ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರಗ ಜ್ಞಾನೇಂದ್ರರನ್ನ ಬಂಧಿಸುವಂತೆ ಕಾಂಗ್ರೆಸ್ ಮನವಿ

0 445

ಶಿವಮೊಗ್ಗ: ಕಾಡುಕೋಣ,ಕಾಡುಜಿಂಕೆ, ಅಕ್ರಮ ನಾಡು ಬಂದೂಕು, ಶ್ರೀಗಂಧ ಸಂಗ್ರಹಣೆ ಮಾಡಿದ ಆರೋಪಿಗಳನ್ನು ರಕ್ಷಿಸಲು ಶಾಸಕ ಆರಗ ಜ್ಞಾನೇಂದ್ರರವರು ತನಿಖೆಗೆ ಹೋದ ಅರಣ್ಯಾಧಿಕಾರಿಗಳಿಗೆ ದೌರ್ಜನ್ಯ ದರ್ಪದಿಂದ ಬೆದರಿಸಿದ್ದು, ಶಾಸಕರನ್ನು ಕೂಡಲೇ ಬಂಧಿಸುವಂತೆ ಶಿವಮೊಗ್ಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವನ್ಯಜೀವಿ ವಿಭಾಗ ಇವರಿಗೆ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.


ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಕಟ್ಟೆ ಬಳಿ ಇರುವ ಬಸವನಗದ್ದೆ ಗ್ರಾಮದಲ್ಲಿ ಪ್ರಸನ್ನ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲ್ಪಟ್ಟಂತಹ ಹತ್ತಾರು ಕಾಡುಕೋಣದ ಕೊಂಬುಗಳು, ಹತ್ತಾರು ಜಿಂಕೆ ಕೊಂಬುಗಳು, ನಾಡಬಂದೂಕು ಹಾಗೂ ಗಂಧದ ತುಂಡುಗಳು ಮನೆಯ ನೆಲಮಾಳಿಗೆಯಲ್ಲಿ ಸಂಗ್ರಹಿಸಲ್ಪಟ್ಟಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಮನೆ ತಪಾಸಣೆ ಮಾಡಿದಾಗ ಕಾಡುಪ್ರಾಣಿಗಳ ಕೊಂಬು ಮತ್ತಿತರ ವಸ್ತುಗಳು ದೊರೆತಿದ್ದು, ಮನೆ ಮಾಲಿಕ ಪ್ರಸನ್ನ ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಗೂಂಡಾ ವರ್ತನೆ ಪ್ರದರ್ಶನ ಮಾಡಿದ್ದಾರೆ.

ಅಧಿಕಾರಿಗಳಿಗೆ ಆರೋಪಿಯನ್ನು ಬಂಧಿಸದಂತೆ ತಾಕೀತು ಮಾಡಿದ್ದಾರೆ. ಆರೋಪಿ ಪ್ರಸನ್ನರವರ ಆರೋಗ್ಯ ಸರಿಯಿಲ್ಲ ಮತ್ತು ಅವರು ಮುಗ್ಧರು, ಕಾಡುಪ್ರಾಣಿಗಳ ಹಂತಕರು ಅಲ್ಲ ಎಂದು ಸಮಾಜಾಯಿಷಿ ಕೊಟ್ಟಿದ್ದಾರೆ. ಎಫ್‌ಐಆರ್ ದಾಖಲಿಸುವ ಮೊದಲೇ ಬಿ ರೀಪೋರ್ಟ್ ಕೊಟ್ಟಿದ್ದಾರೆ. ಇವರ ವರ್ತನೆ ನೋಡಿದರೆ, ಮುಂದಿನ ದಿನಗಳಲ್ಲಿ ಕಾಡುಪ್ರಾಣಿಗಳ ಬೇಟೆಗಾರರು ಯಾವುದೇ ಭಯವಿಲ್ಲದೇ ಪ್ರಾಣಿಗಳನ್ನು ಕೊಂದು ಅದರ ಮಾಂಸ ಮತ್ತು ಅಂಗಗಳನ್ನು ಮಾರಿಕೊಳ್ಳುವ ದಿನಗಳು ದೂರ ಇಲ್ಲ. ಈಗಾಗಲೇ ಕಾಡು ನಾಶವಾಗಿ ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಅರಣ್ಯದ ಸಂಪತ್ತುಗಳಾದ ಅಪರೂಪದ ಪ್ರಾಣಿಗಳನ್ನು ಕೊಂದು ಜೀವನ ನಿರ್ವಹಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಳ್ಳಿ ಕೆರೆಗಳಿಗೆ ನೀರು ಕುಡಿಯುವ ಸಲುವಾಗಿ ಪ್ರಾಣಿಗಳು ಬಂದಾಗ ಅದನ್ನು ಭೇಟೆಯಾಡಿ ಕೊಲ್ಲುವ ಸಂಭವವಿದ್ದು, ಅರಣ್ಯಾಧಿಕಾರಿಗಳು ಈ ಕೂಡಲೇ ಯಾವುದೇ ಮುಲಾಜಿಗೆ ಒಳಗಾಗದೆ ಪ್ರಾಣಿಗಳ ಕೊಂಬು ಮತ್ತು ಅಂಗಗಾಗಳನ್ನು ಸಂಗ್ರಹಿಸಿದಂತಹ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಮತ್ತು ಆರೋಪಿಗಳನ್ನು ರಕ್ಷಿಸುವಲ್ಲಿ ಸಫಲರಾದ ತೀರ್ಥಹಳ್ಳಿ ಶಾಸಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ, ಗೃಹಮಂತ್ರಿಗಳು, ಅರಣ್ಯ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ಕೆಪಿಸಿಸಿ ಕೆ. ಕಾರ್ಯದರ್ಶಿ ದೇವೇಂದ್ರಪ್ಪ, ನಾರ್ಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಪಾಲಿಕೆಯ ವಿಪಕ್ಷ ನಾಯಕಿ ಮೆಹಕ್ ಷರೀಪ್, ಎಸ್.ಎನ್.ಮೂರ್ತಿ, ಪರ್ವಿಜ್ ಅಹಮ್ಮದ್, ಮೊಹಮ್ಮದ್ ಹುಸೇನ್, ಎಸ್.ಎ. ಬಾಬು, ಸಂದೀಪ್, ಮಾನಸ, ಬಾಲಾಜಿ, ಷಾಮೀರ್‌ಖಾನ್, ಯಮುನಾ ರಂಗೇಗೌಡ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!