ಸೌದೆ ತರಲು ಕಾಡಿಗೆ ಹೋಗಿದ್ದ ವಿದ್ಯಾರ್ಥಿ ಕಾಲು ಜಾರಿ ನದಿಗೆ ಬಿದ್ದು ಸಾವು !

0 539

ಕಳಸ: ಸೌದೆ ತರಲು ಕಾಡಿಗೆ ಹೋಗಿದ್ದ ವೇಳೆ ಭದ್ರಾನದಿಗೆ ಕಾಲು ಜಾರಿ ಬಿದ್ದು ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನಪ್ಪಿ ರುವ ಘಟನೆ ಶುಕ್ರವಾರ ತಾಲೂಕಿನ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ನೆಲ್ಲಿಬೀಡು ಗ್ರಾಮದ ರವಿ ಎಂಬವರ ಪುತ್ರ ಪೃಥ್ವಿರಾಜ್ (17) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ತನ್ನ ಮನೆಯ ಸಮೀಪದಲ್ಲೇ ಹರಿಯುವ ಭದ್ರಾ ನದಿಯ ದಡದಲ್ಲಿರುವ ಕಾಡಿನಿಂದ ಸೌದೆ ತರಲು ಕಾಡಿಗೆ ಹೋಗಿದ್ದ. ನದಿ ದಡದಲ್ಲಿ ನಡೆದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾನದಿಗೆ ಬಿದ್ದಿದ್ದಾನೆ. ಈಜಲು ಬಾರದ ಪೃಥ್ವಿರಾಜ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸೌದೆ ತರಲು ಹೋಗಿದ್ದ ಪೃಥ್ವಿರಾಜ್ ತುಂಬಾ ಹೊತ್ತಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮನೆ ಸಮೀಪದ ಕಾಡು, ನದಿ ತೀರದಲ್ಲಿ ಹುಡುಕಾಡಿದಾಗ ಪೃಥ್ವಿರಾಜ್ ಭದ್ರಾನದಿಗೆ ಕಾಲು ಜಾರಿ ಬಿದ್ದಿರುವುದು ಗೊತ್ತಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಕುದುರೆಮುಖ ಪೊಲೀಸರು ಯುವಕನಿಗಾಗಿ ನದಿಯಲ್ಲಿ ಶೋಧ ನಡೆಸಿದ ವೇಳೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಪೃಧ್ವಿರಾಜ್ ಬೆಂಗಳೂರಿನ ಕಾಲೇಜೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ರಜೆ ಇದ್ದ ಹಿನ್ನಲೆಯಲ್ಲಿ ನೆಲ್ಲಿಬೀಡು ಗ್ರಾಮಕ್ಕೆ ಆಗಮಿಸಿದ್ದ ಎಂದು ತಿಳಿದುಬಂದಿದೆ.

ಕಳಸ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!