ಅಕಸ್ಮಾತ್ ಮುಸ್ಲಿಂ ಯುವಕ ಕೊಲೆಯಾಗಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರು ಬರುತ್ತಿದ್ದರು ; ಯತ್ನಾಳ್

0
365

ಶಿವಮೊಗ್ಗ: ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಅಂತ್ಯ ಯಾವಾಗ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗದಲ್ಲಿ ಹಿಂದೂ ಯುವಕನ ಕೊಲೆಯಾಗಿರುವುದು ಹಿಂದೂ ಸಮಾಜವನ್ನು ತಲ್ಲಣ ಉಂಟುಮಾಡಿದೆ. ರಾಜ್ಯದಲ್ಲಿ ಸುಮಾರು 30ಕ್ಕೂ ಹೆಚ್ಚು ಹಿಂದೂ ಯುವಕರು ಕೊಲೆಯಾಗಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ ನಿಜ. ಆದರೆ, ಅಷ್ಟು ಸಾಲದು ಆರೋಪಿಗಳಿಗೆ ಗಲ್ಲುಶಿಕ್ಷೆಯಾಗುವಂತಹ ಸಾಕ್ಷ್ಯಗಳನ್ನು ಸಿದ್ಧಪಡಿಸಬೇಕು ಎಂದರು.

ಹಿಂದೂ ಕಾರ್ಯಕರ್ತರ ನೈತಿಕ ಬಲವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಇದೆ. ಇದು ಅಂತರರಾಷ್ಟ್ರೀಯ ಮಟ್ಟಕ್ಕೆ ಚಾಚಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಕೆ.ಜಿ. ಹಳ್ಳಿ ಪ್ರಕರಣ, ಮಂಗಳೂರು ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳು ನಮ್ಮ ಮುಂದಿದೆ. ಈ ಎಲ್ಲ‌ ಘಟನೆಗಳು ಹಿಂದೂ ಸಮಾಜದ ರಕ್ಷಣೆಯ ಬಗ್ಗೆಯೇ ಪ್ರಶ್ನೆ ಮಾಡುವಂತಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಯುವಕರ ಹತ್ಯೆಯಾಗಿದ್ದರೂ ಕೂಡ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಸರಿಯಾದ ಕ್ರಮವನ್ನೇ ತೆಗೆದುಕೊಳ್ಳಲಿಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಮ್ಮದೇ ಸರ್ಕಾರ ಇದ್ದರೂ ಕೂಡ ನಾನು ಈ ಮಾತನ್ನ ಒತ್ತಿ ಹೇಳುತ್ತೇನೆ ಎಂದರು.

ಕಾಂಗ್ರೆಸ್ ನಾಯಕರು ಯಾರು ಸಹ ಹತ್ಯೆಯಾದ ಹರ್ಷನ ಮನೆಗೆ ಬಂದು ಸಾಂತ್ವನ ಹೇಳಲಿಲ್ಲ. ಅಕಸ್ಮಾತ್ ಮುಸ್ಲಿಂ ಯುವಕ ಕೊಲೆಯಾಗಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಬರುತ್ತಿದ್ದರು. ಹೀಗೆ ಸುಮ್ಮನಿರುತ್ತಿದ್ದರೇ? ಇದು ಕಾಂಗ್ರೆಸ್‌ನ ಓಲೈಕೆ ಪ್ರಶ್ನೆಯಲ್ಲದೇ ಮತ್ತೇನು ಎಂದರು.

ಹಿಂದೂ ಸಮಾಧಿಗಳ ಮೇಲೆ ನಾವು ರಾಜಕೀಯ ಮಾಡುವುದಿಲ್ಲ. ಹಿಂದುಗಳ ರಕ್ಷಣೆಯೇ ನಮ್ಮ ಗುರಿ. ಆದರೆ, ಕಾನೂನು ವ್ಯವಸ್ಥೆ ಮತ್ತಷ್ಟು ಗಟ್ಟಿಯಾಗಬೇಕು. ಇಂತಹ ಪ್ರಕರಣಗಳು ಮತ್ತೆಂದೂ ನಡೆಯಬಾರದು. ಶಿವಮೊಗ್ಗದಲ್ಲಿ ಹಿಂದೂ ಯುವಕರ ಹತ್ಯೆಗೆ ಇದೇ ಕೊನೆಯಾಗಬೇಕು ಎಂದ ಅವರು, ಹಿಂದೂ ಸಮಾಜ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ. ಅವರ ರಕ್ಷಣೆಯ ಭಾರ ನಮ್ಮ ಸರ್ಕಾರದ್ದು ಎಂದರು.

ಸಚಿವ ಈಶ್ವರಪ್ಪನವರು ಗಟ್ಟಿಯಾಗಿ ಹಿಂದೂ ಸಮಾಜದ ರಕ್ಷಣೆಯಲ್ಲಿದ್ದಾರೆ. ಸದನದಲ್ಲಿ ಈ ಬಗ್ಗೆ ಸರ್ಕಾರವನ್ನ ಒತ್ತಾಯಿಸಲಾಗುವುದು ಮತ್ತು ಹರ್ಷ ಹತ್ಯೆಯ ಹಿಂದಿನ ಕೆಲವು ಮುಸ್ಲಿಂ ಸಂಘಟನೆಗಳ ನಿಷೇಧಕ್ಕೂ ಆಗ್ರಹ ಪಡಿಸಲಾಗುವುದು. ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಇಂತಹ ಘಟನೆಗಳು ನಡೆಯುತ್ತಿರುವುದು ಇನ್ನು ವಿಷಾದನೀಯ. ಇದು ಅಂತ್ಯವಾಗಬೇಕು ಎಂದರು.

ಪ್ರತ್ಯೇಕ ಕೋರ್ಟ್ ರಚನೆಯಾಗಬೇಕು :

ಹರ್ಷ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳ್ಳಬೇಕು. ಇದಕ್ಕಾಗಿ ಪ್ರತ್ಯೇಕ ಕೋರ್ಟ್ ರಚನೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ವಿರುದ್ಧದ ಹೇಳಿಕೆಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ಅವರು, ನಾವು ನಿಮ್ಮ ಸಹಾಯಕ್ಕೆ ಇದ್ದೇವೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here