Shivamogga | ಕೇಸರಿಮಯವಾದ ಶಿವಮೊಗ್ಗ ನಗರ ; ಪೊಲೀಸ್ ಸರ್ಪಗಾವಲು

0 247

ಶಿವಮೊಗ್ಗ: ಇಂದು ನಡೆಯುವ ಹಿಂದು ಮಹಾಸಭಾ ಗಣಪತಿಯ ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು. ಭಗವಾಧ್ವಜಗಳು, ಬಂಟಿಂಗ್ಸ್ಗಳು ರಾರಾಜಿಸುತ್ತಿವೆ.


ಗಾಂಧಿ ಬಜಾರ್ ಅಂತೂ ಕಣ್ಣಿಗೆ ಕಾಣುವಷ್ಟು ದೂರ ಕೇಸರಿಮಯವಾಗಿದೆ. ಗಾಂಧಿಬಜಾರಿನ ಪ್ರಮುಖ ದ್ವಾರದಲ್ಲಿಯೇ ಗಮನಸೆಳೆಯುವ ಉಗ್ರನರಸಿಂಹನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸುಮಾರು 30 ಅಡಿ ಎತ್ತರದ ಈ ಮೂರ್ತಿ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಇಂದು ಸಾವಿರಾರು ಜನರು ಮೂರ್ತಿಯ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.


ಪ್ರತಿ ವರ್ಷವೂ ಹಿಂದೂ ಸಂಘಟನೆಯ ಮಹಾ ಮಂಡಳಿ ವಿಶೇಷ ಅಲಂಕಾರಗಳನ್ನು ಇಲ್ಲಿ ಮಾಡುತ್ತಾ ಬಂದಿದೆ. ಕಳೆದ ಬಾರಿಯೂ ಗೀತೋಪದೇಶದ ಸ್ತಬ್ಧ ಚಿತ್ರವನ್ನು ಮಾಡಲಾಗಿತ್ತು. ಈ ಬಾರಿಯ ವಿಶೇಷವೆಂದರೆ ಇದು ಕೇವಲ ಸ್ತಬ್ಧ ಚಿತ್ರವಲ್ಲದೆ ರೋಬೋಟ್ ಮೂಲಕ ಇದನ್ನು ಚಲನಸ್ಥಿತಿಯಲ್ಲಿ ಇಡಲಾಗಿದೆ. ಈ ಮೂರ್ತಿಯು ನೋಡುಗರ ಗಮನ ಸೆಳೆಯುತ್ತಿದೆ.ಸುಮಾರು 20ಕ್ಕೂ ಹೆಚ್ಚು ಕಲಾವಿದರು 3 ತಿಂಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.


ಇದಲ್ಲದೆ ಶಿವಪ್ಪನಾಯಕ ವೃತ್ತದಲ್ಲಿ ಚಂದ್ರಯಾನ ರಾಕೆಟ್‌ನ ಪ್ರತಿಕೃತಿಯನ್ನು ಕೂಡ ನಿರ್ಮಿಸಲಾಗಿದೆ.ಇದು ಕೂಡ ನೋಡುಗರ ಗಮನ ಸೆಳೆಯುತ್ತಿದೆ. ಈ ಬಾರಿ ಚಂದ್ರಯಾನ -3ರ ಯಶಸ್ಸಿನ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಗೆಯೇ ಆಂಜನೇಯ ಮೂರ್ತಿಯನ್ನು ಕೂಡ ನಿರ್ಮಿಸಲಾಗಿದೆ.
ಇಂದು ಬೆಳಿಗ್ಗೆ ನಡೆಯುವ ಗಣಪತಿ ಮೆರವಣಿಗೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಪೊಲೀಸ್ ಇಲಾಖೆಯಂತೂ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ನಿನ್ನೆಯಿಂದಲೇ ಪೊಲೀಸರು ಬಿಗಿ ಕಾವಲು ಹಾಕಿದ್ದಾರೆ. ಅದರಲ್ಲೂ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.


ಈದ್‌ಮಿಲಾದ್ ಮತ್ತು ಗಣೇಶ ಹಬ್ಬ ಒಂದೇ ಬಾರಿ ಬಂದಿದ್ದರಿಂದ ಮೆರವಣಿಗೆಯ ಆತಂಕವಿತ್ತು. ಆದರೆ ಮುಸಲ್ಮಾನ ಬಾಂಧವರು ಮೆರವಣಿಗೆ ಮುಂದಕ್ಕೆ ಹಾಕಿದ್ದಾರೆ. ಈಗಾಗಲೇ ಶಾಂತಿಯುತವಾಗಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಅನೇಕ ಬಾರಿ ಶಾಂತಿ ಸಭೆಗಳು ನಡೆದಿವೆ. ಕೆಲವು ಸಂಘ-ಸಂಸ್ಥೆಗಳು ಕೂಡ ಶಾಂತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮುಸ್ಲಿಂ ಮುಖಂಡರು ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆದು ಹಬ್ಬ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆಯಲೆಂದು ಆಶಯ ವ್ಯಕ್ತಪಡಿಸಿದ್ದಾರೆ.


ಒಟ್ಟಾರೆ ಇಂದು ನಡೆಯುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು, ಹಿಂದು ಮಹಾ ಮಂಡಳಿ ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಮೆರವಣಿಗೆಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಅದರಲ್ಲೂ ಸಾವಿರಾರು ಮಹಿಳೆಯರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Leave A Reply

Your email address will not be published.

error: Content is protected !!