ಅಧಿಕಾರ ಯಾವತ್ತೂ ಶಾಶ್ವತ ಅಲ್ಲವೆಂಬುದನ್ನು ಪೊಲೀಸ್ ಅಧಿಕಾರಿಗಳು ತಿಳಿದಿರಬೇಕು: ಡಿಕೆಶಿ

0
383

ಶಿವಮೊಗ್ಗ: ಅಧಿಕಾರ ಯಾವತ್ತೂ ಶಾಶ್ವತ ಅಲ್ಲವೆಂಬುದನ್ನು ಪೊಲೀಸ್ ಅಧಿಕಾರಿಗಳು ತಿಳಿದಿರಬೇಕು. ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಿದರೆ ನಿಮ್ಮ ಆತ್ಮ ಶಕ್ತಿಗೂ ಅನ್ಯಾಯ ಮಾಡಿದಂತಾಗುತ್ತದೆಯಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೊಲೀಸರಿಗೆ ಪ್ರಶ್ನಿಸಿದ್ದಾರೆ.

ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್‌ಪಿ ಯವರು ಕಾನೂನಿನ ಬಗ್ಗೆ ಮತ್ತು ಐಪಿಸಿ ಸೆಕ್ಷನ್‌ಗಳ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರಬೇಕು. ಅನಗತ್ಯವಾಗಿ ಕೇಸು ಹಾಕಿದಲ್ಲಿ ಸುಮ್ಮನೆ ಕುಳಿತುಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಶಾಸಕ ಸಂಗಮೇಶ್ ಪ್ರಕರಣ ಸಹಿತ ಯಾವುದೇ ಒಬ್ಬ ಕಾರ್ಯಕರ್ತನ ವಿರುದ್ಧವೂ ಸುಳ್ಳು ಮೊಕ್ಕದ್ದಮೆ ಹೂಡಿದಲ್ಲಿ ಇನ್ನಷ್ಟು ಜನಾಕ್ರೋಶವನ್ನು ತಾವು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಖಾಸಗೀಕರಣದ ಹಿಂದೆ ಬಿದ್ದಿದ್ದು, ಜನಹಿತವನ್ನು ಮರೆತಿದ್ದಾರೆ. ಕೊರೊನಾ ಕಾಲದಲ್ಲಿಯೂ ರಾಜ್ಯ ಸರ್ಕಾರ ಲೂಟಿಹೊಡೆದು ಕೆಟ್ಟ ಹೆಸರು ಪಡೆದುಕೊಂಡಿದೆ. ರೈತರ ಸಮಸ್ಯೆಯನ್ನು ಇಲ್ಲಿಯವರೆಗೂ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.

ಕಸ್ತೂರಿರಂಗನ್ ವರದಿ ಬಗ್ಗೆ ಏನನ್ನೂ ಮಾಡದೆ ರಾಜ್ಯದ ಜನರನ್ನು ಕಂಗೆಡಿಸಿದ್ದಾರೆ. ಕಾಡಿನಂಚಿನಲ್ಲಿರುವ ಜನರು ತಮ್ಮನ್ನು ಒಕ್ಕಲೆಬ್ಬಿಸುವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಡಿಕೆ ಕ್ಯಾನ್ಸರ್ ಕಾರಕ ಎಂಬ ಪ್ರಕರಣಕ್ಕೆ ಅಫಿಡೆವಿಟ್ ಸಲ್ಲಿಸಲು ಇಂದಿನವರೆಗೂ ಬಿಜೆಪಿ ಸಾಧ್ಯವಾಗಿಲ್ಲ. ಲಂಬಾಣಿ ತಾಂಡಾವನ್ನು ಕಂದಾಯ ಗ್ರಾಮವನ್ನಾಗಿ ಮಾಡಿಲ್ಲ. ಅಧಿಕಾರಕ್ಕೆ ಕೂರಿಸಿದವರ ಹಿತಕಾಪಾಡಲು ಸಾಧ್ಯವಾಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಅಧಿಕಾರದ ಮದ:

ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳು ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಅಧಿಕಾರದ ಮದ ಏರಿದ್ದು, ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ರಾಜಕೀಯವಾಗಿ ಮುಗಿಸಲು ಅಧಿಕಾರಿಗಳನ್ನು ತಮಗಿಷ್ಟ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುಳ್ಳು ಮೊಕ್ಕದ್ದಮೆ ಹೂಡುವ ಮೂಲಕ ಸಂಗಮೇಶ್ ಅವರನ್ನು ಮುಗಿಸಲು ಸಾಧ್ಯವಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠರು ಪ್ರಕರಣದ ಬಗ್ಗೆ ಅರ್ಥಮಾಡಿಕೊಳ್ಳಬೇಕಿತ್ತು. ಭದ್ರಾವತಿಯಲ್ಲಿ ಕೋಮು ಗಲಭೆ ಹಬ್ಬಿಸುವ ಕೆಲಸಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಇದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳದೆ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.

ತಾನು ಪೊಲೀಸರ ವಿರುದ್ಧ ಮಾತನಾಡುತ್ತಿಲ್ಲ. ಆದರೆ ಸರ್ಕಾರ ಹೇಳಿದಂತೆ ಪೊಲೀಸರು ಕೇಳಬೇಕೇ ವಿನಃ ರಾಜಕಾರಣಿಯ ಮಾತನ್ನಲ್ಲ. ಇದು ಹೀಗೇ ಮುಂದುವರೆದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಎಸ್‌ಪಿಗೆ ತಾಕತ್ತಿದ್ದರೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅಕ್ರಮ ಆಸ್ತಿ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ. ಐಪಿಸಿ 307ರಬಗ್ಗೆ ಏನೂ ಗೊತ್ತಿಲ್ಲದ ಎಸ್‌ಪಿ ತನ್ನ ಹುದ್ದೆಯ ಘನತೆಯನ್ನು ಕಳೆಯಬಾರದು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ಎಚ್ಚರಿಸಿದರು.

ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ರಮೇಶ್‌ಕುಮಾರ್, ಮಾಜಿ ಸಚಿವ ಯು.ಟಿ. ಖಾದರ್, ವಿಧಾನಪಕ್ಷದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಂಗಮೇಶ್ ಪರ ನಿಲ್ಲುವ ಮತ್ತು ಅವರಿಗೆ ನೈತಿಕ ಬಲ ನೀಡುವುದಾಗಿ ಘೋಷಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಸಂಗಮೇಶ್, ಘಟನೆಯ ವಿವರವನ್ನು ಬಿಚ್ಚಿಟ್ಟರು. ಸುಳ್ಳು ಮೊಕದ್ದಮೆ ಹೂಡಿ, ದೌರ್ಜನ್ಯ ಮತ್ತು ಕುತಂತ್ರಗಳಿಂದ ತನ್ನನ್ನು ಮುಗಿಸಲು ಸಾಧ್ಯವಿಲ್ಲ. 2011ರಲ್ಲೂ ಸಹ ತಾನು ಬಿಜೆಪಿಗೆ ಸೇರಿಲ್ಲ ಎಂಬ ಕಾರಣದಿಂದ ತನ್ನ ಮನೆಯೊಳಗೆ ಪೊಲೀಸರನ್ನು ನುಗ್ಗಿಸಿ ದೌರ್ಜನ್ಯ ನಡೆಸಲಾಗಿತ್ತು. ಜೈಲಿಗೂ ಕಳುಹಿಸಲಾಗಿದ್ದು, ಅಂದೂ ಸಹಾ ಕಾಂಗ್ರೆಸ್ ತನಗೆ ಶಕ್ತಿ ನೀಡಿತ್ತು. ಇಂದೂ ಸಹಾ ಕಾಂಗ್ರೆಸ್ ತನ್ನ ಪರ ನಿಂತು ಬೆಂಬಲಿಸುತ್ತಿದೆ ಎಂದರು. ಭದ್ರಾವತಿಯಲ್ಲಿ ಕೋಮುವಾದ ಬೆಳೆಯಲು ಅವಕಾಶ ಕೊಡುವುದಿಲ್ಲ. ಭದ್ರಾವತಿ ಎಂದರೆ ಕಬ್ಬಿಣ. ಇಲ್ಲಿನ ಜನರು ಕಬ್ಬಿಣದಂತಿದ್ದಾರೆ ಎನ್ನುವುದನ್ನು ಬಿಜೆಪಿ ಮರೆಯಬಾರದು ಎಂದರು.

ಸಮಾರಂಭದಲ್ಲಿ ಕೆಪಿಸಿಸಿ ಕಾರ್‍ಯಾಧ್ಯಕ್ಷರಾದ ಧೃವಕುಮಾರ್, ಈಶ್ವರ್ ಖಂಡ್ರೆ, ಸಲೀಂ ಅಹಮ್ಮದ್, ಕೃಷ್ಣಬೈರೇಗೌಡ, ಕಿಮ್ಮನೆ ರತ್ನಾಕರ್, ರಾಮಲಿಂಗಾರೆಡ್ಡಿ, ಪ್ರತಾಪ್ ಚಂದ್ರ ಶೆಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಪುಷ್ಪಾ ಅಮರನಾಥ್ ಮೊದಲಾದವರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here