ಚಿಕ್ಕಮಗಳೂರು: ನಗರದಲ್ಲಿರುವ ಆಟೋಗಳಿಗೆ ಎಫ್.ಸಿ. ಹಾಗೂ ಇನ್ಸೂರೆನ್ಸ್ ಕಾಲಾವಕಾಶ ಸೇರಿದಂತೆ ವಿವಿಧ ಬೇಡಿಕೆಗಳಿಗೆ ದೊರಕಿಸಿಕೊಡಬೇಕು ಎಂದು ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಪೊಲೀಸ್ ವರಿಷ್ಟಾಧಿಕಾರಿ ಎಂ. ಎಚ್. ಅಕ್ಷಯ್ ರವರಿಗೆ ಬುಧವಾರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಸಾಮೂಹಿಕ ಎಫ್.ಸಿ ಮಾಡುವ ಕುರಿತು ಹಾಗೂ ಆಟೋ ಗ್ಯಾಸ್ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಆಟೋಗಳು ಸಂಚರಿಸುತ್ತಿದ್ದು ಕೆಲವು ಆಟೋಗಳಿಗೆ ಎಫ್.ಸಿ. ಹಾಗೂ ಇನ್ಸೂರೆನ್ಸ್ ಆಗಬೇಕಾಗಿದೆ. ಆದರೆ ಕೊರೊನಾ ಮಹಾಮಾರಿ ರೋಗದಿಂದ ಯಾವುದೇ ತರಹದ ಆಟೋ ಚಾಲಕರು ಮತ್ತು ಮಾಲೀಕರಿಗೆ ಸಮರ್ಥವಾಗಿ ದುಡಿಮೆ ಇಲ್ಲದಿರುವುದು ಹಾಗೂ ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ಶಾಲೆಯ ದುಬಾರಿ ಶುಲ್ಕ ಭರಿಸಲು ಸಮಸ್ಯೆ ಉದ್ಬವಿಸಿದೆ.
ಈ ನಡುವೆ ಆಟೋಗಳನ್ನು ಎಫ್.ಸಿ. ಇನ್ಸೂರೆನ್ಸ್ ಮಾಡಿಲ್ಲ ಎಂದು ಗಾಡಿಗಳನ್ನು ಸೀಜ್ ಮಾಡಲಾಗು ತ್ತಿದ್ದು ಚಾಲಕರು, ಮಾಲೀಕರಿಗೆ ತುಂಬಾ ಸಂಕಷ್ಟ ಉಂಟಾಗಿದೆ. ಒಂದು ಕಡೆ ದುಡಿಮೆ ಇಲ್ಲದೇ ಬದುಕು ಬೀದಿಯಲ್ಲಿ ನಿಂತಿದೆ. ಆದ್ದರಿಂದ ಆಟೋ ಚಾಲಕರಿಗೆ ಹಾಗೂ ಮಾಲೀಕರನ್ನು ಮಾನವೀತೆಯ ದೃಷ್ಟಿಯಿಂದ ಎಫ್. ಸಿ. ಹಾಗೂ ಇನ್ಸೂರೆನ್ಸ್ಗೆ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನಗರ ಸಾರಿಗೆ ಪ್ರಾಧಿಕಾರ ಇಲಾಖೆಯಲ್ಲಿ ಆಟೋಗಳಿಗೆ ಸಾಮೂಹಿಕ ಎಫ್.ಸಿ. ಮಾಡುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆ ದಲ್ಲಾಳಿಯ ಮುಖಾಂತರ ಎಫ್. ಸಿ. ಮಾಡುವುದು ಆಟೋದವರಿಗೆ ದುಬಾರಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಮೂಹಿಕ ಎಫ್.ಸಿ. ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಗರದ ಮೂಡಿಗೆರೆ ರಸ್ತೆಯಲ್ಲಿರುವ ಗ್ಯಾಸ್ ಬಂಕ್ನಲ್ಲಿ ಸರಿಯಾದ ರೀತಿಯಲ್ಲಿ ಗ್ಯಾಸ್ ಸಪ್ಲೈ ನೀಡುತ್ತಿಲ್ಲ. ಜೊತೆಗೆ ನಗರದಿಂದ 3 ರಿಂದ 4 ಕಿ.ಮೀ. ದೂರದಲ್ಲಿದೆ. ಗ್ಯಾಸ್ ಬಂಕ್ಗೆ ತೆರಳಿ ಕೇಳಿದರೆ ಖಾಲಿಯಾಗಿದೆ ಎಂದು ಉತ್ತರಿಸುತ್ತಾರೆ. ಈ ಬಗ್ಗೆಯೂ ಕೂಡಾ ಸಂಬಂಧಪಟ್ಟವರೊಂದಿಗೆ ಚರ್ಚಿಸುವ ಮೂಲಕ ಆಟೋ ಚಾಲಕರು ಹಾಗೂ ಮಾಲೀಕರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್. ರಾಮೇಗೌಡ, ಉಪಾಧ್ಯಕ್ಷ ಎಸ್. ರವಿ. ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್. ಸಿ. ರಾಘವೇಂದ್ರ, ಕಾರ್ಯಾಧ್ಯಕ್ಷ ಉದಯ್ಕುಮಾರ್, ಕಾರ್ಯದರ್ಶಿ ಜಗದೀಶ್ ಕೋಟೆ, ಸದಸ್ಯರುಗಳಾದ ಸತೀಶ್, ಭದ್ರು, ಮಂಜುನಾಥ್, ಯಶವಂತ್, ವಸಂತ್, ಸೋಮಣ್ಣ ದ್ವಾರಕೇಶ್, ಮಧು ಮತ್ತಿತರರು ಹಾಜರಿದ್ದರು.
Related