ಕಾಂಗ್ರೆಸ್ ಹೌಸ್ ಕಾದಂಬರಿ ಯಾವುದೇ ಪಕ್ಷ ಪ್ರತಿನಿಧಿಸದೆ ನೊಂದ ಲೈಂಗಿಕ ಕಾರ್ಯಕರ್ತೆಯ ಬದುಕನ್ನು ವಿವರಿಸುತ್ತಾ ಹೋಗುತ್ತದೆ

0 35

ಶಿವಮೊಗ್ಗ: ಕನ್ನಡ ಕಾದಂಬರಿ ಲೋಕಕ್ಕೆ ಲೇಖಕಿ ವಾಣಿ ಗೌಡ ಅವರ ಕಾಂಗ್ರೆಸ್ ಹೌಸ್ ಕಾದಂಬರಿ ಹೊಸರೀತಿಯ ಸೇರ್ಪಡೆ.ಇದೊಂದು ಪ್ರಾಮಾಣಿಕ ಪ್ರಯತ್ನ ಎಂದು ಸಾಹಿತಿ, ಕವಯಿತ್ರಿ ಸವಿತಾ ನಾಗಭೂಷಣ್ ಹೇಳಿದರು.


ಅವರು ಭಾನುವಾರ ಸಂಜೆ ಸರ್ಕಾರಿನೌಕರರ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಹೌಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಹೌಸ್ ಕಾದಂಬರಿ ಯಾವುದೇ ಪಕ್ಷವನ್ನು ಪ್ರತಿನಿಧಿಸದೆ ಒಂದು ನೊಂದ ಲೈಂಗಿಕ ಕಾರ್ಯಕರ್ತೆಯ ಬದುಕನ್ನು ವಿವರಿಸುತ್ತಾ ಹೋಗುತ್ತದೆ. ಈ ಕೃತಿಯನ್ನು ಓದುತ್ತಾ ಹೋದ ಹಾಗೆ ಗೆಜ್ಜೆಪೂಜೆ, ಅಮರಪ್ರೇಮ, ಮಸಣದ ಹೂವು, ನಾಗರಹಾವು ಮುಂತಾದ ಸಿನಿಮಾಗಳನ್ನು ನೆನಪಿಗೆ ತರುತ್ತದೆ. ಒಂದು ಕೃತಿ ಹೀಗೆ ದಟ್ಟವಾಗಿ ಕಾಡುತ್ತದೆ. ಆದರೆ ಈ ಕಾದಂಬರಿ ಸಿನಿಮೀಯವಾಗಿ ಇಲ್ಲ. ಅದು ವಾಸ್ತವದ ನೆಲೆಯಲ್ಲಿದೆ ಎಂದರು.


ಈ ಕಾದಂಬರಿಯು ಒಂದು ಆತ್ಮ ನಿವೇದನೆಯಾಗಿದೆ. ಇದು ಸೋಲು ಕಾಣದ ಕಾದಂಬರಿ. ಲೈಂಗಿಕ ಕಾರ್ಯಕರ್ತೆಯ ನೋವು ಇದರಲ್ಲಿ ಅಡಗಿದೆ. ಗರ್ಭದಲ್ಲೂ ಹೆಣ್ಣು ಮಗು ಸುರಕ್ಷಿತವಾಗಿ ಇಲ್ಲದ ಈ ಹೊತ್ತಿನಲ್ಲಿ  ಒಂದು ಹೆಣ್ಣಿನ ಬಗ್ಗೆ ಗೌರವ ತರುವ ಅದರಲ್ಲೂ ಲೈಂಗಿಕ ಕಾರ್ಯಕರ್ತೆಯನ್ನು ಒಂದು ರೀತಿಯಲ್ಲಿ ದೇವತೆಯಾಗಿ ಚಿತ್ರಿಸುವ ಅವರ ಪರಯತ್ನ ಮೆಚ್ಚಿಕೊಳ್ಳುವಂತದ್ದು ಎಂದರು.


ಇಂತಹ ಕೃತಿಗಳು ಹೆಚ್ಚುಹೆಚ್ಚಾಗಿ ಬರಬೇಕು. ಅದರಲ್ಲ ಮಹಿಳೆಯರು ಕಾದಂಬರಿ ಲೋಕವನ್ನು  ಪ್ರವೇಶಿಸುತ್ತಿರುವುದು ಅತ್ಯಂತ ಸ್ವಾಗತದ ವಿಷಯವಾಗಿದೆ. ಏನೇನೋ ಬರೆಯುವುದಕ್ಕಿಂತ ಸಾಮಾಜಿಕ ಬದಲಾವಣೆ ತರುವ ಹೆಣ್ಣಿನ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಲೇಖನಗಳು ಇಂದು ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಲೇಖಕಿ ಅವರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಬಹಳಷ್ಟು ಲೇಖಕಿಯರ ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ಅಂತಹ ಸಂದರ್ಭ ಬಂದರೆ ಬರವಣಿಗೆಯನ್ನು ನಿಲ್ಲಿಸುವುದೇ ಒಳಿತು. ಈ ನಿಟ್ಟಿನಲ್ಲಿ ಲೇಖಕಿ ವಾಣಿ ಗೌಡ ಎಚ್ಚರಿಕೆ ವಹಿಸುತ್ತಾರೆ ಎಂದರು. 


ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಎಸ್.ವಿ. ಚಂದ್ರಕಲಾ ಮಾತನಾಡಿ, ಹೆಣ್ಣಿನ ಹೋರಾಟದ ಬದುಕನ್ನು ಅದರಲ್ಲು ನತದೃಷ್ಟರ ಬದುಕನ್ನು, ಅಸಹಾಯಕತೆಯನ್ನು, ಬಾಂಬೆಯಂತಹ ಕಾಮಾಟಿಪುರದ ಸಂಕಷ್ಟದ ಬದುಕನ್ನು ಕಾಂಗ್ರೆಸ್ ಹೌಸ್ ಕಾದಂಬರಿಯಲ್ಲಿ ಲೇಖಕಿ ಬಹಳ ವಾಸ್ತವವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಬದುಕೇ ಛಿದ್ರವಾಗಿರುವಾಗ ಅದನ್ನು ಮತ್ತೆ ಜೋಡಿಸುವ ಆಶಾವಾದ ಇದರಲ್ಲಿದೆ ಎಂದರು.


ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಓದುವ ಸಂಸ್ಕೃತಿ ಹೆಚ್ಚಾಗಬೇಕು. ಅಭಿರುಚಿಯ ಪುಸ್ತಕಗಳು ಬರಬೇಕು. ಯಾವುದೇ ಸರ್ಕಾರಗಳು ತಮ್ಮ ಇಚ್ಛೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಬದಲಾಯಿಸುವುದು ಸರಿಯಲ್ಲ ಮತ್ತು ಆಂಗ್ಲ ಮಾಧ್ಯಮದ ವಿಜೃಂಭಣೆಯಲ್ಲಿ ಕನ್ನಡದ ಸೃಜನಶೀಲತೆ ಕಳೆದುಹೋಗುತ್ತಿರುವುದು ವಿಷಾದನೀಯ ಎಂದರು


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹೌಸ್ ಲೇಖಕಿ ವಾಣಿಗೌಡ, ಪ್ರಕಾಶಕ ಶರವಣಕುಮಾರ್, ಪ್ರತಿಮಾ ಢಾಕಪ್ಪ ಇದ್ದರು.

Leave A Reply

Your email address will not be published.

error: Content is protected !!