ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮನೋಭಾವ ಪ್ರತಿಯೊಬ್ಬ ಸರ್ಕಾರಿ ನೌಕರ ಬೆಳೆಸಿಕೊಳ್ಳಬೇಕು, ಆಗ ಸುಂದರ ಸಮಾಜ ನಿರ್ಮಾಣ ಸಾಧ್ಯ ; ನ್ಯಾಯಾಧೀಶ ಆರ್.ಯಶವಂತ್ ಕುಮಾರ್

0
102

ಶಿಕಾರಿಪುರ: ದೇವರು ಸೇವೆ ಮಾಡುವುದಕ್ಕಾಗಿ ನನಗೊಂದು ಕುರ್ಚಿ ನೀಡಿದ್ದಾನೆ ಅದರಲ್ಲಿ ಕೂತು ಪ್ರಮಾಣಿಕತೆ, ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮನೋಭಾವ ಪ್ರತಿಯೊಬ್ಬ ಸರಕಾರಿ ನೌಕರ ಬೆಳೆಸಿಕೊಳ್ಳಬೇಕು ಆಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಯಶವಂತ್ ಕುಮಾರ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾ.ಪಂ., ಪೊಲೀಸ್ ಇಲಾಖೆ, ವಕೀಲರ ಸಂಘ ಆಯೋಜಿಸಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕುರಿತು ಕಾನೂನು ಅರಿವು ನೆರವು ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಚೇರಿ ಕೆಲಸಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಪ್ರೀತಿಸಿ ಅವರಿಗೆ ದ್ವೇಷ ಮಾಡಲು ಹೋದರೆ ಅದು ಅವನಿಗೆ ಶಿಕ್ಷಿಸಿದಂತೆ ಅಲ್ಲ ಬದಲಿಗೆ ಮೊದಲು ನಮ್ಮ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ ಆರೋಗ್ಯ ಕೆಡುತ್ತದೆ ಒಳ್ಳೆ ಆಲೋಚನೆ, ಒಳ್ಳೆ ಕೆಲಸ ಮಾಡದಂತೆ ಆಗುತ್ತದೆ, ತನ್ಮೂಲಕ ಜೀವನದ ಹಳಿಯೂ ತಪ್ಪುತ್ತದೆ ಅದಕ್ಕೆ ಅವಕಾಶ ನೀಡಬಾರದು. ಪ್ರೀತಿಯಿಂದ ಎರಡು ಮಾತನಾಡಿ ನಿಮ್ಮ ಕರ್ತವ್ಯ ಸರಿಯಾಗಿ ಮಾಡಿ ಆಗ ಎಂದಿಗೂ ಮೈಂಡ್ ಬ್ಯಾಲೆನ್ಸ್ ತಪ್ಪುವುದಿಲ್ಲ ಎಂದರು.

ಲೋಕಾಯುಕ್ತ ಡಿವೈಎಸ್‌ಪಿ ಎನ್.ಮೃತ್ಯುಂಜಯ ಮಾತನಾಡಿ, ಭ್ರಷ್ಟಾಚಾರ ಕಡಿವಾಣಕ್ಕೆ ಸಕಾಲ ಕಾಯ್ದೆ ಜಾರಿಗೊಂಡಿದೆ ಆದರೆ ಜಾತಿ, ಆದಾಯ, ವಂಶವೃಕ್ಷ ಸೇರಿ ಹಲವು ಅರ್ಜಿಗಳನ್ನು ಕೊನೆ ದಿನ ವಜಾಗೊಳಿಸುವುದು ಹೆಚ್ಚಾಗಿದೆ ವಜಾ ಮಾಡುವುದಾದರೆ ಎರಡೆ ದಿನದಲ್ಲಿ ಮಾಡಿರಿ ಆಗ ಸಮಸ್ಯೆ ಪರಿಹಾರಕ್ಕೆ ಅವಕಾಶ ಸಿಗುತ್ತದೆ. ಸಿಂಧುತ್ವಕ್ಕೆ ಅರ್ಜಿ ಸಲ್ಲಿಸಿದಾಗಲೂ ಹಾಗೆ ಆಗುತ್ತದೆ ಅದು ನಿರುದ್ಯೋಗಿಗಳ ಜೀವನದೊಂದಿಗೆ ಆಟವಾಡಿದಂತೆ ಆಗುತ್ತದೆ ಒಳ್ಳೆಯ ಮನಸ್ಥಿತಿಯೊಂದಿಗೆ ಕಾರ‍್ಯನಿರ್ವಹಿಸಿರಿ. ಆರ್‌ಟಿಐ ಅಡಿ ಜಿಲ್ಲಾ ಮಟ್ಟದ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಅದನ್ನು 20ದಿನ ಬಿಟ್ಟು ತಾಲೂಕು ಕಚೇರಿಗೆ ಕಳುಹಿಸಲಾಗುತ್ತದೆ ಪುನಃ 20ದಿನ ನಂತರ ಮತ್ತೊಬ್ಬರಿಗೆ ವರ್ಗಾವಣೆ ಹೀಗೆ ಕಡತದ ದಿನ ಹೆಚ್ಚುತ್ತಿದೆ ಆದರೆ ಅರ್ಜಿ ಸ್ವೀಕರಿಸಿದ ಮೊದಲ ಕಚೇರಿಯಿಂದಲೆ ಸಮಯ ಆರಂಭಗೊಳ್ಳುತ್ತದೆ. ಕಡತ ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಕಾರಣಕ್ಕೆ ಹೊಸನಗರ ವ್ಯಾಪ್ತಿಯ ಗ್ರಾ.ಪಂ. ಅಧಿಕಾರಿ ನಿವೃತ್ತ ಸೌಲಭ್ಯ 41ಲಕ್ಷ ರೂ. ಪಡೆಯಲು 3ವರ್ಷ ಬೇಕಾಯಿತು. ಧಾರ್ಮಿಕ ದತ್ತಿ ಇಲಾಖೆ ಕಸ್ಟೋಡಿಯನ್ ತಹಸೀಲ್ದಾರ್ ಆಗಿರುತ್ತಾರೆ ಆದರೆ ಬಸವೇಶ್ವರ ದೇವಸ್ಥಾನದ ಪಲ್ಲಕ್ಕಿ ಭಕ್ತರೊಬ್ಬರ ಮನೆಯಲ್ಲಿ ಇದೆ ಎನ್ನುವ ಕಾರಣಕ್ಕೆ ತಹಸೀಲ್ದಾರ್ ಸಂಬಳದಲ್ಲಿ ಶೇ.10ರಷ್ಟು ಕಡಿತ ಮಾಡಲಾಗಿದೆ ಎನ್ನುವ ಹಲವು ಉದಾಹರಣೆ ನೀಡಿದರು.

ಲೋಕಾಯುಕ್ತಕ್ಕೆ ದೂರು ನೀಡುವುದಕ್ಕೆ ಎರಡು ನಮೂನೆ ಇದ್ದು ಅದನ್ನು ಭರ್ತಿ ಮಾಡಬೇಕು. ದೂರು ನೀಡುವವರ ವಿವರ, ಯಾರ ವಿರುದ್ಧ ದೂರು, ಆಪಾದನೆ ಏನು ಎನ್ನುವುದು ಸ್ಪಷ್ಟವಾಗಿರಬೇಕು ಅಲ್ಲದೆ ನಾವು ಮಾಡುವ ಆರೋಪ ಸತ್ಯವಾಗಿದೆ ಎನ್ನುವ ಪ್ರಮಾಣಪತ್ರದೊಂದಿಗೆ ಅಗತ್ಯ ದಾಖಲೆ ನೀಡಬೇಕು. ಅರ್ಜಿಯ ಸ್ಥಿತಿ ಆನ್‌ಲೈನ್‌ನಲ್ಲಿ ನೋಡುವುದಕ್ಕೂ ಅವಕಾಶ ಇದೆ. ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದ ನೈಜತೆ ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸೆಕ್ಷನ್ 60ರಪ್ರಕಾರ ಗೌಪ್ಯತೆ ಕಾಯ್ದುಗೊಳ್ಳುವುದಕ್ಕೂ ಅವಕಾಶ ಇದೆ. ದೇಶದ ಭದ್ರತೆ ವಿಷಯ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲು ಅವಕಾಶ ಇಲ್ಲ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ, ತಹಸೀಲ್ದಾರ್ ಎಂ.ಪಿ.ಕವಿರಾಜ್, ವಕೀಲರ ಸಂಘದ ಕಾರ‍್ಯದರ್ಶಿ ಡಿ.ಹೇಮರಾಜ್ ತಾಲೂಕಿನ ಎಲ್ಲ ಅಧಿಕಾರಿಗಳು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here