ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವು ! ರಾತ್ರಿಯಿಡಿ ಪತ್ನಿ ಶವದೊಂದಿಗೆ ಕಾಲಕಳೆದ ಪತಿ !!

0
926

ಚಿಕ್ಕಮಗಳೂರು: ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ 19 ವರ್ಷದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಡಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಆಕೆಯ ಪತಿಯಿಂದಲೇ ಕೊಲೆಯಾದ ಶಂಕೆ ವ್ಯಕ್ತವಾಗಿದೆ.

ನಗರದ ಕಾಲೇಜೊಂದರ ವಿದ್ಯಾರ್ಥಿನಿ ಸುಮಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಮೂಲತಃ ಜಡಗೇನಹಳ್ಳಿ ಗ್ರಾಮದ ಸುಮಾ ಒಂದು ವರ್ಷದ ಹಿಂದೆ ಅದೇ ಗ್ರಾಮದ ಅಭಿಷೇಕ್ (20) ಎಂಬಾತನ್ನು ಪ್ರೀತಿಸಿ ಮದುವೆಯಾಗಿದ್ದರು.

ಈ ವೇಳೆ ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ ಮದುವೆಗೆ ಕಾನೂನಿನ ಮಾನ್ಯತೆ ಇರಲಿಲ್ಲ. ಆದರೂ ಇಬ್ಬರು ಗ್ರಾಮದಲ್ಲಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಇದಕ್ಕೆ ಅವರ ಕುಟುಂಬಸ್ಥರ ವಿರೋಧವೂ ಇರಲಿಲ್ಲ ಎಂಬ ವಿಚಾರ ಎಂದು ತಿಳಿದುಬಂದಿದೆ.

ಶುಕ್ರವಾರ ಸಮೀಪದ ಗ್ರಾಮವೊಂದರಲ್ಲಿ ನಡೆದ ಸಂಬಂಧಿಕರ ವಿವಾಹಕ್ಕೆ ಪತ್ನಿ ಸುಮಾ ಅವರನ್ನು ಅಭಿಷೇಕ್ ಕರೆದುಕೊಂಡು ಹೋಗಿದ್ದ. ಅಲ್ಲಿಂದ ವಾಪಸ್ ಬಂದವರು ಮನೆಗೆ ತೆರಳದೆ ಜಡಗೇನಹಳ್ಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಬೆಳಗ್ಗೆ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಕೆಲ ಗ್ರಾಮಸ್ಥರಿಗೆ ಕಾಡಿನಲ್ಲಿ ಇಬ್ಬರು ವ್ಯಕ್ತಿಗಳು ಇರುವುದು ಕಂಡುಬಂದಿದೆ‌. ಈ ವೇಳೆ ಅವರನ್ನು ವಿಚಾರಿಸಲು ಮುಂದಾದಾಗ ಸುಮಾ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ‌‌. ಅಭಿಷೇಕ್ ರಾತ್ರಿಯಿಡಿ ಪತ್ನಿಯ ಶವದೊಂದಿಗೆ ಇದ್ದ ಎಂಬ ವಿಚಾರ ತಿಳಿದುಬಂದಿದೆ‌. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸುಮಾ ಅವರನ್ನು ಪತಿ ಅಭಿಷೇಕ್ ಕೊಲೆ ಮಾಡಿದ್ದಾನೆ ಎಂದು ಸುಮಾ ಪೋಷಕರು ಆರೋಪಿಸಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಅಭಿಷೇಕ್ ನನ್ನು ವಶಕ್ಕೆ ಪಡೆದಿದ್ದಾರೆ‌. ಸುಮಾ ಸಾವಿನ ವಿಚಾರ ಸಧ್ಯಕ್ಕೆ ನಿಗೂಢವಾಗಿದ್ದು, ತನಿಖೆಯ ನಂತರವಷ್ಟೇ ಹೆಚ್ಚಿನ ವಿಚಾರ ತಿಳಿದು ಬರಬೇಕಿದೆ.

ಜಾಹಿರಾತು

LEAVE A REPLY

Please enter your comment!
Please enter your name here