ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ಪ್ರಾಮುಖ್ಯತೆ ಹೆಚ್ಚಲಿ: ಹರತಾಳು ಹಾಲಪ್ಪ

0
443

ಹೊಸನಗರ: ದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನೀಡುವಷ್ಟು ಆದ್ಯತೆಯನ್ನು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿಗೆ ನೀಡಲಾಗುತ್ತಿಲ್ಲ ಎಂದು ಶಾಸಕ ಹರತಾಳು ಹಾಲಪ್ಪ ಬೇಸರ ವ್ಯಕ್ತಪಡಿಸಿದರು.

ಅವರು ಇಲ್ಲಿನ ಕೊಡಚಾದ್ರಿ ಕಾಲೇಜಿನಲ್ಲಿ ಲಯನ್ಸ್ ಮತ್ತು ರೋಟರಿ ಸಂಸ್ಥೆಗಳು ಉಚಿತವಾಗಿ ಒದಗಿಸಿದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಗೊಳಿಸಿದ ಬಳಿಕ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರಕಾರ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಹೀಗಾಗದಿರುವ ಪರಿಣಾಮವಾಗಿ ಇಂದು ಈ ಕ್ಷೇತ್ರಗಳು ವ್ಯಾಪಾರೀಕರಣಗೊಂಡಿವೆ. ಕೋವಿಡ್‌ ನಂತಹ ಸಂದರ್ಭದಲ್ಲಿ ಶ್ರೀಸಾಮಾನ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಸಾಕಷ್ಟು ಸಂಕಷ್ಟ, ಶೋಷಣೆ ಅನುಭವಿಸಿದರು. ಭವಿಷ್ಯದಲ್ಲಿ ಈ ಕ್ಷೇತ್ರಗಳಿಗೆ ಇನ್ನಷ್ಟು ಆದ್ಯತೆ ನೀಡಬೇಕೆನ್ನುವ ಒತ್ತಾಯ ನನ್ನದು ಎಂದರು.

ಸಂಘ ಸಂಸ್ಥೆಗಳು ಇಂದು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿವೆ. ಇದು ಉತ್ತಮ ಬೆಳವಣಿಗೆ ಕಲಿತ ಶಾಲೆಯನ್ನು ವಿದ್ಯಾರ್ಥಿಗಳು ಪೋಷಕರು ನೆನಪಿಟ್ಟುಕೊಳ್ಳಬೇಕು. ಅಂತಹ ಶಾಲೆಗಳ ಪ್ರಗತಿಗೆ ಸಹಕಾರಿಯಾಗಬೇಕು ಎಂದರು.

ಕೇಂದ್ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಳಿಸಿದೆ. ಈಗಲೇ ಅದರ ಕುರಿತು ಅಪಸ್ವರ ಬೇಡ. ಭವಿಷ್ಯದಲ್ಲಿ ಅದರ ಸಾಧಕ ಭಾದಕಗಳನ್ನು ಅರಿತು ಕಾಲಕಾಲಕ್ಕೆ ಬದಲಾವಣೆ ಮಾಡಿಕೊಂಡು ಶಿಕ್ಷಣ ವ್ಯವಸ್ಥೆ ಗಟ್ಟಿಗೊಳಿಸಬೇಕಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಬಳಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಈಗ ಬಾಲಕಿಯರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಪ್ರಗತಿಯ ಸಂಕೇತ ಎಂದರು.

ಪ್ರಾಚಾರ್ಯ ಡಾ.ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸಂಸ್ಥೆಯ ಡಾ.ಪ್ರವೀಣ್‌ಕುಮಾರ್, ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್.ವಿನಯ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶ್ರೀಧರ ಉಡುಪ, ತಹಶೀಲ್ದಾರ್ ವಿ.ಎಸ್.ರಾಜೀವ್, ಪ.ಪಂ. ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷೆ ಕೃಷ್ಣವೇಣಿ, ಗ್ರಂಥಪಾಲಕ ಡಾ|| ಲೋಕೇಶ್ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here