ಅವಳೊಬ್ಬಳು ಇಲ್ಲದಿದ್ದರೆ…. !

0
715

– ಈಜಿಪ್ಟಿನ ಪ್ರವಾಸ ಕಥನ

ಅವಳೊಬ್ಬಳು ಇಲ್ಲದಿದ್ದರೆ ಈಜಿಪ್ಟಿಗೆ ಈಜಿಪ್ಟೇ ಇರುತ್ತಿರಲಿಲ್ಲ. ಅವಳು ಮೂಲತ ಅಲ್ಲಿಯವಳು ಅಲ್ಲವೇ ಅಲ್ಲ. ಆಕೆ‌ ಹುಟ್ಟಿದ್ದು ಅಲ್ಲಿಂದ ಸುಮಾರು ಮೂರು ಸಾವಿರ ಕಿ.ಮೀ ದೂರದಲ್ಲಿ. ಎಲ್ಲೋ‌ ಹುಟ್ಟಿ ಎಲ್ಲೋ ಬೆಳೆದು ಬಾಳಿ ಬದುಕಿಸಿದ್ದು ಮಾತ್ರ ಈಜಿಪ್ಟ್ ಅನ್ನು ಅವಳೊಬ್ಬಳು ಈಜಿಪ್ಟಿಗೆ ಬರದಿದ್ದರೆ ಇವತ್ತಿನ ಗಿಜಾ ಪಿರಮಿಡ್ಡಾಗಲಿ,ಈಜಿಪ್ಟಿನ‌ ಯುನೆಸ್ಕೋ ಹೆರಿಟೇಜುಗಳಾಗಲಿ,ಅಲ್ಲಿನ ಮಹಾನಾಗರೀಕತೆಯಾಗಲಿ ಹುಟ್ಟುತ್ತಲೇ ಇರಲಿಲ್ಲ. ಆದರೆ ಆ ಮಹಾತಾಯಿ ಹುಟ್ಟಿ ಬೆಳೆದ ಊರಿಗಿಂತ ಉದ್ದಾರ ಮಾಡಿದ್ದು ಈಜಿಪ್ಟನ್ನು. ಅವಳು ಮಹಾನದಿ ನೈಲ್.

ಹುಲ್ಲು ಹುಟ್ಟಲೂ ಊಹೆ ಮಾಡಲಾಗದ ಸಹಾರ ಮರುಭೂಮಿಯ ಒಂದು ಭಾಗವೇ ಆಗಿರುವ ಈಜಿಪ್ಟಿನಲ್ಲಿ ನೈಲ್ ನದಿ ಕೇವಲ ನದಿ ಮಾತ್ರವಲ್ಲ ಅದೊಂದು ಜೀವಜಲ. ಈಜಿಪ್ಟ್‌ನ ಸಮಸ್ತವೂ ಹಿಂದೆಯೂ ನೈಲೇ ಆಗಿತ್ತು,ಇಂದಿಗೂ ಆಗಿದೆ,ಮುಂದೆಯೂ ಆಗಿರುತ್ತೆ. ಹೆರೋಡಾಟಸ್ ಹೇಳಿದಂತೆ ಈಜಿಪ್ಟು ನೈಲ್ ನದಿಯ ಗಿಫ್ಟು.

ಯಸ್, ನೈಲ್ ಜಗತ್ತಿನ‌ ಅತ್ಯಂತ ಉದ್ದವಾದ ನದಿ. ನೈಲ್ ನದಿ ಎಲ್ಲಿ ಹುಟ್ಟುತ್ತದೆ ಎಂದು ಕಂಡು ಹಿಡಿಯಲಿಕ್ಕೇ ಶತಮಾನಗಳೇ ಕಳೆದಿದ್ದವಂತೆ. ಜೀವಮಾನವಿಡೀ ನೈಲ್ ನದಿಯ ಮೂಲವನ್ನು ಕಂಡು ಹಿಡಿಯಲು ಬದುಕು ಸವೆಸಿದ ಹಲವು ಕಥೆಗಳಿವೆ. ಗ್ರೀಕ್ ಹಿಸ್ಟೋರಿಯನ್ ಹೆರೋಡಾಟಸ್ ಪ್ರವಾಹವನ್ನೇ ಹೊತ್ತು ತಂದು ಮೆಡಿಟರೇನಿಯನ್ ಗೆ ದುಮ್ಮಿಕ್ಕುವ ನದಿಯ ಬಗ್ಗೆ ಕ್ರಿಸ್ತ ಪೂರ್ವದಲ್ಲೇ ವರ್ಣಿಸಿದ್ದಾನೆ. ನೈಲ್ ಎಲ್ಲಿಂದ ಹುಟ್ಟಿ ಬರುತ್ತದೆಂದು ಕಾಲಕಾಲಕ್ಕೆ‌ ರಾಜರುಗಳು, ವಿದ್ವಾಂಸರು, ಸರ್ವಾಧಿಕಾರಿಗಳು ಹುಡುಕುತ್ತಲೇ ಬಂದಿದ್ದಾರೆ.

ಎರಡನೇ ಟಾಲಮಿ ಫಿಲಿಡೆಲ್ಫಸ್ ಎಂಬಾತನನ್ನು ಪ್ರವಾಹ ಉಂಟುಮಾಡುವ ನೈಲ್ ನ ಮೂಲ ಕಂಡು ಹಿಡಿಯಲು ಕಳುಹಿಸಿದ್ದನಂತೆ. ಬಹುತೇಕ ಹಿಂದಿನ ದೊರೆಗಳು ಈಗಿನ ಇಥಿಯೋಪಿಯಾದ ಟಾನ (TANA) ಸರೋವರವೇ ನೈಲ್ ನ‌ ಮೂಲ‌ ಎಂದು ಭಾವಿಸಿದ್ದರು. ಹದಿನಾಲ್ಕನೇ ಶತಮಾನದಲ್ಲಿ ಯುರೋಪಿನಿಂದ ಆಫ್ರಿಕಾಗೆ ಪೋಪ್ ಕಳುಹಿಸಿದ ವಿದ್ವಾಂಸರುಗಳೂ ಅಂದಿನ‌ ಅಬಿಸೀನಿಯಾವೇ(ಇಂದಿನ‌ ಇಥಿಯೋಪಿಯಾ) ನೈಲ್ ನ‌ ಮೂಲ ಎಂದೇ ಭಾವಿಸಿದ್ದರು.

1858 ರಲ್ಲಿ ಬ್ರಿಟೀಷ್ ಜಾನ್ ಹ್ಯಾನಿಂಗ್ ಸ್ಪೀಕೆ ಹಾಗೂ ಅವನ ಗೆಳೆಯ ರಿಚರ್ಡ್ ಬರ್ಟನ್ ಸೂಡಾನಿನಿಂದ ದಕ್ಷಿಣಕ್ಕೆ ಚಲಿಸುತ್ತ ಇಂದಿನ ಆಫ್ರಿಕಾ ಖಂಡದ ಮಧ್ಯಭಾಗವನ್ನು ಪ್ರವೇಶಿಸುತ್ತಾರೆ. ಬರ್ಟನ್ ಅನಾರೋಗ್ಯದಿಂದ ವಾಪಾಸಾದರೆ ಸ್ಪೀಕೆ ಮಾತ್ರ ಆಫ್ರಿಕಾದ ಮಧ್ಯದಲ್ಲೊಂದು ದೊಡ್ಡ ಸರೋವರನ್ನು ಕಂಡು ಹಿಡಿದು ಆ ಸರೋವರಕ್ಕೆ ಇಂಗ್ಲೆಂಡ್ ರಾಣಿ ವಿಕ್ಟೋರಿಯಾಳ ಹೆಸರಿಡುತ್ತಾನೆ. ಅದೇ ಇಂದಿನ ವಿಕ್ಟೋರಿಯಾ ಲೇಕ್. ಅದುವೇ ಜಗತ್ತಿನ‌ ಅತೀ ದೊಡ್ಡ ಸರೋವರ.

ಈ‌ ಮಧ್ಯೆ ಆತನ ಗೆಳೆಯ‌ ಬರ್ಟನ್ ವಾಪಾಸು ಬಂದು‌ ವಿಕ್ಟೋರಿಯಾದಿಂದ ದಕ್ಷಿಣಕ್ಕಿರುವ ಟಾಂಗನೀಕ‌ ಸರೋವರವೇ ನೈಲ್ ನ‌ ಮೂಲವೆಂದು‌ ತನ್ನ‌ವಾದ ಮಂಡಿಸುತ್ತಾನೆ. ನೈಲ್ ನ‌ ಮೂಲ‌ ಹುಡುಕಲು ಹೋದ ಇನ್ನೊಬ್ಬ ಬ್ರಿಟಿಷ್ ಪ್ರಜೆ ಡೇವಿಡ್ ಲಿವಿಂಗ್ ಸ್ಟೋನ್ ಕಾಂಗೋ ನದಿಯ ಮೂಲಕ್ಕೆ ಹೋಗುತ್ತಾನೆ.

ಅಂತೂ‌ ಆಧುನಿಕ‌ ಜಗತ್ತಿಗೆ ಲೇಕ್ ವಿಕ್ಟೋರಿಯಾವೇ ನೈಲ್ ನ‌ ಮೂಲ‌ ಎಂದು‌ ಜಾನ್ ಸ್ಪೀಕೆಯ‌ ವಾದವನ್ನು ಖಚಿತಪಡಿಸಿದ್ದು ಹೆನ್ರಿ‌ ಮೋರ್ಟನ್ ಸ್ಟಾನ್ಲೆ. ವಿಕ್ಟೋರಿಯಾ ಸರೋವರಕ್ಕೆ ಹಲವಾರು ನದಿಗಳು‌ ಒಳಗೆ ಹರಿದು ಬರುತ್ತವೆ. ವಿಕ್ಟೋರಿಯಾ ಸರೋವರ ಇಂದಿನ ಕೀನ್ಯಾ,ತಾಂಝಾನಿಯ ಹಾಗೂ ಉಗಾಂಡಗಳೊಂದಿಗೆ‌ ಗಡಿ‌ ಹಂಚಿಕೊಂಡಿದೆ. ಬುರುಂಡಿ,ಕೀನ್ಯಾ,ರುವಾಂಡ,ತಾಂಝಾನಿಯಾ,ಉಗಾಂಡದ ಬೇರೆ ಬೇರೆ ನದಿಗಳು (ಮಾರ, ಗ್ರುಮ್ಮೆಟಿ, ಸಿಮಾವು, ಖಗೇರ, ಕಟೋಂಗ) ಬಂದು ಲೇಕ್ ವಿಕ್ಟೋರಿಯಾ ಸೇರುತ್ತವೆ. ಇವೆಲ್ಲ ಒಳ ಬರುವ ನದಿಗಳು.

ಆದರೆ ಸ್ಟಾನ್ಲೆ ವಿಕ್ಟೋರಿಯಾ ಲೇಕ್ ನ,ರಿಪ್ಪನ್ ಫಾಲ್ಸ್ ಬಳಿಯೊಂದು‌ ಕಡೆ ನದಿಯೊಂದು‌ ಹೊರಹೋಗುವುದನ್ನು‌ ಗಮನಿಸುತ್ತಾನೆ. ಆ ಮೂಲಕ ಈ‌ ಹಿಂದೆ ಜಾನ್ ಸ್ಪೀಕೆಯ ವಾದವಾದ ವಿಕ್ಟೋರಿಯಾ ಸರೋವರವೇ ನೈಲ್ ನ ಮೂಲವೆಂದು ತೋರಿಸಿಕೊಡುತ್ತಾನೆ. ಅದುವೇ ಇಂದಿನ ವೈಟ್ ನೈಲ್.

ಹೀಗೆ ವಿಕ್ಟೋರಿಯಾದಲ್ಲಿ ಹುಟ್ಟಿದ ನೈಲ್ ಮುಂದೆ ಜಗತ್ತಿನ ಹತ್ತು ದೇಶಗಳಲ್ಲಿ ಹರಿದು( ಆ ದೇಶಗಳ‌ ನೀರು ಪಡೆಯುತ್ತಾ ಬೆಳೆದು) ನಂತರ ಬಂದು ಸೇರೋದು ಈಜಿಪ್ಟು.

ಆ ದೇಶಗಳೆಂದರೆ ಬುರುಂಡಿ, ತಾಂಝಾನಿಯಾ, ರುವಾಂಡ, ಡೆಮಾಕ್ರಟಿಕ್ ರಿಪಬ್ಲಿಲ್ ಆಫ್ ಕಾಂಗೋ, ಕೀನ್ಯಾ, ಕಾಂಗೋ, ಎರಿಟ್ರಿಯ, ಇಥಿಯೋಪಿಯಾ, ಸೌತ್ ಸೂಡಾನ್ ಹಾಗೂ ಸೂಡಾನ್.

ಇಥಿಯೋಪಿಯಾದ ಟಾನ ಸರೋವರದಿಂದ ಹರಿದು ಬರುವ ನದಿಯೊಂದು ಇಂದಿನ‌ ಸೂಡಾನ್ ರಾಜಧಾನಿ ಖರಟೋಮ್ ನಲ್ಲಿ ಬಿಳಿ ನೈಲ್ ಗೆ ಮತ್ತೊಬ್ಬಳು ಚೆಲುವೆ ಜೊತೆಯಾಗತ್ತಾಳೆ. ಅವಳೇ ಬ್ಲೂ ನೈಲ್. ಅವರಿಬ್ಬರೂ ಸೇರಿ ಮನ್ನಡೆಯೋದು ಸಹಾರ ಮರುಭೂಮಿಯೊಂದರ ಭಾಗವಾದ ಈಜಿಪ್ಟಿನೆಡಗೆ. ಅದಕ್ಕೆ ಹೇಳಿದ್ದು ಅವಳು ಹುಟ್ಟಿದ್ದು ಎಲ್ಲೋ,ಬೆಳೆದಿದ್ದು ಎಲ್ಲೋ ಬದುಕಿ ಬಾಳಿ ಬಾಳಿಸಿದ್ದು ಎಲ್ಲೋ ಅಂತ….

ಆಫ್ರಿಕಾ‌ ಖಂಡದ‌‌ ದಕ್ಷಿಣದ ಹಸಿರು‌ ಭಾಗ ವಿಕ್ಟೋರಿಯಾದಲ್ಲಿ ಹುಟ್ಟಿ, ಮರುಭೂಮಿಯನ್ನು‌ ಹೊಕ್ಕಿ ಅಲ್ಲೆಲ್ಲ‌ ಬದುಕಿ ಬಾಳಿ ಮೆಡಿಟರೇನಿಯನ್‌ ಸೇರುವಷ್ಟರ ಹೊತ್ತಿಗೆ ಆಕೆ ಬರೋಬ್ಬರಿ 6695 ಕಿಲೋ‌ಮೀಟರು‌ ಬಂದಿರುತ್ತಾಳೆ. ಜಗತ್ತಿನ‌ ಅತ್ಯಂತ ಉದ್ದದ ನದಿ ಅವಳು.

ಭಾರತದ ಕಾಶ್ಮೀರದಿಂದ‌ ಕನ್ಯಾಕುಮಾರಿ ಇರುವುದು ಸುಮಾರು ಮೂರುವರೆ ಸಾವಿರ ಕಿಲೋ‌ಮೀಟರ್‌. ಅಂದರೆ ನೈಲ್ ಮಾಹಾತಾಯಿ ಸುಮಾರು ಅದರ‌ ದುಪ್ಪಟ್ಟು‌ ಹರಿಯುತ್ತಾಳೆಂದರೆ ನೀವೆಲ್ಲಾ‌ ಊಹಿಸಬಹುದು ಅವಳ‌ ಅಗಾಧ ಗಾತ್ರ ಮತ್ತು ಉದ್ದವನ್ನು.

ನೈಲ್ ನದಿ ಹರಿಯುವ ಎರಡೂ ಭಾಗಗಳು ಹುಲ್ಲು ಹಸಿರಾಗಿ ಕಂಗೊಳಿಸುತ್ತವೆ.ಅಲ್ಲಿ ಬಹುತೇಕ ಭಾರತದಲ್ಲಿ‌ ಬೆಳೆಯುವ ಬಹುತೇಕ ಬಹುತೇಕ ಬೆಳೆಗಳನ್ನು ಬೆಳೆಯುತ್ತಾರೆ. ಹೇರಳವಾದ ಪ್ರಾಣಿ‌ ಸಂಪತ್ತು ಇದೆ. ವಿಮಾನದಿಂದ‌ ನೋಡಿದರೆ ನೈಲ್ ನ‌ ಅಕ್ಕ‌ಪಕ್ಕ‌ ಬಿಟ್ಟರೆ ಮತ್ತೆಲ್ಲ ಕಡೆ ಸುಡುಗಾಡೇ ತೊಂಬತ್ತೈದು ಭಾಗ ಈಜಿಪ್ಟಿನ ಜನಸಂಖ್ಯೆ ನೈಲ್ ದಂಡೆಯಲ್ಲಿಯೇ ಬದುಕುತ್ತಿದೆ.

ಇದೇ ನೈಲ್ ನದಿಗೆ ಅಡ್ಡಲಾಗಿ ಆಸ್ವಾನ್ ನಲ್ಲಿ ಡ್ಯಾಮ್ ಒಂದನ್ನು ಕಟ್ಟಿ ಕೃಷಿಗೆ ಬೇಕಾದಷ್ಟು ನೀರು‌ ಸಂಗ್ರಹಿಸುವುದರ ಜೊತೆಗೆ ವಿದ್ಯುಚ್ಛಕ್ತಿ ಉತ್ಪಾದಿಸಿಕೊಳ್ಳುತ್ತಿದ್ದಾರೆ. ಹಾಗೆ ಅಡ್ಡಲಾಗಿ ಡ್ಯಾಮ್ ಕಟ್ಟಿದ್ದರಿಂದ ಲೇಕ್ ನಾಸೀರ್ ನ ವಿಸ್ತೀರ್ಣ ಹೆಚ್ಚಾಗಿದೆ. ಬರೋಬ್ಬರಿ ಐದುನೂರು ಕಿಲೋ ಮೀಟರುಗಳಷ್ಟು ಉದ್ದ ಇದೆ ಲೇಕ್ ನಾಸೀರ್. ಇದು ಮುನ್ನೂರೈವತ್ತು ಕಿ.ಮೀ ಈಜಿಪ್ಟಿನಲ್ಲಿದ್ದರೆ ನೂರೈವತ್ತು ಕಿ.ಮೀ ಸೂಡಾನಿನಲ್ಲಿದೆ. ಇದಕ್ಕೆಲ್ಲ ನೀರು ತಂದು‌ ಸುರಿದು ತುಂಬಿಸಿ,ಕರೆಂಟು ಕೊಟ್ಟು,ಸುಮಾರು ಹತ್ತು ಕೋಟಿ ಈಜಿಪ್ಟಿನ‌ ಜನಕ್ಕೆ ಕುಡಿಯಲು ಮತ್ತು ಕೃಷಿಗೆ ನೀರು ಕೊಟ್ಟು, ಹಲವು(ಕೈರೋ,ಆಸ್ವಾನ್,ಲಕ್ಸರ್,ಎಡ್ಫು) ನಗರಗಳನ್ನು ಹುಟ್ಟು ಹಾಕಿ ಅವುಗಳ ದಾಹ ಇಂಗಿಸಿಯೂ ಕೊನೆಗೆ ನೈಲು ಮೆಡಿಟರೇನಿಯನ್ನಿಗೆ ತಂದು‌ ಸುರಿಯುವುದು ನಿಮಿಷಕ್ಕೆ 3.1 ಮಿಲಿಯನ್ನು‌ ಲೀಟರ್ರು ನೀರನ್ನು ಅಂದರೆ ಆರು ಲಕ್ಷದ ಎಂಬತ್ತು ಸಾವಿರ ಗ್ಯಾಲನ್ನಿನಷ್ಟು…

ಈ‌ ನಡುವೆ ನಮ್ಮ ಟೂರ್ ಗೈಡೊಬ್ಬನನ್ನು ಕೇಳಿದೆ ವರುಷಕ್ಕೆ ಎಷ್ಟು ದಿನ ಆಸ್ವಾನಿನಲ್ಲಿ ಮಳೆ ಬರುತ್ತದೆ ಎಂದು. ಆತ ಹೇಳಿದ್ದು “ಒಂದೋ ಇಲ್ಲ‌ ಎರಡು ದಿನ. ಅದೂ ಸ್ವಲ್ಪ ಹೊತ್ತು ಮಾತ್ರ ಅಂದ” ಎಲ್ಲಿಂದ ನಗಬೇಕೋ ಗೊತ್ತಾಗಲಿಲ್ಲ…

ಹಾಗಂತ ಈ ಬರಹ ಬರೆದಿದ್ದು ನೈಲ್ ನದಿಯಲ್ಲಿ ತೇಲುತ್ತಲೇ. ನಮ್ಮನ್ನು ಹೊತ್ತ ಕ್ರೂಸ್ ಈಗ ಆಸ್ವಾನು ದಾಟಿ ಕೊಮ್ ಒಂಬುವಿನಿಂದ ಎಡ್ಫು ಕಡೆ ಹೊರಟಿದೆ. ಬೆಳಗ್ಗೆ ಅರಿಷಿನ‌ ಕುಂಕುಮದ ನಮ್ಮ ಧ್ವಜ ಡೆಕ್ ನಲ್ಲಿ ನಿಂತು ನೈಲ್ ನದಿಯಲ್ಲಿ ಹಾರಿಸಿದ್ದೆ. ಸದಾ ಬಿಸಿನೀರೇ‌ ಕುಡಿಯುವ ನಾನು ಅರ್ಧ ಲೀಟರ್ರು ನೈಲ್ ನೀರನ್ನು ಆಗಿದ್ದಾಗಲಿ ಎಂದು ಕಾಯಿಸದೇ ಕುಡಿದಿದ್ದೇನೆ. ಇನ್ನೆರಡು ದಿನ ನೈಲ್ ನೊಂದಿಗೆಯೇ ಒಡನಾಟ……..

ಬರಹಗಾರರು: ಮಗ್ಗಲಮಕ್ಕಿ ದಿವಿನ್
ಜಾಹಿರಾತು

LEAVE A REPLY

Please enter your comment!
Please enter your name here