ವಿಜಯದಶಮಿ ಉತ್ಸವ | ವಿದ್ಯಾಭ್ಯಾಸ ಸಂಶೋಧನೆಗಳಿಂದ ಜ್ಞಾನಸಂಪತ್ತು ವರ್ಧಿಸಲಿ ; ಹೊಂಬುಜ ಶ್ರೀಗಳು

0 119

ರಿಪ್ಪನ್‌ಪೇಟೆ : ಸರ್ವತ್ರ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಪ್ರತಿಯೋರ್ವರು ವಿದ್ಯಾವಂತರಾಗಿ, ಸದಾ ಅಧ್ಯಯನ ಶೀಲರಾಗಿ ಜ್ಞಾನಸಂಪತ್ತು ವರ್ಧಿಸುವಂತಾಗಲೆಂದು ಹೊಂಬುಜದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ವಿಜಯದಶಮಿ ಸುದಿನದಂದು ಪ್ರವಚನದಲ್ಲಿ ತಿಳಿಸಿದರು.

‘ವಿಜಯಿ ಭವಿ’ ಎಂದು ಭಕ್ತರನ್ನು ಹರಸಿ, ಉತ್ತಮ ಬಾಳ್ವೆಯ ಕನಸು ನನಸಾಗಿ ಆಧ್ಯಾತ್ಮಿಕ ಚಿಂತನೆಯ ಶ್ರೀಫಲ ಎಲ್ಲೆಡೆ ದುಃಖ ಸಂಕಷ್ಟಗಳನ್ನು ಪರಿಹರಿಸಲೆಂದರು.

ಭಕ್ತರ ನಿರಂತರ ಸಹಕಾರ ಮಠದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿದ್ದು, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ಧಾರ, ಕ್ಷೇತ್ರರಕ್ಷಕ ಶ್ರೀ ಕ್ಷೇತ್ರಪಾಲ ಸ್ವಾಮಿ ಬಸದಿ ಹಾಗೂ ಮಠದ ಆವರಣದಲ್ಲಿರುವ ಚಂದ್ರಶಾಲೆಯ ಜೀರ್ಣೋದ್ದಾರ ಕಾರ್ಯಗಳು ನಡೆದಿವೆ. ಈ ಹಿಂದೆ ಎಲ್ಲ ಕಾರ್ಯದಲ್ಲಿ ಭಕ್ತರ ಸಹಕಾರವನ್ನು ಸ್ಮರಿಸುತ್ತಾ ಮುಂದೆಯೂ ಎಲ್ಲರ ಸಹಕಾರವು ಹೀಗೆ ಮುಂದುವರೆಯಲಿ. ಜಗತ್ತಿನಲ್ಲಿ ಸುಖ-ಶಾಂತಿ-ಸಮೃದ್ಧಿ ವಾತಾವರಣ ಉಂಟಾಗಲಿ. ವಿಜಯದಶಮಿಯಂದು ಎಲ್ಲರೂ ಸತ್ಕಾರ್ಯವನ್ನು ಮಾಡಲು ಸಂಕಲ್ಪ ಮಾಡಬೇಕೆಂದು ಹರಸಿದರು.
ಐತಿಹಾಸಿಕ ಅತಿಶಯ ಶ್ರೀಕ್ಷೇತ್ರ ಹೊಂಬುಜದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಸಹಿತ ಚತುಃರ್ವಿಂಶತಿ ತೀರ್ಥಂಕರರಿಗೆ ಆಗಮೋಕ್ತ ಪದ್ಧತಿಯಂತೆ ಪೂಜೆ, ಪ್ರಾರ್ಥನೆ ಸಮರ್ಪಿಸಲಾಯಿತು.

ಬನ್ನಿ ಮಂಟಪದಲ್ಲಿ ಶಮಿವೃಕ್ಷ ಪೂಜೆ :
ಪರಂಪರಾನುಗತವಾಗಿ ಆಚರಿಸುವ ಶಮೀ ವೃಕ್ಷ ಪೂಜೆಯನ್ನು ಶ್ರೀ ಕ್ಷೇತ್ರದ ಉತ್ಸವ ಮೂರ್ತಿಯ ಸಾನಿಧ್ಯದಲ್ಲಿ ಪೂಜ್ಯಶ್ರೀಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಶ್ರೀಕ್ಷೇತ್ರದಿಂದ ಬನ್ನಿ ಮಂಟಪದವರೆಗೆ ಸಾಲಂಕೃತ ಮೆರವಣಿಗೆಯಲ್ಲಿ ಐಶ್ವರ್ಯ ಆನೆ, ಮಾನವಿ ಕುದುರೆ ಸಹಿತ ವಾದ್ಯಗೋಷ್ಠಿಯೊಂದಿಗೆ ಊರಪರವೂರ ಭಕ್ತರು ವಿಜಯದಶಮಿ ಪ್ರಯುಕ್ತ ಶಮೀ ಪತ್ರಗಳನ್ನು ಶ್ರೀಗಳಿಂದ ಸ್ವೀಕರಿಸಿದರು.

Leave A Reply

Your email address will not be published.

error: Content is protected !!