬಂದಿಗೆ ಸೂಚಿಸಿದ್ದಾರೆ.

ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೇಕ್ಟರ್ ರೇಣುಕಯ್ಯ, ಆಧಾರ್ ಕಾರ್ಡ್ ನೊಂದಣಿ ಮಾಡುವ ಸಿಂಧು, ಸತೀಶ ಇನ್ನೂ ಮುಂತಾದವರು ಸಂತ್ರಸ್ತೆ ಮನೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ನೊಂದಾಯಿಸಿ ವಿತರಿಸಿದರು.

ಸದ್ಯಕ್ಕೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆದರೆ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ರಾಜ್ಯ ಸರ್ಕಾರ, ಆಹಾರ ಮತ್ತು ನಾಗರಿಕ ಸೇವಾ ಸಚಿವಾಲಯದಿಂದಲೇ ಇವರಿಗೆ ರೇಷನ್ ಕಾರ್ಡ್ ಮಾಡಿಕೊಡುವ ಪ್ರಯತ್ನದಲ್ಲಿದೆ.

Leave A Reply

Your email address will not be published.

error: Content is protected !!