20.6 C
Shimoga
Friday, December 9, 2022

ಇಂದಿನ ಯುವಜನಾಂಗ ಮಾನವೀಯ ಮೌಲ್ಯಗಳಿಂದ ವಿಮುಖರಾಗುತ್ತಿದ್ದಾರೆ ; ಧರ್ಮಸಭೆಯಲ್ಲಿ ಸಾಲೂರು ಗುರುಲಿಂಗ ಜಂಗಮ ಶಿವಾಚಾರ್ಯರು ಕಳವಳ

ರಿಪ್ಪನ್‌ಪೇಟೆ: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಕೊಡದೇ ಇರುವುದರಿಂದಾಗಿ ಇಂದಿನ ಯುವಜನಾಂಗ ಮಾನವೀಯ ಮೌಲ್ಯಗಳಿಂದ ವಿಮುಖರಾಗುವಂತಾಗಿದೆ ಎಂದು ಸಾಲೂರು ಹಿರೇಮಠಾಧ್ಯಕ್ಷ ವೈದಿಕ ರತ್ನ ಅಭಿನವ ವೇದಕೇಸರಿ ಗುರುಲಿಂಗ ಜಂಗಮ ಶಿವಾಚಾರ್ಯ ಮಹಾಸ್ವಾಮಿಜಿ ಕಳವಳ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆ ಸಮೀಪದ ಬ್ರಹ್ಮೇಶ್ವರ ಶ್ರೀವೀರಶೈವ ಸಭಾಭವನದಲ್ಲಿ ಜಬಗೋಡು ನಾಗರತ್ನಮ್ಮ ಹಾಲಪ್ಪಗೌಡರ 70ನೇ ವರ್ಷದ ಭೀಮರಥ ಶಾಂತಿ-ತುಲಾಭಾರ ಮತ್ತು ಧರ್ಮ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ವೀರಶೈವ ಜನಾಂಗದಲ್ಲಿ ಜನಿಸುತ್ತಿದ್ದಂತೆ ಗುರುಗಳಿಂದ ಲಿಂಗಧಾರಣೆ ಮಾಡಿಸುವ ಮೂಲಕ ಮಗುವಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ನೀಡಿ ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವ ಹೊಣೆಗಾರಿಕೆಯನ್ನು ಹೆತ್ತವರು ಮಾಡುತ್ತಾರೆ. ಅಲ್ಲದೆ ಲಿಂಗಧಾರಣೆ ಮಾಡಿಕೊಂಡ ವೀರಶೈವರನ್ನು ಸ್ಪರ್ಶಿಸಿದರೆ ಸಾಕು ಪುಣ್ಯ ಪ್ರಾಪ್ತಿಯಾಗುತ್ತದೆ.

ಇತ್ತೀಚಿನ ದಿನಮಾನಗಳಲ್ಲಿ ವೀರಶೈವರು ಲಿಂಗವನ್ನು ಕಿತ್ತು ಹಾಕಿ ಭಸ್ಮವನ್ನು ಸಹ ಧರಿಸದೇ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಕವಲೇದುರ್ಗ ಮಹಾಮಹತ್ತಿನ ಭುವನಗಿರಿ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಜಿ ತಮ್ಮ ಸಂದೇಶಾಮೃತವನ್ನು ನೀಡಿ, ಗುರು ಹಿರಿಯರನ್ನು ಗೌರವಿಸುವುದರೊಂದಿಗೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣುವಂತಾಗಬೇಕು.ದುಡಿಮೆ ಹಣವನ್ನು ಸತ್ಕಾರ್ಯಗಳಿಗೆ ವಿನಿಯೋಗಿಸುವುದರಿಂದ ನೆಮ್ಮದಿಯನ್ನು ಕಾಣಲು ಸಾಧ್ಯ. ಭಗವಂತ ಅನೇಕ ರೂಪಗಳಲ್ಲಿ ಇರುತ್ತಾನೆ. ಆತನ ದೃಷ್ಟಿಯಿಂದ ಬದುಕುತ್ತಿರುವುದು ಮನೆಯಲ್ಲಿ ದೇವರ ಮನೆ ಇರುವಂತೆ ನಮ್ಮ ಹೃದಯದಲ್ಲಿ ದೇವರಿದ್ದಾನೆ. ಎಲ್ಲರೂ ಧಾರ್ಮಿಕ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಬೇಕು ಎಷ್ಟು ಸಂಪತ್ತು ಇದ್ದರೂ ನೆಮ್ಮದಿಯಿಲ್ಲದಂತೆ. ಆಧ್ಯಾತ್ಮಿಕ ಒಲವಿನಿಂದ ನೆಮ್ಮದಿ ದೊರಕುತ್ತದೆ. ಮಕ್ಕಳು ಸುಸಂಸ್ಕೃತರಾಗಿ ತಮ್ಮ ತಂದೆ-ತಾಯಿಯರನ್ನು ಗೌರವಿಸಿದಾಗ ಸಿಗುವ ತೃಪ್ತಿ ಬೇರೆಲ್ಲೂ ಸಿಗದು ಎಂದ ಅವರು, ವೀರಶೈವ ವಿಶಿಷ್ಟ ಸಂಸ್ಕೃತಿ ಸಂಸ್ಕಾರವನ್ನು ಹೊಂದಿರುವುದು ಹೋಮ ಹವನಾದಿಯ ಹೊಗೆ ಮತ್ತು ಬೂದಿಯನ್ನು ನಮ್ಮ ದೇಹಕ್ಕೆ ಪೋಕ್ಷಣೆ ಮಾಡಿಕೊಂಡರೆ ಸಾಕು ದೋಷ ಮುಕ್ತವಾಗುವುದೆಂದರು.


ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವೀರಶೈವ ಸಮಾಜ ಧರ್ಮಕಾರ್ಯದೊಂದಿಗೆ ಅನ್ನದಾಸೋಹ ಜ್ಞಾನದಾಸೋಹ ಹೀಗೆ ಹಲವು ಸಮಾಜಮುಖಿ ಸೇವಾ ಕಾರ್ಯ ಮಾಡುವ ಮೂಲಕ ಮಾದರಿಯಾಗಿದೆ. ಆ ನಿಟ್ಟಿನಲ್ಲಿ ಜಬಗೋಡು ಹಾಲಪ್ಪಗೌಡ-ನಾಗರತ್ನ ತಮ್ಮ 70ನೇ ವರ್ಷದ ಭೀಮರಥ ಶಾಂತಿ ಪೂಜಾ ಕಾರ್ಯದೊಂದಿಗೆ ಹಲವು ಹಿರಿಯರನ್ನು ಮಾದರಿಯಾಗಿಟ್ಟುಕೊಂಡು ದಾನ-ಧರ್ಮದೊಂದಿಗೆ ಸಮಾಜದ ಮತ್ತು ಕುಟುಂಬದವರ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಂಡಿರುವುದು ಪ್ರಶಂಸನೀಯವೆಂದರು.

ಈ ಧಾರ್ಮಿಕ ಸಮಾರಂಭದಲ್ಲಿ ಜಬಗೋಡು ಹಾಲಪ್ಪಗೌಡ-ನಾಗರತ್ನ ತಮ್ಮ 70ನೇ ವರ್ಷದ ಭೀಮರಥ ಶಾಂತಿ –ತುಲಾಭಾರದೊಂದಿಗೆ ಗುರುಗಳ ಸಮ್ಮುಖದಲ್ಲಿ ಗುರುರಕ್ಷೆ ನೀಡಿ ಆಶೀರ್ವದಿಸಿ, ನೂರುಕಾಲ ಬಾಳಿ ಬದುಕುವಂತಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಮಳಲಿಮಠದ ಗುರುನಾಗಭೂಷಣ ಶಿವಾಚಾರ್ಯರು, ನಂದಿಪುರಮಠದ ನಂದೀಶ್ವರ ಶಿವಾಚಾರ್ಯರು, ತೊಗರ್ಸಿ ಕ್ಯಾಸನೂರು ಹಿರೇಮಠದ ಗುರುಬಸವ ಪಂಡಿತಾರಾಧ್ಯ ಮಹಾಂತ ದೇಶಿಕೇಂದ್ರ ಶಿವಾಚಾರ್ಯರು, ಕೋಣಂದೂರು ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯರು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಆಭಿನವ ಚನ್ನಬಸವ ಮಹಾಸ್ವಾಮಿಜಿ ಉಪಸ್ಥಿತಿರಿದ್ದು ತಮ್ಮ ಉಪದೇಶಾಮೃತವನ್ನು ನೀಡಿದರು.

ತೊಗರ್ಸಿ ಕ್ಯಾಸನೂರು ಶ್ರೀ ಗುರುಬಸವ ಪಂಡಿತಾರಾಧ್ಯ ಮಹಾಂತ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಾಗರತ್ನಮ್ಮ ಜಬಗೋಡು ಹಾಲಪ್ಪಗೌಡ ಇವರ 70ನೇ ವರ್ಷದ ಭೀಮರಥ ಶಾಂತಿ ಪೂಜಾ ಕಾರ್ಯಕ್ರಮವು ಪೌರೋಹಿತ್ಯ ಬಟ್ಟೆಮಲ್ಲಪ್ಪ ಕಲ್ಯಾಣಯ್ಯ ಶಾಸ್ತ್ರಿಗಳ ಮತ್ತು ಕೋಲಗಣಸಿ ಚಂದ್ರಯ್ಯ ಶಾಸ್ತ್ರಿಗಳು ಮತ್ತು ಸಂಗಡಿಗರ ಸಹಯೋಗದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!