ಅನೈತಿಕ ಚಟುವಟಿಕೆಗಳ ತಾಣವಾದ ಹೊಸನಗರ ಪ್ರವಾಸಿ ಮಂದಿರದ ಸುತ್ತಮುತ್ತಲ ಪ್ರದೇಶ !

0
846

ಹೊಸನಗರ: ಪಟ್ಟಣದ ಪರಿವೀಕ್ಷಣಾ ಮಂದಿರ(ಐಬಿ)ವು ಸಂಜೆಯಾಗುತ್ತಿದ್ದಂತೆ ಅನೇಕ ಹೆಂಡ, ಸಾರಾಯಿ ಕುಡುಕರಿಗೆ ಅನುಕೂಲವಾಗುವ ಹಾಗೆ ಮತ್ತು ಇಲ್ಲಿರುವ ಪ್ರವಾಸಿ ಮಂದಿರವು ಒಂದು ರೀತಿಯಲ್ಲಿ ಭೂತ ಬಂಗಲೆಯಂತೆ ಕಾಣುವ ಎಲ್ಲಾ ರೀತಿಯ ವಾತಾವರಣವು ನಿರ್ಮಾಣವಾಗಿದೆ.

ಹೌದು, ತಾಲ್ಲೂಕಿನ ಆಸುಪಾಸಿನ ಹುಂಚದ ಪದ್ಮಾವತಿ ದೇವಸ್ಥಾನ, ರಾಮಚಂದ್ರಾಪುರ ಮಠ, ಕಾರಣಗಿರಿ (ಕಾರ್ಗಡಿ)ಯ ಗಣಪತಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹೀಗೆ ವಿವಿಧ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ತಾಲ್ಲೂಕಿನ ಕೊಡಚಾದ್ರಿ ಬೆಟ್ಟ ಮತ್ತು ಸುತ್ತಮುತ್ತ ಇರುವ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ವಿವಿಧ ರೀತಿಯ ಪ್ರವಾಸಿಗರು ಆಗಮಿಸುತ್ತಾರೆ. ದೂರದೂರುಗಳಿಂದ ಈ ರೀತಿಯಲ್ಲಿ ಆಗಮಿಸುವವರಿಗೆ ಅಥವಾ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಆಯಾಸದಿಂದ ಆಗಮಿಸಿದ ಯಾತ್ರಾರ್ಥಿಗಳಿಗೆ ವಿಶ್ರಾಂತಿ ಪಡೆಯಲು ಅಥವಾ ಒಂದು ದಿನ ತಂಗಲು ಲೋಕೋಪಯೋಗಿ ಇಲಾಖೆಯಿಂದ ಸುಸಜ್ಜಿತವಾದ ಕಟ್ಟಡ ಹೊಂದಿರುವ ಪ್ರವಾಸಿ ಮಂದಿರದ ವ್ಯವಸ್ಥೆ ಮಾಡಲಾಗಿದೆ.

ಆದರೆ, ಈ ಪ್ರವಾಸಿ ಮಂದಿರದ ಪಕ್ಕದಲ್ಲಿಯೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಇಲಾಖೆ ಕಛೇರಿ ಇದ್ದು, ಈ ಕಛೇರಿ ಮತ್ತು ಪ್ರವಾಸಿ ಮಂದಿರದ ಸುತ್ತಮುತ್ತ ಬೀದಿ ದೀಪಗಳಿಲ್ಲದೇ ‌ಸಂಜೆಯಾಗುತ್ತಲೇ ಕತ್ತಲೆಯಿಂದ ಕೂಡಿ ಮದ್ಯಪಾನ, ಧೂಮಪಾನ, ಹೆಂಡ ಖಂಡ ಪ್ರಿಯರಿಗೆ, ಅನೇಕ ಪ್ರೇಮಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಮುಂಜಾವಿನ ವೇಳೆ ಹಾಗೂ ಸಂಜೆಯಾಗುತ್ತಿದ್ದಂತೆ ಪಟ್ಟಣದ ವಿವಿಧ ಭಾಗಗಳಿಂದ ವಾಯು ವಿಹಾರಕ್ಕೆಂದು ನೂರಾರು ಜನರು ಬರುತ್ತಾರೆ ಅವರು ನಡೆದಾಡುವ ರಸ್ತೆಯ ಇಕ್ಕೆಲಗಳಲ್ಲಿ ಕುಡುಕರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಪೌಚ್ ಹಾಗೂ ಬಾಟಲಿಗಳು ಮತ್ತು ಒಡೆದು ಹೋದ ಗಾಜುಗಳು ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಇಲ್ಲಿ ವಾಯು ವಿಹಾರಕ್ಕೆಂದು ಆಗಮಿಸುವವರಿಗೆ ವಿಶ್ರಾಂತಿಸಲು ಹಲವಾರು ಮಾನವ ನಿರ್ಮಿತ ಸಿಮೆಂಟಿನ ಆಸನಗಳಿದ್ದರೂ ಹಗಲು ಕುಡುಕರು ಕುಳಿತು ಇಲ್ಲವೇ ಮಲಗಿರುವುದನ್ನು ಕಂಡು ವಿಶ್ರಮಿಸಲು ಸ್ಥಳವಿಲ್ಲದೇ ಬೇರೆ ಬೇರೆಡೆ ಕುಳಿತು ವಿಶ್ರಾಂತಿ ಪಡೆದು ಹೋಗುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಛತೆ ಬಗ್ಗೆ ರಾಜ್ಯದಲ್ಲಿಯೇ ಮಾದರಿಯಾಗುವಂತಿರುವ ಹೊಸನಗರ ತಾಲ್ಲೂಕಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದು ಹೋಗುವ ಅನೇಕ ಯಾತ್ರಿಕರು ವಿಶ್ರಾಂತಿ ಪಡೆಯುವ ಅಥವಾ ಒಂದು ದಿನ ತಂಗಿ ಹೋಗುವವರಿಗೆ ರಾತ್ರಿವೇಳೆ ಭಯ ಹುಟ್ಟಿಸುವ ಹಾಗೂ ಹಗಲಿನ ವೇಳೆ ಅಸಯ್ಯ ಎನಿಸುವ ವಾತಾವರಣ ನಿರ್ಮಾಣವಾಗಿದೆ.

ಮಲೆನಾಡಿನ ಅನೇಕ ಗಿಡ ಮರಗಳನ್ನು ಹೊಂದಿ ಉತ್ತಮ ಪರಿಸರದಿಂದ ಕೂಡಿರಬೇಕಾಗಿದ್ದ ಈ ಪ್ರವಾಸಿ ಮಂದಿರ ಅಸಮಾಧಾನ ವ್ಯಕ್ತಪಡಿಸುವ ವಾತಾವರಣ ನಿರ್ಮಾಣವಾಗಿದೆ. ಈ ತಾಲ್ಲೂಕಿನಿಂದ ಹೊಸನಗರ – ಸಾಗರ ಮತ್ತು ಹೊಸನಗರ – ತೀರ್ಥಹಳ್ಳಿ ಕ್ಷೇತ್ರದಿಂದ ಎರಡು ಜನ ಶಾಸಕರು ಆಯ್ಕೆಯಾಗಿದ್ದಾರಲ್ಲದೇ, ಹೊಸನಗರ- ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾದ ಆರಗ ಜ್ಞಾನೇಂದ್ರ ರವರು ರಾಜ್ಯ ಸರ್ಕಾರದ ಗೃಹ ಸಚಿವರಾಗಿದ್ದಾರೆ. ಒಂದೊಮ್ಮೆ ಈ ಇಬ್ಬರು ನಾಯಕರು ಹೊಸನಗರದಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಆಗಮಿಸಿದರೆ ಇವರೊಂದಿಗೆ ಆಗಮಿಸಿದ ಕಾರ್ಯಕರ್ತರು ಅಥವಾ ಮುಖಂಡರು ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿಯೇ ತಂಗಬೇಕಾಗುತ್ತದೆ, ತಂಗಿದವರು ಇಂತಹ ಕೆಟ್ಟ ವಾತಾವರಣ ವೀಕ್ಷಣೆ ಮಾಡಿದರೆ ಜನಪ್ರತಿನಿಧಿಗಳ ಪಾಡೇನು? ಆದ್ದರಿಂದ ಈ ತಾಲ್ಲೂಕಿನ ಜನಪ್ರತಿನಿಧಿಗಳಾಗಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲೀ ಇತ್ತಕಡೆ ಗಮನ ಹರಿಸಿ ಇನ್ನಾದರೂ ಪ್ರವಾಸಿ ಮಂದಿರದ ಸುತ್ತಮುತ್ತ ಬೀದಿ ದೀಪಗಳನ್ನು ಪಟ್ಟಣ ಪಂಚಾಯಿತಿಯಿಂದಾಗಲಿ ಅಥವಾ ಪ್ರವಾಸಿ ಮಂದಿರಕ್ಕೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಿಂದಾಲೀ ದೀಪಗಳನ್ನು ಮತ್ತು ಸುಗಂಧ ಭರಿತ ಹೂ ಗಿಡಗಳನ್ನಾಗಲಿ ಬೆಳೆಸುವಂತಾಗುವ ಮೂಲಕ ಹೆಂಡ, ಸಾರಾಯಿ ಕುಡುಕರಿಗೆ ಕಡಿವಾಣ ಹಾಕುವ ವ್ಯವಸ್ಥೆ ಮಾಡಬೇಕಿದೆ ಎಂಬುದು ಸಾರ್ವಜನಿಕರ ಅಂಬೋಣ.

ವರದಿ: ಪುಷ್ಪಾ ಜಾಧವ್
ಜಾಹಿರಾತು

LEAVE A REPLY

Please enter your comment!
Please enter your name here