23.2 C
Shimoga
Sunday, November 27, 2022

ಅಡಿಕೆಗೆ ಎಲೆಚುಕ್ಕಿ ರೋಗ ; ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ! ಮಲೆನಾಡಿನಲ್ಲಿ ಇದು ಎರಡನೇ ಪ್ರಕರಣ

ಶೃಂಗೇರಿ : ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ತೀವ್ರಗೊಂಡಿದ್ದು, ತನ್ನ ಅಡಿಕೆ ತೋಟಕ್ಕೂ ರೋಗ ಹರಡಿದ್ದರಿಂದ ಬೇಸತ್ತ ಯುವ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ವರದಿಯಾಗಿದೆ.

ತಾಲೂಕಿನ ತೆಕ್ಕೂರು ಗ್ರಾಮ ಸಮೀಪದ ಕೊಡತಲು ಗ್ರಾಮದ ನಿವಾಸಿ ಅಭಿಲಾಷ್ (35) ಆತ್ಮಹತ್ಯೆಗೆ ಶರಣಾದ ಯುವ ರೈತನಾಗಿದ್ದು, ಇವರು ಶೃಂಗೇರಿ ಪಟ್ಟಣದ ಖಾಸಗಿ ಬ್ಯಾಂಕ್‍ ಒಂದರಲ್ಲಿ 3.50 ಲಕ್ಷ ರೂ. ಸಾಲ ಮಾಡಿದ್ದರೆಂದು ತಿಳಿದು ಬಂದಿದೆ.

ಅಭಿಲಾಷ್ ಅವರು ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು, ಇದಕ್ಕಾಗಿ ಬ್ಯಾಂಕ್ ಸೇರಿದಂತೆ ಹಲವೆಡೆ ಕೈ ಸಾಲ ಮಾಡಿಕೊಂಡಿದ್ದರೆನ್ನಲಾಗಿದ್ದು, ತಮ್ಮ ಅಡಿಕೆ ತೋಟಕ್ಕೆ ಎಲೆ ಚುಕ್ಕಿ ರೋಗ ಹರಡಿದ್ದರಿಂದ ತೀವ್ರ ನೊಂದಿದ್ದ ಅವರು ಗುರುವಾರ ಬೆಳಗ್ಗೆ ರೋಗ ನಿಯಂತ್ರಣಕ್ಕೆಂದು ಮನೆಯಲ್ಲಿ ತಂದಿಟ್ಟಿದ್ದ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅ.7 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರಿನ ರೈತ ಕೃಷ್ಣಪ್ಪಗೌಡ (60) ಎಂಬುವವರು ಇದೇ ಕಾರಣಕ್ಕಾಗಿ ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ಮೊದಲ ಪ್ರಕರಣವಾಗಿತ್ತು.

ಮಲೆನಾಡು ಭಾಗದಲ್ಲಿ ಅಡಿಕೆ ಹಳದಿ ರೋಗದಿಂದ ತತ್ತರಿಸಿದ್ದ ರೈತರಿಗೆ ಇತ್ತೀಚೆಗೆ ಅಡಿಕೆ ಎಲೆ ಚುಕ್ಕಿ ರೋಗ ತೀವ್ರ ಆತಂಕ ಮೂಡಿಸಿದೆ. ರೋಗ ಹತೋಟಿಗೆ ಬಾರದಿರುವುದರಿಂದ ಸಾಲ ಸೂಲ ಮಾಡಿ ಅಡಿಕೆ ತೋಟ ಮಾಡಿರುವ ರೈತರು ದಿಕ್ಕುತೋಚದಂತಾಗಿದ್ದಾರೆ. ಸರ್ಕಾರ ಕೂಡ ಈ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ನೊಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ಗುರುವಂದನಾ ಕಾರ್ಯಕ್ರಮ :

ಶಿವಮೊಗ್ಗ: ತುಂಗಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ (ರಿ.) ತುಂಗಾ ಪ್ರೌಢಶಾಲೆ ವಿದ್ಯಾನಗರ ಮೊದಲನೇ ತಿರುವು ಶಿವಮೊಗ್ಗ ಇಲ್ಲಿನ ವಿದ್ಯಾರ್ಥಿಗಳು ಒಟ್ಟಾಗಿ ದಿನಾಂಕ:12-11-2022 ರಂದು ಶ್ರೀ ಶಿವನಾಗರ ದೇವಾಲಯ ಪ್ರಾಂಗಣ ವಿದ್ಯಾನಗರ ಶಿವಮೊಗ್ಗ ಇಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತುಂಗಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಿ ಯಶಸ್ವಿಗೊಳಿಸಲು ಹಳೆ ವಿದ್ಯಾರ್ಥಿಗಳ ಸಂಘ ಕೋರಿದೆ. 

ಅಂದು ಅಗಲಿದ ಶಿಕ್ಷಕರಿಗೆ ಸಂತಾಪ ಸೂಚನೆ ಕಾರ್ಯಕ್ರಮದ ಉದ್ಘಾಟನೆ, ಸನ್ಮಾನ ಕಾರ್ಯಕ್ರಮ, ನಾಮಫಲಕ ಅನಾವರಣ, ಹಿರಿಯ ವಿದ್ಯಾರ್ಥಿಗಳ ಅನಿಸಿಕೆ, ಮುಖ್ಯ ಅತಿಥಿಗಳ ಭಾಷಣ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳೆಗ್ಗೆ 10 ಗಂಟೆಗೆ  ಕಾರ್ಯಕ್ರಮ ಪ್ರಾರಂಭವಾಗಲಿದೆ. 

ಶಾಲೆಯೆಂದರೆ ಶಿಕ್ಷಣವನ್ನಷ್ಟೆ ಅಲ್ಲ ಜ್ಞಾನದ ಬುತ್ತಿಯ ಜೊತೆಗೆ ಬದುಕಿನ ವಿವಿಧ ಆಯಾಮಗಳ ಅನುಭೂತಿಯನ್ನು ನೀಡುವ ಮಂದಿರವಾಗಿದ್ದು, ಈ ದಿವ್ಯ ದೇಗುಲಕ್ಕೆ ವಂದನೆ ಸಲ್ಲಿಸುವುದರ ಜೊತೆಗೆ ವಿದ್ಯೆ ಕಲಿಸಿದ ಗುರುಗಳನ್ನು ನಮಿಸುವ ಸಂದರ್ಭ ಮತ್ತು ಅವಕಾಶ ಇದಾಗಿದ್ದು, ತುಂಗಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿರುವ ಈ ಗುರು ವಂದನಾ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ವಿದ್ಯಾರ್ಥಿಗಳು ತಮ್ಮ ಸಂಪರ್ಕದಲ್ಲಿರುವ ಸಹಪಾಠಿ ಮಿತ್ರರನ್ನು ಜೊತೆಗೂಡಿಸಿಕೊಂಡು ಭಾಗವಹಿಸುವಂತೆ ಹಿರಿಯ ವಿದ್ಯಾರ್ಥಿಗಳು ಕೋರಿದ್ದಾರೆ. 

ಹೆಚ್ಚಿನ ವಿವರಗಳಿಗಾಗಿ: ತುಂಗಾ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘ ವಿದ್ಯಾನಗರ. 90364 02354 ಸಂಪರ್ಕಿಸಿ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!