ಅನರ್ಹರು ಹೊಂದಿರುವ ಪಡಿತರ ಕಾರ್ಡ್ ಹಿಂದಿರುಗಿಸಲು ಸೂಚನೆ: ಕೆ.ಬಿ.ಶಿವಕುಮಾರ್

0
850

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಅನರ್ಹರ ಕುಟುಂಬಗಳ ಸದಸ್ಯರ ಜೊತೆಗೆ ಸರ್ಕಾರಿ ಸೌಮ್ಯದ ಎಲ್ಲಾ ನೌಕರರು, ಸಿಬ್ಬಂದಿಗಳು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಕಟ್ಟುವವರು, ಅಂತ್ಯೋದಯ ಅನ್ನ ಮತ್ತು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲವೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲವು ಅನರ್ಹ ಕುಟುಂಬಗಳ ಸದಸ್ಯರು ಅಂತ್ಯೋದಯ ಮತ್ತು ಆದ್ಯತಾ ಪಡಿತರಚೀಟಿ ಹೊಂದಿದ್ದು, ಅವುಗಳನ್ನು ಕೂಡಲೇ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪಡಿತರ ಚೀಟಿದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಮುಂತಾದ ಒಂದು ವಾಣಿಜ್ಯ ವಾಹನವನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳ ಸದಸ್ಯರು ಪಡಿತರ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ ಎಂದವರು ತಿಳಿಸಿದ್ದಾರೆ.

2011ರ ಜನಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 4,06,816 ಕುಟುಂಬಗಳು ದಾಖಲಾಗಿದ್ದು, 2021ರ ಮಾರ್ಚ್ ಮಾಹೆಯವರೆಗೆ ಜಿಲ್ಲೆಯಲ್ಲಿ 37,537 ಅಂತ್ಯೋದಯ ಅನ್ನ, 3,56,588 ಆದ್ಯತಾ ಕುಟುಂಬಗಳು ಸೇರಿ ಒಟ್ಟು 3,94,125 ಕುಟುಂಬಗಳಿಗೆ ಆದ್ಯತಾ (ಬಿ.ಪಿ.ಎಲ್) ಪಡಿತರ ಚೀಟಿ ಮತ್ತು 92,653 ಕುಟುಂಬಗಳಿಗೆ ಆದ್ಯತೇತರ (ಎ.ಪಿ.ಎಲ್.) ಪಡಿತರ ಚೀಟಿ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಬಲರು ಮತ್ತು ಇತರ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿ.ಪಿ.ಎಲ್.) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಪದೇ-ಪದೇ ಮನವಿ ಮಾಡಲಾಗಿದೆ. ಈ ಮನವಿಗೆ ಸ್ಪಂದಿಸಿ ಆದ್ಯತಾ ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಆದ್ಯತೇತರ ಪಡಿತರ ಚೀಟಿ ಪಡೆದಿದ್ದಾರೆ ಎಂದು ತಿಳಿಸಿರುವ ಅವರು, ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಆದ್ಯತಾ (ಬಿ.ಪಿ.ಎಲ್.) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ತಾಲೂಕಿನ ತಹಶೀಲ್ದಾರರಿಗೆ ಒಪ್ಪಿಸಿ, ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿ ಪಡೆಯುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ -1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ ಹಾಗೂ ಭಾರತೀಯ ದಂಡ ಸಂಹಿತೆಯನ್ವಯ ಕ್ರಮ ಜರುಗಿಸಲಾಗುವುದೆಂದು ಹಾಗೂ ಹಂಚಿಕೆ ಪಡೆದ ಆಹಾರ ಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here