20.6 C
Shimoga
Friday, December 9, 2022

ಆನವಟ್ಟಿಯಲ್ಲಿ ಜನ ಸಂಕಲ್ಪ ಯಾತ್ರೆಗೆ ಸಕಲ ಸಿದ್ಧತೆ ; ಶಾಸಕ ಕುಮಾರ್ ಬಂಗಾರಪ್ಪ

ಸೊರಬ: ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಜೊತೆಗೆ ಪಕ್ಷದ ಸಂಘಟನಾ ದೃಷ್ಠಿಯಿಂದ ಹಮ್ಮಿಕೊಂಡಿರುವ ಜನ ಸಂಕಲ್ಪ ಯಾತ್ರೆ ತಾಲೂಕಿನ ಆನವಟ್ಟಿ ಪಟ್ಟಣಕ್ಕೆ ನ.15ರಂದು ಆಗಮಿಸಲಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.


ತಾಲೂಕಿನ ಆನವಟ್ಟಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆವರಣದಲ್ಲಿ ಜನ ಸಂಕಲ್ಪ ಯಾತ್ರೆಯ ಪೂರ್ವ ಸಿದ್ಧತೆ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ಮೂರು ತಂಡಗಳಾಗಿ ರಚಿಸಲಾಗಿದ್ದು, ಜಿಲ್ಲೆಯಲ್ಲಿ ಆನವಟ್ಟಿಯನ್ನು ಕೇಂದ್ರವಾಗಿರಿಸಿಕೊಂಡು ಯಾತ್ರೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂಡ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನ ಪ್ರತಿನಿಧಿಗಳು, ಸಚಿವರು, ಪಕ್ಷದ ಪದಾಧಿಕಾರಿಗಳು, ತಾಲೂಕಿನ 239 ಬೂತ್‌ಗಳಿಂದ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಸುಮಾರು 30 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದರು.


ಕ್ಷೇತ್ರಕ್ಕೆ ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ವಿಶೇಷ ಪ್ರಣಾಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾಲ್ಕೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಸಾಧನಾ ಕೈಪಿಡಿಯನ್ನು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆಗೊಳಿಸಲಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸದಂತೆ ರಸ್ತೆ, ಶಿಕ್ಷಣ, ಆರೋಗ್ಯ, ನೀರಾವರಿಗೆ ಸಂಬಂಧಿಸದಂತೆ ಮೂಲಭೂತ ಸೌಲಭ್ಯಗಳ ಕುರಿತು ಮತ್ತು ಶಿರಾಳಕೊಪ್ಪ-ಸೊರಬ ರಸ್ತೆಯನ್ನು ಚತುಷ್ಪಥ ರಸ್ತೆ ನಿರ್ಮಾಣ, ತಾಳಗುಪ್ಪದಿಂದ ಸೊರಬ-ಆನವಟ್ಟಿ ಮಾರ್ಗವಾಗಿ ಹುಬ್ಬಳ್ಳಿ ರೈಲೈ ಸಂಪರ್ಕ ಕಲ್ಪಿಸುವ ಕುರಿತು ಮನವಿ ಮಾಡಲಾಗುವುದು ಎಂದರು.


ಪಕ್ಷದಲ್ಲಿ ಕೆಲವು ವಿಚಾರಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ಮನಸ್ತಾಪದಿಂದ ಪಕ್ಷದ ಸಂಘಟನೆ ಯಿಂದ ದೂರ ಇರುವವರು ಜನ ಸಂಪರ್ಕ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಅವರು, ಸಮಸ್ಯೆಗಳಿಗೆ ಜಿಲ್ಲಾ ಮುಖಂಡರು ಮತ್ತು ಪಕ್ಷದ ವರಿಷ್ಠರು ಪರಿಹಾರ ಸೂಚಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವಿಗೆ ಮುನ್ನುಡಿ ಬರೆಯುವಂತೆ ತಿಳಿಸಿದರು.


ಸಭಾ ಕಾರ್ಯಕ್ರಮವು ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಂತೆ ಸಂಜೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ವೇದಿಕೆಯಲ್ಲಿ ಅನಾವಶ್ಯಕವಾಗಿ ಸನ್ಮಾನ, ಹಾರ-ತುರಾಯಿಗಳಿಗೆ ಅವಕಾಶವಿರುವುದಿಲ್ಲ. ಇದನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗಮನದಲ್ಲಿಟ್ಟುಕೊಳ್ಳಬೇಕು. ಜೊತೆಗೆ ಸಭಾ ಕಾರ್ಯಕ್ರಮದ ನಂತರ ಹಸಿರು ಕೊಠಡಿಯನ್ನು ವೇದಿಕೆಯ ಪಕ್ಕದಲ್ಲಿ ನಿರ್ಮಿಸಲಾಗಿದೆ. ಕ್ಷೇತ್ರದ ಹಲವು ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಮಠಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತ್ತೊಂದಡೆ ಕಲಾವಿದರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸಲಾಗಿದೆ ಎಂದರು.


ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಪ್ರಮುಖರಾದ ಟಿ.ಆರ್. ಸುರೇಶ್, ಮಹೇಶ್ ಮೂಡಿ, ಶಬ್ಬೀರ್ ಅಹಮ್ಮದ್ ಖಿಲ್ಲೇದಾರ್, ಅಮಿತ್ ಗೌಡ, ಕಿರಣ್ ಕುಮಾರ್, ರಾಜು ಕೆಂಚಿಕೊಪ್ಪ, ಚನ್ನಬಸಪ್ಪ, ಶಿವನಗೌಡ ಸೇರಿದಂತೆ ಮತ್ತಿತರರಿದ್ದರು.

ಡಿಸಿ-ಎಸ್‌ಪಿ ಸ್ಥಳ ಪರಿಶೀಲನೆ

ಜನ ಸಂಕಲ್ಪ ಯಾತ್ರೆ ನಡೆಯಲಿರುವ ಸಭಾ ಕಾರ್ಯಕ್ರಮದ ಸ್ಥಳ, ಹೆಲಿಪ್ಯಾಡ್ ಸ್ಥಳವನ್ನು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಪರಿಶೀಲನೆ ನಡೆಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ಮತ್ತು ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದು. ಮುಖ್ಯಮಂತ್ರಿಗಳು ಆಗಮನದ ಹಿನ್ನೆಲೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!