ಬಹು ವರ್ಷಗಳ ಬೇಡಿಕೆ ಈಡೇರಿಕೆ ; ಇಂದಿನಿಂದ ಅರಸಾಳುವಿನಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ

0 58

ರಿಪ್ಪನ್‌ಪೇಟೆ : ಹೊಸನಗರ, ರಿಪ್ಪನ್‌ಪೇಟೆ, ಹುಂಚ, ಕೋಣಂದೂರು, ನಿಟ್ಟೂರು, ಯಡೂರು, ಮಾಸ್ತಿಕಟ್ಟೆ, ನಗರ, ರಾಮಚಂದ್ರಪುರ, ಹೊಂಬುಜ, ಕೋಡೂರು, ಸೂಡೂರು, ಚಿನ್ನಮನೆ, ನಗರ ರೋಡ್ ಹೀಗೆ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರು ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು.

ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ರಿಪ್ಪನ್‌ಪೇಟೆ, ಅರಸಾಳು ಗ್ರಾಮದ ನಾಗರಿಕರು ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಹಾಗೆಯೇ ರಾಜ್ಯಮಟ್ಟದ ದಿನಪತ್ರಿಕೆಗಳು, ಟಿ. ವಿ.ಚಾನೆಲ್ ಗಳು ಸೇರಿದಂತೆ ಸ್ಥಳೀಯ ವೆಬ್ ನ್ಯೂಸ್ ಗಳು, ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಹಲವಾರು ಬಾರಿ ಸುದ್ದಿಗಳನ್ನು ಪ್ರಸಾರ ಮಾಡಿತ್ತು ಹಾಗೂ ಈ ವಿಷಯವನ್ನು ಸಂಸದರಾದ ಬಿ.ವೈ ರಾಘವೇಂದ್ರ ಹಾಗೂ ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಆರಗ ಜ್ಞಾನೇಂದ್ರ, ಮತ್ತು ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪ ರವರ ಗಮನಕ್ಕೂ ತರಲಾಗಿತ್ತು. ಸಂಸದರ ವಿಶೇಷ ಪ್ರಯತ್ನದಿಂದ ಇಂದಿನಿಂಗ ದಿನಾ ನಾಲ್ಕು ಮುಖ್ಯ ರೈಲುಗಳು ಈ ನಿಲ್ದಾಣಗಳಲ್ಲಿ ನಿಲ್ಲಲಿವೆ.

ವೇಳಾಪಟ್ಟಿ ಹೀಗಿದೆ:

ಸಂಜೆಯ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು ಅರಸಾಳು ನಿಲ್ದಾಣದಲ್ಲಿ ಸಂಜೆ 04:03 ಕ್ಕೆ ತಲುಪಲಿದೆ.

ಬೆಳಗಿನ ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು, ಅರಸಾಳು ನಿಲ್ದಾಣದಲ್ಲಿ 11:48 ಕ್ಕೆ ತಲುಪಲಿದೆ.

ರಾತ್ರಿಯ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು, ಅರಸಾಳು ನಿಲ್ದಾಣದಲ್ಲಿ ರಾತ್ರಿ 10:05 ಕ್ಕೆ ತಲುಪಲಿದೆ.

ಮುಂಜಾನೆಯ ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 5.45 ಕ್ಕೆ ತಲುಪಲಿದೆ. ಇದು ಸದ್ಯದ ಮಾಹಿತಿ. ಪರಿಪೂರ್ಣ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆಯು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದೆ.

ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು.

Leave A Reply

Your email address will not be published.

error: Content is protected !!