ಶಿವಮೊಗ್ಗ: ನಿನ್ನೆ ರಾತ್ರಿ ಆಟೋ ಕಾಂಪ್ಲೆಕ್ಸ್ ನಲ್ಲಿ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತೆಗೆದಿದ್ದರಿಂದ ಪಕ್ಕದಲ್ಲೇ ರಿಪೇರಿಗೆಂದು ನಿಲ್ಲಿಸಿದ್ದ ಮೂರು ಕಾರು ಹಾಗೂ ಒಂದು ಬಸ್ ಹಾನಿಗೊಳಗಾಗಿದೆ.

ರಿಪೇರಿಗೆಂದು ನಿಲ್ಲಿಸಿದ ಕಾರು, ಬಸ್ಗಳಿಗೆ ಬೆಂಕಿ ತಗುಲಿದೆ. ನಿನ್ನೆ ಭಾನುವಾರ ಆದ ಕಾರಣ ಆಟೋ ಕಾಂಪ್ಲೆಕ್ಸ್ ನಲ್ಲಿ ಜನ ಸಂಚಾರ ವಿರಳವಾಗಿತ್ತು. ಹೀಗಾಗಿ ವಾಹನಗಳಿಗೆ ಬೆಂಕಿ ತಗುಲಿರುವ ವಿಚಾರ ಬೇಗ ತಿಳಿದಿಲ್ಲ. ಬಳಿಕ ಸ್ಥಳೀಯರು ಗಮನಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆಟೋ ಕಾಂಪ್ಲೆಕ್ಸ್ ನಲ್ಲಿ ಗ್ಯಾರೇಜ್ಗಳಿರುವುದರಿಂದ ರಿಪೇರಿಗೆಂದು ಕಾರು, ಬಸ್ಗಳು ಬರುತ್ತವೆ. ಹೀಗೆ ಬಂದ ವಾಹನಗನ್ನು ಗ್ಯಾರೇಜ್ ಗಳ ಮುಂದೆ ನಿಲ್ಲಿಸಲಾಗಿರುತ್ತದೆ. ಹೀಗೆ ನಿಂತಿದ್ದ ವಾಹನಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗಿದೆ.

ಈ ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



