20.6 C
Shimoga
Friday, December 9, 2022

ಅರಿವಿನ ದಾರಿ ಸುಖ-ಶಾಂತಿಗೆ ಮೂಲ ; ಶ್ರೀ ರಂಭಾಪುರಿ ಜಗದ್ಗುರುಗಳು


ರಿಪ್ಪನ್‌ಪೇಟೆ : ಮನುಷ್ಯನ ಜೀವನ ಅರಿವು ಆದರ್ಶಗಳಿಂದ ಸದೃಢಗೊಳ್ಳಬೇಕು. ಅರಿವಿನ ದಾರಿ ಸುಖ ಶಾಂತಿಯ ಬದುಕಿಗೆ ಮೂಲ ಅಡಿಪಾಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಸಮೀಪದ ಶ್ರೀಮದ್ರಂಭಾಪುರಿ ಖಾಸಾ ಶಾಖಾ ಸಂಸ್ಥಾನ ಮಳಲಿ ಮಠದಲ್ಲಿ ಕಾರ್ತಿಕ ದೀಪೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಹೊರಗಿರುವ ಕತ್ತಲೆ ಕಳೆಯಲು ದೀಪ ಬೇಕು. ಮನುಷ್ಯನ ಒಳಗಿರುವ ಅಜ್ಞಾನ ಎಂಬ ಕತ್ತಲೆ ಕಳೆಯಲು ಗುರು ಬೋಧಾಮೃತ ಅವಶ್ಯಕ. ದೀಪ ಬೆಳಗುತ್ತಿದೆ. ಆದರೆ ಉರಿಯುತ್ತಿಲ್ಲ. ಮನುಷ್ಯ ಉರಿಯುತ್ತಿದ್ದಾನೆ ಹೊರತು ಬೆಳಗುತ್ತಿಲ್ಲ. ಆಧ್ಯಾತ್ಮ ಜ್ಞಾನದ ಕೊರತೆಯಿಂದಾಗಿ ಮನುಷ್ಯ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಹಚ್ಚುವುದಾದರೆ ದೀಪ ಹಚ್ಚು. ಆದರೆ ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು. ಆದರೆ ದೀಪ ಆರಿಸಬೇಡ ಎಂದು ಆಚಾರ್ಯರು ಸ್ಪಷ್ಟವಾಗಿ ಹೇಳುತ್ತಾರೆ. ಮನುಷ್ಯನ ಮನಸ್ಸು ಸಂಕುಚಿತಗೊಂಡು ಅನಾಗರಿಕ ಜೀವನ ಮತ್ತು ಸ್ವೇಚ್ಛಾಚಾರ ಹೊಂದಿ ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಮಳಲಿ ಸಂಸ್ಥಾನ ಮಠದಲ್ಲಿ ಪ್ರತಿ ವರುಷ ಕಾರ್ತೀಕ ಧರ್ಮ ದೀಪೋತ್ಸವ ಸಮಾರಂಭ ಭಕ್ತ ಸಂಕುಲದ ಸಹಕಾರದಿಂದ ವಿಜೃಂಭಣೆಯಿಂದ ಜರುಗುತ್ತಿರುವುದು ತಮಗೆ ಸಂತೋಷ ತಂದಿದೆ. ಮಠಾಧ್ಯಕ್ಷರಾದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಭಕ್ತರ ಭಾವನೆಗಳಿಗೆ ಸ್ಪಂದಿಸಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ. ಶ್ರೀಗಳವರ ಅಧಿಕಾರದ ಅವಧಿಯಲ್ಲಿ ಶ್ರೀ ಮಠ ಇನ್ನಷ್ಟು ಮತ್ತಷ್ಟು ಬೆಳೆದು ಭಕ್ತ ಸಮೂಹದ ಶ್ರೇಯಸ್ಸಿಗೆ ದಾರಿದೀಪವಾಗಲೆಂದರು.


ಸಮಾರಂಭ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಭಾರತೀಯ ಸಂಸ್ಕೃತಿಯ ಪುನಶ್ಚೇತನಕ್ಕೆ ಮಠಗಳ ಕೊಡುಗೆ ಅಮೂಲ್ಯ. ಜಾತಿ ಮತ ಪಂಥಗಳ ಗಡಿ ಮೀರಿ ಭಾವೈಕ್ಯತೆ ಮತ್ತು ಸಾಮರಸ್ಯ ಬದುಕಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಮಲೆನಾಡಿನ ಮಡಿಲಲ್ಲಿರುವ ಮಳಲಿ ಮಠ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಸರ್ವ ಭಕ್ತರಿಗೆ ಸನ್ಮಾರ್ಗ ದರ್ಶನ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಡಾ.ನಾಗಭೂಷಣ ಶ್ರೀಗಳವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಭಕ್ತ ಸಮೂಹದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು.


ಬೇಲೂರು ಶಾಸಕ ಕೆ.ಎಸ್.ಲಿಂಗೇಶ, ಸಾಗರ ಶಾಸಕ ಹರತಾಳು ಹಾಲಪ್ಪ, ಡಾ. ಆರ್.ಎಂ.ಮಂಜುನಾಥಗೌಡ, ಕೋಣಂದೂರು ಕೆ.ಆರ್.ಪ್ರಕಾಶ, ಹೆಚ್.ಎಸ್.ಜಗದೀಶ ಇಂಜನೀಯರ್, ಬಿ.ಯುವರಾಜ, ಕೆ.ಎಂ.ಚನ್ನಬಸಪ್ಪಗೌಡ್ರು, ವೀರೇಶ್ ಆಲವಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಬಂಕಾಪುರ, ಕವಲೇದುರ್ಗ, ಬೇರುಗಂಡಿ, ಸಿದ್ಧರಬೆಟ್ಟ, ಶಾಂತಪುರ, ಕೋಣಂದೂರು, ಸಂಗೊಳ್ಳಿ, ಕಡೇನಂದಿಹಳ್ಳಿ, ಹನುಮಾಪುರ, ಹಾರನಹಳ್ಳಿ, ಕುಮಾರಪಟ್ಟಣ ಶ್ರೀಗಳು ಸಮ್ಮುಖ ವಹಿಸಿದ್ದರು. ಹಾವೇರಿ ಎಸ್.ಬಿ.ಹಿರೇಮಠ, ಶಿವಮೊಗ್ಗದ ವಿನಾಯಕ ಬದಾಮಿ, ಎನ್.ಜೆ.ರಾಜಶೇಖರ್, ಕಗ್ಗಲಿ ಕೆ.ಎಸ್.ಪುಟ್ಟಸ್ವಾಮಿ, ಹರತಾಳು ಹೆಚ್.ಡಿ.ಜಯಶೀಲಗೌಡ್ರು, ಹೊಸನಗರದ ಹೆಚ್.ವಿ.ಈಶ್ವರಪ್ಪಗೌಡ್ರು, ರಿಪ್ಪನ್‌ಪೇಟೆ ಹೆಚ್.ಎಸ್.ಸತೀಶ, ಕೆ.ಬಿ.ನಾಗಭೂಷಣ, ಶಿಕಾರಿಪುರದ ಸದಾನಂದಸ್ವಾಮಿ ಪಾಟೀಲ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಕೋಣಂದೂರು ನಾಗಾನಂದ ಮಲ್ಯ ಇವರೆಲ್ಲರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ ಮಳಲಿಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಲೆನಾಡಿನ ತಪ್ಪಲಲ್ಲಿ ವಿರಾಜಮಾನವಾಗಿರುವ ಮಳಲಿ ಸಂಸ್ಥಾನಮಠ ಸಕಲ ಸಮುದಾಯದ ಶ್ರದ್ಧಾ ಕೇಂದ್ರ. ಕರ್ತೃ ನಾಗಾರ್ಜುನಸ್ವಾಮಿ ಲೀಲೆ ಪವಾಡಗಳು ಅನಂತ. ಭಕ್ತರ ಭಾವನೆಗಳಿಗೆ ವರ ನೀಡುವ ಗುರುಸ್ಥಲದ ಪವಿತ್ರ ತಾಣ. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ಆಶೀರ್ವಾದದಿಂದ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ಅದ್ದೂರಿಯಾಗಿ ಜರುಗುತ್ತಿರುವುದಕ್ಕೆ ಎಲ್ಲ ಭಕ್ತರಿಗೆ ಅಪಾರ ಸಂತೋಷ ತಂದಿದೆ ಎಂದರು.

ರಿಪ್ಪನ್‌ಪೇಟೆ ಆರ್.ಎಸ್.ಪ್ರಶಾಂತ ಪ್ರಾರಂಭದಲ್ಲಿ ಸದಾಶಯ ನುಡಿ ಸಲ್ಲಿಸಿದರು. ಜಮ್ಮಲದಿನ್ನಿ ಬಿ.ಎಂ. ಸುರೇಶ ಗವಾಯಿಗಳವರಿಂದ ಸಂಗೀತ ಸೌರಭ ಜರುಗಿತು. ಶಾಂತಾ ಆನಂದ ಶಿವಮೊಗ್ಗ ಮತ್ತು ಗುರುಪಾದಯ್ಯ ಸಾಲಿಮಠ ಸವಣೂರು ನಿರೂಪಣೆ ಮಾಡಿದರು. ಸಮಾರಂಭದ ನಂತರ ದೀಪೋತ್ಸವ ಸಂಭ್ರಮದಿಂದ ಜರುಗಿತು.

ಶಾಂತಮ್ಮ ಹೆಚ್. ಶಿವಣ್ಣಗೌಡ ಮತ್ತು ಮಕ್ಕಳು ಹೊಸಕೆರೆ ಇವರ ಸೇವೆಯಲ್ಲಿ ಅನ್ನ ದಾಸೋಹ ನಿರಂತರವಾಗಿ ಜರುಗಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!