ಅಡಿಕೆ ತೋಟಕ್ಕೆ ಎಲೆಚುಕ್ಕೆ ರೋಗ, ಕಂಗಾಲಾದ ರೈತ: ಸೂಕ್ತ ಪರಿಹಾರ ನೀಡುವಂತೆ ಆರ್‌.ಎಂ. ಮಂಜುನಾಥಗೌಡ ಆಗ್ರಹ

0
870

ಹೊಸನಗರ: ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಈ ಬಾರಿ ಎಲೆಚುಕ್ಕೆ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಆರ್ಥಿಕವಾಗಿ ಕಂಗಾಲಾಗಿದ್ದು, ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕಾಂಗ್ರೆಸ್ ಮುಖಂಡ ಡಾ.ಆರ್.ಎಂ.ಮಂಜುನಾಥಗೌಡ ಆಗ್ರಹಿಸಿದರು.

ಅವರು ಮಂಗಳವಾರ ತಾಲೂಕಿನ ನಿಟ್ಟೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಎಲೆಚುಕ್ಕೆ ರೋಗ ಪೀಡಿತ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಅಡಿಕೆ ಬೆಳೆಗಾರರು ಸರ್ಕಾರಕ್ಕೆ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದು, ಅಡಿಕೆ ಉಪ ಉತ್ಪನ್ನಗಳ ಮೂಲಕ ಒಟ್ಟಾರೆ ಶೇ.28ರಷ್ಟು ತೆರಿಗೆ ಸರಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತಿದೆ. ಅಲ್ಲದೇ, ಬೋರ್ಡೋ ದ್ರಾವಣ ಸಿಂಪಡಿಸಲು ಬ್ಯಾರಲ್‌ ಒಂದಕ್ಕೆ ಕನಿಷ್ಟ 1 ಸಾವಿರ ರೂ. ಕೂಲಿ ನೀಡಬೇಕಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಲೆಚುಕ್ಕೆ ರೋಗ ತಾಲೂಕಿನ ನಿಟ್ಟೂರು, ಸಂಪೇಕಟ್ಟೆ, ಮರಾಠಿ, ನಾಗೋಡಿ ಹಾಗೂ ಸಾಗರ, ತೀರ್ಥಹಳ್ಳಿ ತಾಲೂಕಿನ ಕೆಲ ಭಾಗಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸರಕಾರದ ಇಲಾಖೆಗಳು ರೋಗ ತಡೆಗೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಹಾಗೂ ಜನಪ್ರತಿನಿಧಿಗಳು ಚಕಾರ ಎತ್ತದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಬೋರ್ಡೋ ದ್ರಾವಣ ಹಾಗೂ ಸಿಂಪಡಣ ದೋಟಿ ಖರೀದಿಗೆ ರೈತರಿಗೆ ಸರ್ಕಾರ ಶೇ.50ರಷ್ಟು ಸಬ್ಸಿಡಿ ಒದಗಿಸಬೇಕು. ರೋಗದಿಂದ ಸಣ್ಣ ಮತ್ತು ಮಧ್ಯಮ ಅಡಿಕೆ ಬೆಳೆಗಾರರಿಗೆ ಉಂಟಾಗಿರುವ ನಷ್ಟದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪೊಟ್ಯಾಷ್ ಸಹಿತ ರಸಗೊಬ್ಬರಗಳನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಬೇಕು. ರಸಗೊಬ್ಬರಕ್ಕೆ ಸಬ್ಸಿಡಿ ಕಡಿತ ಮಾಡಲಾಗಿರುವುದು ಹಾಗೂ ದಾಸ್ತಾನಿನಲ್ಲಿ ಕೃತಕ ಅಭಾವ ಉಂಟಾಗಿರುವುದು ದರ ಏರಿಕೆಗೆ ಕಾರಣವಾಗಿದೆ. ಇದಕ್ಕೆ ಸರಕಾರಗಳೇ ನೇರ ಹೊಣೆ ಎಂದು ಆಪಾದಿಸಿದ ಅವರು, ಹವಾಮಾನ ವೈಪರೀತ್ಯದಿಂದ ಎಲೆಚುಕ್ಕೆ ರೋಗ ಹರಡುತ್ತಿರುವ ಭೀತಿಯನ್ನು ರೈತಾಪಿ ವರ್ಗ ಎದುರಿಸುತ್ತಿದ್ದು, ಕೂಡಲೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಈ ಸಂಬಂಧ ಸಂಶೋಧನೆ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಎಲೆಚುಕ್ಕೆ ರೋಗದಿಂದ ಫಸಲು ಕಡಿಮೆಯಾಗಿದ್ದು, ಅಡಿಕೆ ದರದಲ್ಲಿ ಏರಿಕೆ ಕಂಡರೂ ಅದರ ಲಾಭ ರೈತರಿಗೆ ದೊರಕುತ್ತಿಲ್ಲ. ಪೆಟ್ರೋಲ್ ಬೆಲೆ ಹೆಚ್ಚಳವಾಗಿರುವುದು ಕಳೆಯಂತ್ರ, ಕೊಳೆ ಔಷಧಿ ಸಿಂಪಡಣೆಯ ವೆಚ್ಚ ಹೆಚ್ಚಿಸಿದೆ. ಮೈಲುತುತ್ತ, ರಾಳ, ಸುಣ್ಣದ ದರ ದುಪ್ಪಟ್ಟಾಗಿದೆ. ಈಗ ಕಾಣಿಸಿಕೊಂಡಿರುವ ಎಲೆಚುಕ್ಕೆ, ಹಳದಿ ರೋಗಗಳು ಈ ಹಿಂದೆಯೂ ಕಾಣಿಸಿಕೊಂಡಿತ್ತು. ಆದರೆ ವಿಜ್ಞಾನಿಗಳು ಇದುವರೆಗೂ ಇದಕ್ಕೆ ಸೂಕ್ತ ಔಷಧ ಕಂಡುಹಿಡಿದಿಲ್ಲ. ಅಡಿಕೆ ಬೆಳೆಗಾರರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಹಣ ತೆರಿಗೆ ಸಂಗ್ರಹವಾಗುತ್ತಿದೆ. ಜನಪ್ರತಿನಿಧಿಗಳು ಸಹ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಶಿಮುಲ್ ನಿರ್ದೇಶಕ ಗುರುಶಕ್ತಿ ವಿದ್ಯಾಧರ್, ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್, ಸಹಕಾರಿ ಧುರೀಣ ವಿನಾಯಕ ಚಕ್ಕಾರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಧುಸೂಧನ ನಾವಡ, ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್.ವಿನಯ್, ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್, ಪ್ರಮುಖರಾದ ಚಂದ್ರಯ್ಯಜೈನ್, ಸತ್ಯನಾರಾಯಣ ಭಟ್, ರವೀಶ ನಿಟ್ಟೂರು, ಉದಯಪೂಜಾರಿ, ರವಿ ಚನ್ನಪ್ಪ, ಆಟೋ ವಿಜಯ್ ಮಂಜಗಳಲೆ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here