23.2 C
Shimoga
Sunday, November 27, 2022

ಆಗ ಮಗಳು, ಪತಿ ಈಗ ಮಗ ಹೀಗೆ ಇಡೀ ಸಂಸಾರದ
ಸದಸ್ಯರನ್ನು ಕಳೆದುಕೊಂಡು ದಿಕ್ಕಿಲ್ಲದಂತಾದ ತಾಯಿ‌ ! ಒಂದು ಅಪಘಾತ ಎರಡು ಕೃಷಿ ಕೂಲಿ
ಕಾರ್ಮಿಕ ಕುಟುಂಬಗಳು ಅನಾಥಸ್ಥಿತಿ

ಹೊಸನಗರ : ಹುಲಿಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಒಂದು ಅಪಘಾತ ಎರಡು ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳನ್ನು ಅನಾಥವನ್ನಾಗಿ ಮಾಡಿದೆ.

ಕ್ಷಣ ಮಾತ್ರದಲ್ಲಿ ಸಂಭವಿಸುವ ಅಪಘಾತಗಳು ಕೇವಲ ಜೀವಹಾನಿ ಮಾಡುವುದಷ್ಟೇ ಅಲ್ಲ, ಕೆಲ ಕುಟುಂಬಗಳ ದಿಕ್ಕನ್ನೇ ಬದಲಾಯಿಸುತ್ತವೆ. ಹುಲಿಕಲ್‌ನಲ್ಲಿ ನಡೆದ ಈ ಅಪಘಾತ ಇದಕ್ಕೊಂದು ನಿದರ್ಶನವಾಗಿದೆ.
ಅಪಘಾತ ಸ್ಥಳದ ಮನಕಲಕುವ ದೃಶ್ಯ ಒಂದೆಡೆಯಾದರೆ, ಇರುವ ಒಬ್ಬ ಮಗನನ್ನೂ ಕಳೆದುಕೊಂಡ- ಅನಾಥ ತಾಯಿಯ ಪರಿಸ್ಥಿತಿ ಎಂತವರನ್ನೂ ಕರಗುವಂತೆ ಮಾಡಿತ್ತು.
ಕಂಪದಕ್ಕೆ ಗ್ರಾಮದ ಇಂದ್ರಮ್ಮ(47) ಇವರಿಗೆ ಇಬ್ಬರು ಮಕ್ಕಳು. ಹಿರಿಯವಳು ಎರಡು ವರ್ಷದ ಹಿಂದೆ ಮನೆಯಲ್ಲಿ ಜೋಕಾಲಿ ಆಟವಾಡುವ ವೇಳೆ ಜೋಕಾಲಿಯ ಹಗ್ಗ ಬಿಗಿದು ಮೃತಪಟ್ಟಿದ್ದಳು. ಇದಾದ ಕೆಲ ಸಮಯದಲ್ಲಿಯೇ ಇವರ ಪತಿ ಸಹ ಕಾಯಿಲೆಯಿಂದ ಮೃತಪಟ್ಟಿದ್ದರು. ದಿಕ್ಕಿಲ್ಲದ್ದ ಸಂಸಾರಕ್ಕೆ ಉಳಿದಿದ್ದ ವಾರಸುದಾರ ಶಿಶಿರ ನಿನ್ನೆ ತನ್ನ ಚಿಕ್ಕಪ್ಪನ ಜತೆ ದೇವಸ್ಥಾನಕ್ಕೆ ಹೋದವ ಜೀವಂತವಾಗಿ ಮರಳಲಿಲ್ಲ.
ಮಗಳು, ಪತಿ, ಮಗ ಹೀಗೆ ಇಡೀ ಸಂಸಾರದ
ಸದಸ್ಯರನ್ನು ಕಳೆದುಕೊಂಡ ತಾಯಿಗೆ ಈಗ ದಿಕ್ಕಿಲ್ಲದಂತಹ
ಪರಿಸ್ಥಿತಿ ಬಂದೊದಗಿದೆ.

ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿತ್ತು.

ಮಾಸ್ತಿಕಟ್ಟೆ ಸಮೀಪದ ಹುಲುಗಾರು ಕಂಪದಕ್ಕೆ ಗ್ರಾಮದ ರವಿ(45), ಅವರ ಅಣ್ಣನ ಮಗ ಶಿಶಿರ(12) ಮೃತಪಟ್ಟವರು. ರವಿ ಅವರ ಪತ್ನಿ ಶಾಲಿನಿ(40) ಗಾಯಗೊಂಡಿದ್ದಾರೆ. ಹುಲಿಕಲ್ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ಮನೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

ಶಿಶಿರನನ್ನು ಬಸ್‌ಗೆ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನಿಂತ ಬದಿ
ನಿಂತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಮೂವರಿಗೆ ಡಿಕ್ಕಿ ಹೊಡೆದಿದ್ದು, ವಾಹನದ ಹಿಂದಿನ ಚಕ್ರ ರವಿ ಹಾಗೂ ಬಾಲಕ ಶಿಶಿರ ಅವರ ತಲೆಯ ಮೇಲೆ ಹಾಗೂ ಶಾಲಿನಿ ಅವರ ಕಾಲಿನ ಮೇಲೆ ಚಲಿಸಿದೆ. ರವಿ ಹಾಗೂ ಬಾಲಕ ಶಿಶಿರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಾಲಿನಿ ಅವರ ಒಂದು ಕಾಲು ತುಂಡಾಗಿದ್ದು, ಇನ್ನೊಂದು ಕಾಲು ಸಹ ಜಖಂಗೊಂಡಿದೆ. ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಸ್ತೆ ಮೇಲೆ ಶವಗಳು ಬಿದ್ದಿದ್ದ ಕಾರಣ ವಾಹನ ಸಂಚಾರ ಅಸಾಧ್ಯವಾಗಿತ್ತು. ಸುಮಾರು ಎರಡು ತಾಸು ವಾಹನ ನಿಲುಗಡೆ ಆಗಿತ್ತು. 400ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ನಿಂತಿದ್ದು ಪ್ರಯಾಣಿಕರು ಪರದಾಡಬೇಕಾಯಿತು.

ಮೃತ ರವಿ ಮತ್ತು ಶಿಶಿರ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನಡೆಯಿತು. ರವಿ ಸಹೋದರ ನಾಗಪ್ಪಗೌಡ, ರವಿಯ ಇಬ್ಬರು ಗಂಡು ಮಕ್ಕಳ ರೋಧನ ಹೇಳತೀರದಾಗಿತ್ತು.

ಅಪಘಾತ ಆಗುತ್ತಿದ್ದಂತೆ ಚಾಲಕರು ಲಾರಿ ನಿಲ್ಲಿಸದೇ ಪರಾರಿ ಆಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!