ಇಂದು ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನ

0
946

ಪ್ರತಿ ವರ್ಷ ನಮ್ಮ ಭಾರತ ದೇಶದಲ್ಲಿ ಸುಮಾರು 35 ಸಾವಿರದಿಂದ 50 ಸಾವಿರ ಜನ ಹಾವಿನ ಕಡಿತದಿಂದ ಮೃತಪಡುತ್ತಿದ್ದಾರೆ. ವಿಶ್ವದಲ್ಲಿ ಅತೀ ಹೆಚ್ಚಿನ ಜನ ಸಾಯುತ್ತಿರುವುದು ನಮ್ಮ ದೇಶದಲ್ಲಿಯೇ ಎಂಬುದು ಗಮನಿಸಬೇಕಾದ ಸಂಗತಿ, ಹಾವು ಕಡಿದಾಗ ಅನುಸರಿಸಬೇಕಾದ ಸಾಮಾನ್ಯ ಜ್ಞಾನದ ಕೊರತೆಯು ಇಷ್ಟು ದೊಡ್ಡ ಮಟ್ಟದ ಸಾವು ನೋವಿಗೆ ಕಾರಣವಾಗಿದೆ, ಬಡವರು ಕೂಲಿ, ಕೃಷಿ ಕಾರ್ಮಿಕರು ಹೆಚ್ಚಾಗಿ ಹಾವಿನ ಕಡಿತದಿಂದ ಮೃತರಾಗುತ್ತಿದ್ದಾರೆ.

ಪ್ರತಿ ವರ್ಷ ಸೆಪ್ಟಂಬರ್ 19 ರಂದು ಅಂತರಾಷ್ಟ್ರೀಯ ಹಾವಿನ ಕಡಿತದ ಜಾಗೃತಿ ದಿನವನ್ನಾಗಿ 2018ನೇ ಇಸವಿಯಿಂದ ಆಚರಿಸಲಾಗುತ್ತಿದೆ.

ನಮ್ಮ ದೇಶದಲ್ಲಿ 300ಕ್ಕೂ ಅಧಿಕ ಜಾತಿ/ಪ್ರಭೇದಗಳ ಹಾವುಗಳು ಇದ್ದು ಇವುಗಳಲ್ಲಿ ಹೆಚ್ಚಿನ ಪಾಲು ವಿಷರಹಿತ ಹಾವುಗಳಾಗಿವೆ, ಅವುಗಳಲ್ಲಿ ಸುಮಾರು 70 ಬಗೆಯ ಹಾವುಗಳು ವಿಷಪೂರಿತವಾಗಿವೆ. ಅವುಗಳಲ್ಲಿ ಕೇವಲ 4 ಜಾತಿಯ ಹಾವುಗಳನ್ನು ಅಪಾಯಕಾರಿ ಗಳು ಎಂದು ಗುರುತಿಸಲಾಗಿದೆ, ಇಂಗ್ಲೀಷಲ್ಲಿ ಈ ಹಾವುಗಳಿಗೆ Big four venomous snakes ಎನ್ನುತ್ತಾರೆ, ಈ ನಾಲ್ಕು ಜಾತಿಯ ಹಾವುಗಳ ಕಡಿತದಿಂದಲೇ ನಮ್ಮ ದೇಶದಲ್ಲಿ ಗರಿಷ್ಠ ಪ್ರಮಾಣದ ಸಾವುಗಳು ಸಂಭವಿಸುತ್ತಿವೆ.

ಇಲ್ಲಿ ಅಪಾಯಕಾರಿ ಹಾವುಗಳು ಎಂದರೆ ಕೃಷಿ ಭೂಮಿ, ಹಳ್ಳಿ ಪಟ್ಟಣಗಳ ಜನವಸತಿ ಸಮೀಪವೇ ಅವು ವಾಸವಿದ್ದು, ಕಡಿದಾಗ ಮಾರಣಾಂತಿಕವಾಗಬಲ್ಲ ವಿಷಪೂರಿತ ಹಾವುಗಳಾಗಿವೆ, ನಾಗರಹಾವು (Spectacle Cobra) ಕೊಳಕು ಮಂಡಲ (Russell’s viper), ರಕ್ತ ಮಂಡಲ (Sawscaled viper), ಕಟ್ಟಾವು (krait)‌ ಇವು ನಮ್ಮ ದೇಶದ ನಾಲ್ಕು ಅಪಾಯಕಾರಿ ಹಾವುಗಳಾಗಿವೆ, ಕಾಳಿಂಗ ಸರ್ಪ ಅತ್ಯಂತ ವಿಷಪೂರಿತ ಹಾವಾಗಿದ್ದರೂ ಇದರ ಕಡಿತ ಇಲ್ಲವೇ ಇಲ್ಲ ಅಥವಾ ಬಹಳ ಅಪರೂಪ, ಹಾಗಾಗಿ ಇದು ವಿಷಪೂರಿತ ಹಾವುಗಳ ಪಟ್ಟಿಯಲ್ಲಿದೆ ಆದರೆ ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿಲ್ಲ.

ನಮ್ಮ ದೇಶದಲ್ಲಿ ಹಾವಿನ ಕಡಿತ ಒಂದು ನಿರ್ಲಕ್ಷ್ಯಕ್ಕೆ ಒಳಗಾದ ಕಾಯಿಲೆ ಎಂದೇ ಹೇಳಬಹುದು, ಹಾವಿನ ಕಡಿತವನ್ನು ಗಂಭೀರವಾಗಿ ಪರಿಗಣಿಸದೆ ಮಂತ್ರ ತಂತ್ರಗಳಂತಹ ಮೂಢನಂಬಿಕೆಗಳ ಮೊರೆ ಹೋಗುತ್ತಿರುವುದು ಮತ್ತಷ್ಟು ಅಪಾಯವನ್ನು ತರುತ್ತಿದೆ.

ಹಾವಿನ ಕಡಿತ ಒಂದು ವೈದ್ಯಕೀಯ ತುರ್ತುಸ್ಥಿತಿ ಇಲ್ಲಿ ನಾವು ಅನುಸರಿಸುವ ವಿಧಾನ ಅಮೂಲ್ಯ ಜೀವವನ್ನು ಉಳಿಸಬಲ್ಲದು ಹಾವು ಕಡಿದಾಗ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

• ಗಾಬರಿಗೊಳ್ಳಬೇಡಿ, ದೈರ್ಯ ತಂದುಕೊಳ್ಳಿ, ಗಾಬರಿಯಾದಾಗ ಹೃದಯ ಬಡಿತ ಹೆಚ್ಚಾಗಿ ವಿಷ ವೇಗವಾಗಿ ಹರಡುತ್ತದೆ.

• ಹಾವಿಂದ ದೂರ ಸರಿಯಿರಿ ಅದನ್ನು ಹಿಂಬಾಲಿಸುವುದಾಗಲಿ, ಹಿಡಿಯುವ ಹಾಗೂ ಕೊಲ್ಲುವ ಪ್ರಯತ್ನ ಮಾಡಬೇಡಿ.

• ಗಾಯದ ಮೇಲೆ ಅಥವಾ ಅಕ್ಕಪಕ್ಕ ಅತೀ ಬಿಗಿಯಾಗಿ ತಂತಿ, ದಾರ ಭತ್ತದ ಹುಲ್ಲಿನ ಹಗ್ಗದ ಕಟ್ಟುಗಳನ್ನು ಹಾಕಬೇಡಿ.

• ಯಾವುದೇ ಹರಿತವಾದ ಸಾಧನಗಳಿಂದ ಗಾಯವನ್ನು ಕತ್ತರಿಸಬೇಡಿ. ಇದರಿಂದ ರೋಗಿಗೆ ರಕ್ತ ಸ್ರಾವವಾಗಿ ಸಾವು ಸಂಭವಿಸಬಹುದು.

• ಬಾಯಿಯಿಂದ ವಿಷ ಹೀರಬೇಡಿ.

• ಗಾಯದ ಮೇಲೆ ಮಂಜುಗಡ್ಡೆ ಇಡುವುದಾಗಲಿ, ನೀರಲ್ಲಿ ಗಾಯವನ್ನು ಮುಳುಗಿಸುವುದಾಗಲಿ ಮಾಡಬೇಡಿ.

• ಗಾಯದ ಮೇಲೆ ಯಾವುದೇ ಮದ್ದು ಇಡಬೇಡಿ.

• ಹೊಲ ಗದ್ದೆಗಳಲ್ಲಿ ಹಾವು ಕಡಿದಾಗ ಓಡಿ ಬರುವ ಪ್ರಯತ್ನ ಮಾಡಬೇಡಿ, ಸಾಧ್ಯವಾದರೆ ಅಕ್ಕಪಕ್ಕ ಯಾರಾದರೂ ಇದ್ದರೆ ರೋಗಿಯನ್ನು ಎತ್ತಿಕೊಂಡು ಬರುವ ಪ್ರಯತ್ನ ಮಾಡಲಿ.

• ತೀರಾ ಅಗತ್ಯ ಇದ್ದರಷ್ಟೇ ಓಡಾಡಿ.

• ಹಾವು ಕಡಿದ ಗಾಯದ ಭಾಗವು ಹೃದಯಕ್ಕಿಂತ ಕೆಳಮಟ್ಟದಲ್ಲಿ ಇರಲಿ.

• ಕಡಿದ ಭಾಗದಲ್ಲಿ ಯಾವುದೇ ಬಳೆ ಉಂಗುರ ವಾಚು ಇದ್ದರೆ ತೆಗೆಯಿರಿ.

• ಹಾವು ಕಡಿದ ಭಾಗದ ಮೇಲೆ ಬಟ್ಟೆಯಿಂದ ಸ್ವಲ್ಪ ಬಿಗಿಯಾಗಿ ಸುತ್ತಿ. ಉದಾ : ಕೈ ಬೆರಳಿನ ಸಮೀಪ ಹಾವು ಕಡಿದರೆ ಬೆರಳುಗಳನ್ನು ಸೇರಿಸಿ ಮುಂಗೈ ಇಲ್ಲವೆ ಭುಜದ ವರೆಗೂ ಬಟ್ಟೆಯನ್ನು ಬ್ಯಾಂಡೇಜ್ ತರಹ ಪಟ್ಟಿ ಮಾಡಿ ಕೊಂಡು ಸ್ವಲ್ಪ ಬಿಗಿಯಾಗಿ ಸುತ್ತಿ (ನಾವು ಸುತ್ತುವ ಬಟ್ಟೆ ರಕ್ತ ಪರಿ ಚಲನೆಗೆ ಅಡ್ಡಿಪಡಿಸುವಂತಿರಬಾರದು).

ಈ ಮೇಲಿನ ವಿಧಾನಗಳು ಹಾವಿನ ವಿಷ ವೇಗವಾಗಿ ಹರಡದಂತೆ ಕೊಂಚ ತಡೆಯಬಹುದೇ ವಿನಃ ಚಿಕಿತ್ಸೆ ಅಲ್ಲ, ಹಾವು ಕಡಿದ ಮೊದಲ ಒಂದು ಗಂಟೆ ಬಹಳ ಅಮೂಲ್ಯವಾದುದು, ಈ ಸಂದರ್ಬದಲ್ಲಿ ಪ್ರಥಮ ಚಿಕಿತ್ಸೆ ಮಾಡುವುದರಲ್ಲಿ ಅಥವ ರೋಗಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಅನ್ನುವ ಗೊಂದಲದಲ್ಲಿ ಕಾಲಹರಣ ಮಾಡದೆ ತುರ್ತಾಗಿ ಆಸ್ಪತ್ರೆ ಸೇರುವುದೊಂದೆ ಪರಿಹಾರ.

ವಿಷಪೂರಿತ ಹಾವು ಕಡಿದಾಗ ಈ ಕೆಳಗಿನ ಲಕ್ಷಣಗಳು ಕಂಡು ಬರಬಹುದು:

• ಕಡಿದ ಜಾಗದಲ್ಲಿ ವಿಪರೀತ ಉರಿ ನೋವು ಸೆಳೆತ ಕಂಡು ಬರಬಹುದು.

• ಕಡಿದ ಜಾಗದಲ್ಲಿ ಊತ ಬರಬಹುದು.

• ಕಡಿದ ಜಾಗದ ಚರ್ಮದ ಬಣ್ಣ ಬದಲಾಗಬಹುದು.

• ಕಣ್ಣು ತೆರೆಯಲು ಕಷ್ಟವಾಗಿ ಕಣ್ಣುಗುಡ್ಡೆ ಬಿದ್ದು ಹೋಗಬಹುದು (dropping eyelids).

• ಕಡಿದ ಜಾಗದಿಂದ ರಕ್ತ ಸ್ರಾವವಾಗಬಹುದು.

ವಿಷಪೂರಿತ ಹಾವು ಕಡಿದಾಗ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇವು, ಆದರೆ ಕಟ್ಟಾವು (Krait) ಚಿಕ್ಕದಾದ ವಿಷದ ಹಲ್ಲನ್ನು(fangs) ಹೊಂದಿದ್ದು ಇದರ ಕಡಿತ ಮುಳ್ಳು ಚುಚ್ಚಿದ ಅನುಭವ ನೀಡುತ್ತದೆ, ನಂತರ ಯಾವುದೇ ಉರಿ ನೋವು ಸೆಳೆತ ಕಾಣಿಸದೆ ಕೊನೆಯ ಹಂತದಲ್ಲಿ ವಾಂತಿ ಹೊಟ್ಟೆ ನೋವಿನಂತಹ ಲಕ್ಷಣ ಕಂಡು ಮಾರಣಾಂತಿಕವಾಗಬಲ್ಲದು, ಹಾಗಾಗಿ ಈ ಕಟ್ಟುಹಾವನ್ನು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ

ಚಿಕಿತ್ಸೆ:

ನಮ್ಮ ದೇಶದಲ್ಲಿ ಹಾವಿನ ಕಡಿತಕ್ಕೆ ಪ್ರಸ್ತುತ ಇರುವ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಅದು ಪ್ರತಿ ವಿಷ ಚಿಕಿತ್ಸೆ ಅಥವಾ ASV( anti snake venom) ಮಾತ್ರ, ಈ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಲ್ಲರಿಗೂ ಲಭ್ಯವಿದೆ, ನಾಗರಹಾವು, ಕೊಳಕು ಮಂಡಲ, ರಕ್ತ ಮಂಡಲ ಕಟ್ಟಾವು ಈ ನಾಲ್ಕು ಅಪಾಯಕಾರಿ ಹಾವಿನ ಕಡಿತಕ್ಕೆ ಸದ್ಯ ನಮ್ಮ ದೇಶದಲ್ಲಿ ಒಂದೇ ರೀತಿಯ ಔಷದಿ (ASV) ಲಭ್ಯವಿದ್ದು, ಮುಂದೆ ಆಯಾ ಹಾವಿನ ಕಡಿತಕ್ಕೆ ನಿರ್ದಿಷ್ಟ ಔಷಧಿ ಬರುವ ಸಾಧ್ಯತೆ ಇದೆ.

ವಿಷಪೂರಿತ ಹಾವು ಕಡಿಯಲಿ ಅಥವಾ ವಿಷ ರಹಿತ ಕಡಿಯಲಿ ಮೊದಲು ಆಸ್ಪತ್ರೆಗೆ ದಾಖಲಾಗಿ, ವೈದ್ಯರು ಅಗತ್ಯ ಇದ್ದರೆ ASV ನೀಡುತ್ತಾರೆ ಇಲ್ಲದ್ದಿದ್ದರೆ ನಿಮ್ಮ ಮೇಲೆ ನಿಗಾ ಇಟ್ಟು ದೇಹದ ಬದಲಾವಣೆಗಳನ್ನು ಗಮನಿಸುತ್ತಾರೆ.

ಮಂತ್ರ, ಮದ್ದು ಮತ್ತು ಮೂಢನಂಬಿಕೆ:

ಬಹಳಷ್ಟು ಜನ ಹಾವು ಕಡಿದಾಗ ಮಂತ್ರ ಮದ್ದುಗಳ ಮೊರೆ ಹೋಗಿ ವಾಸಿ ಆಗಿರುವ ತಮ್ಮ ಅನುಭವ ಹೇಳುತ್ತಾರೆ ಹೀಗೆ ವಾಸಿಯಾಗುವುದರ ಹಿಂದೆ ಸರಳ ವೈಜ್ಞಾನಿಕ ಕಾರಣವಿದೆ.

ಕಡಿದ ಎಲ್ಲಾ ಹಾವುಗಳು ವಿಷಪೂರಿತವಾಗಿರುವುದಿಲ್ಲ ಹಾಗು ವಿಷಪೂರಿತ ಹಾವಿನ ಎಲ್ಲಾ ಕಡಿತಗಳು ವಿಷವನ್ನು ಬಿಟ್ಟಿರುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.

ವಿಷಪೂರಿತ ಹಾವುಗಳು ವಿಷವನ್ನು ತಮ್ಮ ಆಹಾರ ಸಂಪಾದನೆಗೆ ಅಂದರೆ ಬೇಟೆಯಾಡಲು ಬಳಸುತ್ತವೆ ಮತ್ತು ತಮಗೆ ಅಪಾಯ ಬಂದಾಗ ತಮ್ಮ ರಕ್ಷಗೆಗೂ ವಿಷವನ್ನು ಬಳಸುತ್ತವೆ, ರಕ್ಷಣೆಗೆ ಕಡಿಯುವ ಬಹಳಷ್ಟು ಕಡಿತಗಳು ವಿಷರಹಿತವಾಗಿ (dry bites) ಇರುತ್ತವೆ. ಒಂದು ವೇಳೆ ಹಾವಿನ ವಿಷದಿಂದ ವ್ಯಕ್ತಿ ಸತ್ತರೆ,ಅದು ಕೈ ಮೀರಿ ಹೋಗಿತ್ತು. ಪಾಪ ಮಂತ್ರ ಹಾಕುವವ ಅಥವಾ ಮದ್ದು ಹಾಕುವವನದ್ದು ಏನೂ ತಪ್ಪಿಲ್ಲ ಎನ್ನುತ್ತಾರೆ, ಇಲ್ಲಿ ಬಲಿಯಾಗುವುದು ಒಂದು ಅಮಾಯಕ ಜೀವ.

ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹಾವಿನ ಕಡಿತಗಳನ್ನು ಖಂಡಿತಾ ತಪ್ಪಿಸಬಹುದು:

• ಹೊಲ, ಗದ್ದೆ, ತೋಟಗಳಲ್ಲಿ ಓಡಾಡುವಾಗ ಗಂಬೂಟುಗಳನ್ನು ಬಳಸಿ.

• ರಾತ್ರಿ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ ಗಳನ್ನು ಬಳಸಿ

• ರಾತ್ರಿ ಬಯಲು ಮಲ ವಿಸರ್ಜನೆ ತಪ್ಪಿಸಿ‌.

• ಮನೆಯ ಸುತ್ತಮುತ್ತ ಸ್ವಚ್ಚವಾಗಿರಲಿ, ಕಸಕಡ್ಡಿಗಳು ಇಲಿಗಳನ್ನು ಆಕರ್ಷಿಸುತ್ತವೆ, ಇಲಿಗಳನ್ನು ಬೇಟೆಯಾಡಲು ಹಾವುಗಳು ಸಹಜವಾಗಿ ಬರುತ್ತವೆ.

• ಮನೆಯಿಂದ ಹೊರಗೆ ಮಲಗುವಾಗ ಚಾಪೆಯ ಸುತ್ತಲು ಸೊಳ್ಳೆ ಪರದೆ ಬಳಸಿ ಇದರಿಂದ ಹಾವುಗಳು ಹಾಸಿಗೆಯೊಳಗೆ ಬರಲು ಸಾಧ್ಯವಾಗುವುದಿಲ್ಲ.

• ಗುಡಿಸಲು ಮನೆಗಳಾದರೆ ಮಂಚದ ಮೇಲೆ ಮಲಗುವುದು ಸೂಕ್ತ.

• ಕೋಳಿ ಶೆಡ್ಡು ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳು ಮನೆಯಿಂದ ಸ್ವಲ್ಪ ದೂರದಲ್ಲಿದ್ದರೆ ಉತ್ತಮ.

• ಮನೆ ಸುತ್ತಲಿರುವ ಇಲಿ ಬಿಲಗಳು, ಸಂದುಗಳನ್ನು ಆಗಾಗ ಮಣ್ಣಿನಿಂದ ಮುಚ್ಚುತ್ತಿರಬೇಕು.

• ಮನೆಯ ಹೊರಗೆ ಇಟ್ಟ ಶೂಗಳನ್ನು ಧರಿಸುವಾಗ ಪರಿಶೀಲಿಸಬೇಕು.

• ಮನೆಯ ಕಿಟಕಿಗೆ ತಾಗಿದ ಮರದ ರೆಂಬೆ, ಹೂವಿನ ಗಿಡಗಳನ್ನು ಆಗಾಗ ಕತ್ತರಿಸಬೇಕು.

• ಮನೆಯ ಬಾಗಿಲನ್ನು ಯಾವಾಗಲೂ ತೆರೆದಿಡದೆ ಮುಚ್ಚಿರಬೇಕು.

ಹಾವುಗಳು ನಮ್ಮ ಪರಿಸರದ ಆಹಾರ ಸರಪಳಿಯ ಕೊಂಡಿಗಳು, ಇಲ್ಲಿ ಸ್ವಲ್ಪ ಏರುಪೇರಾದರೂ ಅಪಾಯ ಖಚಿತ.ಮನುಷ್ಯ ಹಾವುಗಳಿಂದ ತನಗೇನು ಲಾಭ ಎಂದು ಯೋಚಿಸಿದರೆ, ಇಲಿಗಳಿಂದ ರೈತನ ಬೆಳೆಗಳಿಗಾಗುವ ಹಾನಿಯನ್ನು ತಪ್ಪಿಸಿ ರೈತನ ಆದಾಯವನ್ನು ಹೆಚ್ಚಿಸುತ್ತವೆ, ಇಲಿಗಳಿಂದ ಹರಡುವ ಕೆಲ ರೋಗಗಳನ್ನು ನಿಯಂತ್ರಿಸಬಲ್ಲವು, ಹಾವಿನ ವಿಷವನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ.ಹಾವು ಕಡಿದಾಗ ಆಸ್ಪತ್ರೆಯಲ್ಲಿ ನಮಗೆ ಕೊಡುವ ಔಷಧ ಹಾವಿನ ವಿಷದಿಂದಲೇ ತಯಾರಾಗುವುದು ಎನ್ನುವುದು ವಿಶೇಷ.

ಲೇಖನ: ನಾಗರಾಜ್ ಬೆಳ್ಳೂರು, ಕನ್ಸರ್ವೇಷನ್ ಟ್ರಸ್ಟ್
ಜಾಹಿರಾತು

LEAVE A REPLY

Please enter your comment!
Please enter your name here