ಸರ್ಕಾರಕ್ಕೆ ನೀಡಿದ ಬರಪೀಡಿತದ ವರದಿ ಅವೈಜ್ಞಾನಿಕ ; ತುರ್ತು ಸಮಗ್ರ ವರದಿಗೆ ಜೆಡಿಎಸ್ ಆಗ್ರಹ

0 132

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಬರಪೀಡಿತ ವರದಿ ಮಾತ್ರ ಅವೈಜ್ಞಾನಿಕವಾಗಿರುತ್ತದೆ. ಮಲೆನಾಡಿನ ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಬರದಿದ್ದು, ಇದರಿಂದ ರೈತರು ತಮ್ಮ ಸಂಪೂರ್ಣ ಬೆಳೆಯನ್ನು ಕಳೆದುಕೊಂಡಿದ್ದು ಸರ್ಕಾರ ನೆಪಕ್ಕೆ ಮಾತ್ರ ಅಧಿಕಾರಿಗಳಿಂದ ವರದಿ ತರಿಸಿ ಶಿವಮೊಗ್ಗ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆಂದು ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಆರ್.ಎ.ಚಾಬುಸಾಬ್ ಆರೋಪಿಸಿದರು.

ರಿಪ್ಪನ್‌ಪೇಟೆಯಲ್ಲಿ ಇಂದು ನಾಡಕಛೇರಿಯ ಮುಂಭಾಗ ರಾಜ್ಯ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ನಾಡಕಛೇರಿಯ ಉಪತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ವಿಶೇಷವಾಗಿ ಹೊಸನಗರ ತಾಲ್ಲೂಕಿನಲ್ಲೂ ಸುಮಾರು 15 ಸಾವಿರ ಹೆಕ್ಟೇರ್ ಭತ್ತದ ಬೆಳೆ 800 ಹೆಕ್ಟೇರ್ ಜೋಳದ ಬೆಳೆ ನಾಶವಾಗಿದ್ದು ಅಧಿಕಾರಿಗಳು ನೀಡಿರುವ ವರದಿ ಕೇವಲ ಅರ್ಧದಷ್ಟಿರುತ್ತದೆ. ಹೀಗೆಯೇ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಸಹ ಭತ್ತದ ಬೆಳೆ ಜೋಳದ ಬೆಳೆ ಸರ್ವನಾಶವಾಗಿದೆ. ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸರ್ಕಾರ ತರಿಸಿಕೊಂಡಿರುವ ವರದಿಯನ್ನು ತಿರಸ್ಕರಿಸಿ, ಸಮಗ್ರ ವರದಿಯನ್ನು ತರಿಸಿಕೊಂಡು ರೈತರಿಗೆ ಪರಿಹಾರ ನೀಡುವಲ್ಲಿ ಮಧ್ಯ ಪ್ರವೇಶ ಮಾಡಲು ಈ ಮೂಲಕ ಆಗ್ರಹಿಸುತ್ತದೆ.

ಜಿಲ್ಲೆಯಾದ್ಯಂತ ರೈತರು ಭಿತ್ತಿದ ಭತ್ತದ ಬೀಜ, ಜೋಳ, ಸಕಾಲಕ್ಕೆ ಮಳೆ ಬಾರದಿದ್ದರಿಂದ ನೆಲಕಚ್ಚಿ ಹೋಗಿರುತ್ತದೆ. ಜಾನುವಾರುಗಳಿಗೆ ಮೇವಿನ ಕೊರತೆ ಸಹ ಇದೆ. ಕುಡಿಯುವ ನೀರಿನ ಬವಣೆ ಜಾಸ್ತಿ ಆಗಿದೆ. ಈಗಾಗಲೇ ಹೊಸನಗರ ತಾಲ್ಲೂಕಿನಲ್ಲಿ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಹೊಸನಗರ 5343 ಹೆಕ್ಟೇರ್ ಭತ್ತ, 265 ಹೆಕ್ಟೇರ್ ಜೋಳ, ತೀರ್ಥಹಳ್ಳಿಯಲ್ಲಿ 7156 ಹೆಕ್ಟೇರ್ ಭತ್ತ, ಸಾಗರ 8913 ಹೆಕ್ಟೇರ್ ಮಳೆಯಾಧಾರಿತ ಜಮೀನು, 1598 ಹೆಕ್ಟೇರ್ ನೀರಾವರಿ ಬೆಳೆ, 1723 ಹೆಕ್ಟೇರ್ ಜೋಳದ ಬೆಳೆ ಹಾಗೂ ಜಿಲ್ಲಾದ್ಯಂತ ಶೇ 33% ಕ್ಕಿಂತ ಅತಿಹೆಚ್ಚು ಬರಗಾಲವಿದ್ದು, ಬೆಳೆಗಳು ಶೇಕಡವಾರು ನಾಶವಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ನಮ್ಮ ಪ್ರಶ್ನೆ ಸಮರ್ಪಕವಾಗಿ ಆಯಾ ಗ್ರಾಮಗಳ ಖುದ್ದು ಭೇಟಿ ನೀಡಿ ವರದಿ ತಯಾರು ಮಾಡುವ ಪ್ರಕ್ರಿಯೆ ನಡೆದಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಾಗಿದೆ. ಜಿಲ್ಲೆಯಾದ್ಯಂತ ಅಡಿಕೆ ಮತ್ತು ಇತರ ಸಾಂಬಾರು ಬೆಳೆಗಳು ನೀರಿಲ್ಲದೆ ಬೆಳೆ ಶೇ. 40 ಕ್ಕೆ ಇಳಿಕೆಯಾಗಿದೆ. ಅದರ ಪೂರ್ಣ ವರದಿ ನೀಡಿಲ್ಲ ಹಾಗೂ ರೈತರು ಬೆಳೆದಿರುವ ಸಾಂಬಾರು ಬೆಳೆ, ಇತರೆ ಬೆಳೆಗಳು ಬರದಲ್ಲಿ ನಾಶ ಹೊಂದಿರುತ್ತದೆ.

ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು, ಈ ರಾಜ್ಯದ ಮುಖ್ಯಮಂತ್ರಿಗಳು ಬರಗಾಲ ಇದ್ದರೂ ನೃತ್ಯ ಮಾಡುವಲ್ಲಿ ಕಾಲಕಳೆಯುತ್ತಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಮಲೆನಾಡಿನ ಮುಖ್ಯ ಭಾಗವಾದ ಶಿವಮೊಗ್ಗ ಜಿಲ್ಲೆಯ ಸಮಗ್ರ ವರದಿಯನ್ನು ತರಿಸಲು ಜಂಟಿ ನೇತೃತ್ವದಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿಕೊಂಡು ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಕ್ತ ಆದೇಶ ನೀಡಲು ಒತ್ತಾಯಿಸುತ್ತೇವೆ.

ಪ್ರತಿಭಟನೆಯಲ್ಲಿ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್,ಜಿಲ್ಲಾ ಜೆಡಿಎಸ್ ಮುಖಂಡ ಆರ್.ಎನ್.ಮಂಜುನಾಥ, ದೂನ ರಾಜು (ಸೋಮಶೇಖರ), ಮಲ್ಲೇಶ್ ಆಲವಳ್ಳಿ, ಹೊಳೆಯಪ್ಪಗೌಡ, ಕುಕ್ಕಳಲೇ ಯೋಗೇಂದ್ರ, ಅಣ್ಣಪ್ಪ, ನಾಗರಾಜ, ಮಸರೂರು ಈಶ್ವರಪ್ಪ, ಗಣೇಶ ಹೊಸಮನೆ, ಮೇಲೋಜಿರಾವ್, ರೇಣುಕಪ್ಪ ನೆವಟೂರು ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!