23.2 C
Shimoga
Sunday, November 27, 2022

ಆರ್ಥಿಕವಾಗಿ ಸದೃಢರಾಗಲು ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಪ್ರೇರಕ ; ನಿಟ್ಟೂರು ಶ್ರೀಗಳು


ರಿಪ್ಪನ್‌ಪೇಟೆ: ಸರ್ಕಾರಗಳು ಮಾಡದಿರುವುದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಗ್ರಾಮೀಣ ರೈತರ ಮತ್ತು ಶ್ರಮಿಕರ ಆರ್ಥಿಕಾಭಿವೃದ್ಧಿ ಹೊಂದಲು ಪ್ರೇರಕರಾಗಿದ್ದಾರೆಂದು ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹೇಳಿದರು.

ಗರ್ತಿಕೆರೆ ರಾಘವೇಂದ್ರ ಸ್ವಾಮಿ ಮಠದ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಹುಂಚ ವಲಯ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ ಹುಂಚ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹುಂಚ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು ಇದರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಿಕ್ಷಣದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿಯೊಂದಿಗೆ ಶಿಸ್ತು ಕಲಿಸಿದಾಗ ಮುಂದೆ ಸುಸಂಸ್ಕೃತರಾಗಲು ಸಾಧ್ಯವೆಂದು ಹೇಳಿ, ಸತ್ಯನಾರಾಯಣ ಪೂಜೆಯೊಂದಿಗೆ ಸಮಾಜದ ಒಳಿತಿಗೆ ಕುಟುಂಬದಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದರೊಂದಿಗೆ ದೇವರನ್ನು ಕಾಣಲು ಸಾಧ್ಯವಾಗುವುದು. ಬಡವರ ಬದುಕಿಗೆ ಬೆಳಕಾದವರು ಹೆಗ್ಗಡೆಯವರು. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕನಸು ಗ್ರಾಮೀಣ ಬಡಜನರ ಆರ್ಥಿಕ ಪ್ರಗತಿಗಾಗಿ ಹತ್ತು ಹಲವು ಯೋಜನೆಗಳ ಮೂಲಕ ಸರ್ಕಾರ ಮಾಡದನ್ನು ಸಂಸ್ಥೆಯವರು ಮಾಡಿರುವುದು ಹೆಗ್ಗಡೆಯವ ದೂರದೃಷ್ಟಿ ಪ್ರಶಂಸನೀಯವಾದುದೆಂದರು.


ಶಿವಮೊಗ್ಗ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮೂರ್ತಿ ಪೂಜೆಯೊಂದಿಗೆ ಭಗವಂತನ ದರ್ಶನ ಪಡೆಯಲು ಸಾಧ್ಯ. ಮೃತ್ಯುಂಜಯ ಮಂತ್ರ ಪಠಣದಿಂದ ಸಾವು ದೂರವಾಗುವುದು. ನಿತ್ಯ ಧಾರವಾಹಿಗಳನ್ನು ನೋಡುವುದರಿಂದಾಗಿ ಮಕ್ಕಳು ಹಿರಿಯರಲ್ಲಿ ಕ್ರೋಧದ ಭಾವನೆ ಮನಸ್ಸು ಕಲುಷಿತಗೊಳ್ಳುವುದು. ಧಾರವಾಹಿಗಳಿಂದ ನೆಮ್ಮದಿ ಇಲ್ಲದೆ ದ್ವೇಷ ಭಾವನೆ ಬೆಳೆಯುತ್ತದೆಂದು ವಿಷಾದ ವ್ಯಕ್ತಪಡಿಸಿ, ನಿತ್ಯ ಭಜನೆ ಹರಿನಾಮಸ್ಮರಣೆ ಮಾಡುವುದಿಂದಾಗಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವೆಂದ ಅವರು, ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಣದೊಂದಿಗೆ ಶಿಸ್ತು ಕಲಿಸುವ ನಿಟ್ಟಿನಲ್ಲಿ ಶಿಕ್ಷೆ ನೀಡಿದರೆ ಏನಾಗುವುದಿಲ್ಲ ಎಂದು ಹೇಳಿ, ಮಹಿಳೆಯರು ಗರ್ಭಿಣಿಯಾಗಿರುವಾಗಲೇ ಒಳ್ಳೆಯ ಪುರಾಣ ಪ್ರವಚನಗಳನ್ನು ಕೇಳಿಸಿಕೊಂಡಾಗ ಹೊಟ್ಟೆಯಲ್ಲಿನ ಮಗು ಸಹ ಅದೇ ಸನ್ನಡತೆಯನ್ನು ಬೆಳೆಸಿಕೊಳ್ಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಲು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಕಾಣಲು, ಆರ್ಥಿಕವಾಗಿ ಸಬಲರಾಗಲು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಕಂಡುಕೊಳ್ಳಲು ಈ ಯೋಜನೆಯಿಂದ ಪರಿವರ್ತನೆ ಹೊಂದಲು ಸಾಧ್ಯ ಎಂದರು.


ಪ್ರಗತಿಪರ ಕೃಷಿಕ ಅನಂತಮೂರ್ತಿ ಅವುಕ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿ, ಈ ಸುಂದರ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ನೀವು ಧನ್ಯರು. ಸಮಾಜದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದೆ, ಅನಾವಶ್ಯಕ ಯಂತ್ರೋಪಕರಣಗಳನ್ನು ಬಳಸದೆ, ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಸಮಾಜಕ್ಕೆ ಬೆಳಕಾಗಿ ಊರಿಗೂ ಹೆಸರಾಗಿ ನಾವು ನೀವೆಲ್ಲರೂ ಬಾಳೋಣ ಎಂದು ಕಿವಿ ಮಾತು ಹೇಳಿದರು.

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ರಾಜು ಶಿವಪುರ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅಮೃತ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ರಾಘವೇಂದ್ರ, ಗ್ರಾ.ಪಂ.ಸದಸ್ಯ ಸುರೇಶ್, ಗರ್ತಿಕೆರೆ ಒಕ್ಕೂಟದ ಅಧ್ಯಕ್ಷ ಸುಧಾಕರ ಹಿಂಡ್ಲೆಮನೆ, ಶಿವಪುರ ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ, ಶಿವಮೊಗ್ಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಶಶಿಕಲಾ ಮಲ್ಲಪ್ಪ ಹೊಸನಗರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಬೇಬಿ, ಹಾಲಪ್ಪ, ಶಿವಪ್ಪ, ಸುಜಾತ, ವಾಸುದೇವ, ಟೀಕೇಶ್,ಮಂಜುನಾಥ, ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿಯ ಸದಸ್ಯರುಗಳು ಮತ್ತು ಹುಂಚ ವಲಯದ ಎಲ್ಲಾ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.


ಪವಿತ್ರ ಮತ್ತು ಸಂಗಡಿಗರು ಹುಗುಡಿ ಪ್ರಾರ್ಥಿಸಿದರು. ಹುಂಚ ವಲಯದ ಮೇಲ್ವಿಚಾರಕಿ ಎಸ್.ಸುಜಾತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!