23.2 C
Shimoga
Sunday, November 27, 2022

ಅಂತೂ ಉಡುಪಿ ಪೊಲೀಸರಿಗೆ ಸಿಕ್ಕಿ ಬಿದ್ರು ಶಾಲಾ – ಕಾಲೇಜುಗಳಲ್ಲಿ ಕಳ್ಳತನ ಮಾಡಿದ್ದ ಡಕಾಯಿತರು !

ಹೊಸನಗರ: ಹೊಸನಗರ ತಾಲೂಕಿನ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು, ನಗರದ ಎರಡು ಶಾಲೆ ಮತ್ತು ಅಮೃತ (ಗರ್ತಿಕೆರೆ) ಕಾಲೇಜಿನಲ್ಲಿ ರಾತ್ರಿ ವೇಳೆ ಬೀಗ ಮುರಿದು ಹಣದೋಚಿದ್ದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ ಕಾಲೇಜುಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ – ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಸರಣಿ ಪ್ರಕರಣಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ಐ.ಪಿ.ಎಸ್ ರವರ ಆದೇಶದಂತೆ ಅನಂತಪದ್ಮನಾಭ, ಸಿ.ಪಿ.ಐ ಬ್ರಹ್ಮಾವರರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಸದರಿ ತಂಡದ ಮಧು ಬಿ.ಇ ಪಿ.ಎಸ್.ಐ ಕೋಟ ಠಾಣೆ ಹಾಗೂ ಸಿಬ್ಬಂದಿಗಳು ಆರೋಪಿ ಪತ್ತೆಗೆ ಎಲ್ಲ ಶಾಲಾ ಕಾಲೇಜುಗಳ ಮಾಹಿತಿ, ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಆಧರಿಸಿ, ಸಿಸಿ ಕ್ಯಾಮೆರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ವ್ಯಕ್ತಿಗಳು ಹಾಗೂ ವಾಹನದ ಮಾಹಿತಿ ಬಗ್ಗೆ ನಿಗಾವಹಿಸಿದ್ದರು.

ಇಂದು ಕೋಟ ಠಾಣಾ ಸರಹದ್ದಿನ ಆವರ್ಸೆ ಗ್ರಾಮದ ಬಳಿ ಬೈಕ್ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕುಮಾರಸ್ವಾಮಿ (59) ತಂದೆ ಮುರಗೇಶ ವಾಸ ಕಲ್ಲುಕುಡಚೀ, ಸೇಲಂ, ತಮಿಳುನಾಡು ವಿಚಾರಿಸಿದೀಗ ಈತನ ಮೇಲೆ ಈ ಹಿಂದೆ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣದಲ್ಲಿ ಹಳೆ ಆರೋಪಿಯಾಗಿದ್ದು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟು 2014 ರಿಂದ 2021 ರವರೆಗೆ ಸುಮಾರು 7 ವರ್ಷಗಳ ಕಾಲ ಕಾರವಾರ ಜೈಲಿನಲ್ಲಿದ್ದು ಶಿಕ್ಷೆಯನ್ನು ಅನುಭವಿಸಿದ್ದಾನೆ.

ಜಾಹೀದ ಸಿನಾನ್ (32) ತಂದೆ: ಮಹಮ್ಮದ್, ವಾಸ 525(ಎ), ಹೆಚ್ ಕೆ ಮಂಜೀಲ್, ಎಸ್.ಎಸ್ ರೋಡ್ ಹೆಜಮಾಡಿ ಗ್ರಾಮ, ಕಾಪು ತಾಲೂಕು ಉಡುಪಿ ನಿವಾಸಿಯಾಗಿದ್ದು, ಈತನು ಕಳ್ಳತನ ನಡೆಸಲು ಸಂತೆಕಟ್ಟೆ ಉಡುಪಿ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು ಇನ್ನೊಬ್ಬ ತಮಿಳುನಾಡಿನ ಆರೋಪಿ ಕುಮಾರಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನವನ್ನು ಮಾಡುತ್ತಿದ್ದನು.
ಕುಮಾರಸ್ವಾಮಿ 2021ರಲ್ಲಿ ಕಾರವಾರ ಜೈಲಿನಿಂದ ಬಿಡುಗಡೆಯಾದ ನಂತರ ಹೆಜಮಾಡಿಯ ಜಾಹೀದ್ ಸಿನಾನ್ ಜೊತೆ ಸೇರಿ ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ- ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿರುತ್ತಾರೆ.
ಈ ಕುಖ್ಯಾತ ಕಳ್ಳರು ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿರುತ್ತಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಠಾಣೆಯಲ್ಲಿ 2 ಪ್ರಕರಣ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ರಿಪ್ಪನ್‌ಪೇಟೆ, ನಗರ ಠಾಣೆಗಳಲ್ಲಿ 6 ಪ್ರಕರಣ, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳನ್ನು ಪೊಲೀಸರು ಆರೋಪಿಗಳನ್ನು ಬಂಧಿಸಿ ಈ ಮೇಲಿನ ಎಲ್ಲ ಪ್ರಕರಣಗಳನ್ನು ಭೇದಿಸಿರುತ್ತಾರೆ.

ಈ ಆರೋಪಿಗಳಿಂದ 1 ಬೈಕು 2 ಮೊಬೈಲ್ ಪೋನ್ ಹಾಗೂ 10,000 ನಗದನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿ.ಎಸ್‌‌‌‌‌‌.ಐ ಪುಷ್ಪಾ, ಪ್ರೊ. ಪಿ.ಎಸ್‌‌‌‌.ಐ. ನೂತನ್ ಡಿ. ಈ , ಕೋಟ ಪೊಲೀಸ್ ಠಾಣಾ ಎ.ಎಸ್‌‌‌‌.ಐ. ರವಿ ಕುಮಾರ್‌‌‌, ಸಿಬ್ಬಂದಿಯವರಾದ ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಪ್ರಸನ್ನ, ಮೋಹನ್ ಕೊತ್ವಾಲ್, ವಿಜೆಯೇಂದ್ರ ಮತ್ತು ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ ನಾಯಕ ಹಾಗೂ ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ವಿಭಾಗದ ಶಿವಾನಂದ, ದಿನೇಶ, ನಿತಿನ್ ರವರುಗಳು ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು‌. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ರವರು ತಂಡವನ್ನು ಅಭಿನಂದಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!