ಅಖಾಡಕ್ಕೆ ಇಳಿದ ಜೆಡಿಎಸ್: ನಗರಸಭೆ ಚುನಾವಣೆಗೆ ಎಲ್ಲಾ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ನಿರ್ಧಾರ

0
249

ಚಿಕ್ಕಮಗಳೂರು : ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ವಿಧಾನಪರಿಷತ್ ಚುನಾವಣೆಯಲ್ಲಿ ಬ್ಯುಸಿ ಆಗಿರುವ ಬೆನ್ನಲ್ಲೇ ಜೆಡಿಎಸ್ ನಗರಸಭೆ ಚುನಾವಣೆ ಅಖಾಡಕ್ಕೆ ಧುಮುಕಿದೆ.

ನಗರಸಭೆಗೆ ಡಿ. 28ರಂದು ಚುನಾವಣೆ ನಡೆಯಲಿದ್ದು, ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿ ಹುರಿಯಾಳುಗಳನ್ನು ಅಣಿಗೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.

ಎಂ.ಜಿ.ರಸ್ತೆ ಗಣಪತಿ ದೇವಾಲಯದಲ್ಲಿ ಪಕ್ಷದ ಕಾರ್ಯಕರ್ತರ ಜೊತೆಗೂಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ಜನಹಿತ ದೃಷ್ಟಿಯಿಂದ ಜನಪ್ರತಿನಿಧಿಗಳ ಆಯ್ಕೆ ಮೂಲಕ ಸುಲಲಿತ ಆಡಳಿತ ನಡೆಯಬೇಕು ಎನ್ನುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಗದಿತ ಅವಧಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯಿಸಿದರು.

ಚಿಕ್ಕಮಗಳೂರು ನಗರಸಭೆಗೆ ಕಳೆದ 4 ವರ್ಷಗಳಿಂದ ಚುನಾವಣೆ ನಡೆಸದೆ ಮುಂದೂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರಿದಂತೆ ಎಂದು ವಿಷಾದಿಸಿದರು.

ನ್ಯಾಯಾಲಯ ಮಧ್ಯಪ್ರವೇಶಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ತಾಕೀತು ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.

ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ, ಪಕ್ಷದ ಕಾರ್ಯಕರ್ತರು ಮತದಾರರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಹಲವು ಜೆಡಿಎಸ್ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಕಾರ್ಯಕರ್ತರ ಬಲ ಇರುವವರೆಗೂ ಯಾವುದೇ ಮುಖಂಡರು ಪಕ್ಷ ತೊರೆದರೂ ಯಾವುದೇ ಹಾನಿಯಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜಪ್ಪ, ಜೆಡಿಎಸ್ ಮುಖಂಡ ತಿಮ್ಮಶೆಟ್ಟಿ, ನಗರಾಧ್ಯಕ್ಷ ಎ.ಸಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ನಗರಸಭಾ ಮಾಜಿ ಸದಸ್ಯ ದಿನೇಶ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here