ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದಡಿಯಲ್ಲಿ ಬರುವ ಒಟ್ಟು 23 ಕಾಫಿ ಬೆಳೆಗಾರ ಸಂಘಟನೆಗಳು, ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ಸಮಾವೇಶದಲ್ಲಿ ಸುಮಾರು 4 ಸಾವಿರ ಜನರು ಸೇರಲಿದ್ದಾರೆ. ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಹೆಚ್. ಟಿ. ಮೋಹನ್ಕುಮಾರ್ ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಅಹವಾಲುಗಳ ಚರ್ಚೆ ಸಂಬಂಧವಾಗಿ ಏಪ್ರಿಲ್ 29 ರಂದು ಜಿಲ್ಲೆಗೆ ಕಂದಾಯ ಸಚಿವ ಆರ್. ಅಶೋಕ್ ಆಗಮಿಸಲಿದ್ದು, ಅವರ ನೇತೃತ್ವದಲ್ಲಿ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಬೆಳೆಗಾರರ ಸಮಾವೇಶ ಹಾಗೂ ಚರ್ಚೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಂದಾಯ ಸಚಿವ ಆರ್. ಅಶೋಕ್ ಸಮಾವೇಶದಲ್ಲಿ ಭಾಗಹಿಸಲಿದ್ದು, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಬೆಳೆಗಾರರು ಅಂದು ಸಚಿವರಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿದ್ದಾರೆ, ಸಮಾವೇಶದಲ್ಲಿ ಕಾಫಿ ಬೆಳೆಯುವ ಪ್ರದೇಶದ ಶಾಸಕರು, ಸಂಸದರು, ಪರಿಷತ್ ಸದಸ್ಯರು ಇನ್ನಿತರೆ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾಫಿ ಬೆಳೆಗಾರರ 10 ಎಚ್ಪಿ ವರೆಗಿನ ವಿದ್ಯುತ್ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಘೋಷಣೆ ಮಾಡಿರುವ ಇಂದನ ಸಚಿವ ವಿ. ಸುನೀಲ್ಕುಮಾರ್ ಅವರನ್ನು ಸಮಾವೇಶದಲ್ಲಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಕೆಜಿಎಫ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಮೂರು ಜಿಲ್ಲೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಪ್ರಮುಖವಾಗಿ ಒತ್ತುವರಿ, ವಿದ್ಯುತ್, ಪಹಣಿಗಳು ಪೋಡು ಆಗದಿರುವುದು ಸೇರಿದಂತೆ ಇನ್ನಿತರೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಲು ತೀರ್ಮಾನಿಸಲಾಯಿತು ಎಂದರು.
ಪೂರ್ವಭಾವಿ ಸಭೆಯಲ್ಲಿ ಕಾಫಿ ಬೆಳೆಗಾರರಾದ ಹಳಸೆಶಿವಣ್ಣ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ. ಎ. ಜಗನ್ನಾಥ್, ಜೈರಾಂ, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಕೆಜಿಎಫ್ ಉಪಾಧ್ಯಕ್ಷರಾದ ಎ. ಕೆ ವಸಂತೇಗೌಡ, ಉಪಾಸಿ ಪ್ರತಿನಿಧಿ ಅಜಯ್ ತಿಪ್ಪಯ್ಯ, ಉಪಾಧ್ಯಕ್ಷ ಮಹೇಶ್, ಗೌರವ ಕಾರ್ಯದರ್ಶಿ ಮಾಡ್ಲಪ್ರಕಾಶ್, ಲಕ್ಷ್ಮಣ್ಗೌಡ, ರತೀಶ್ಕುಮಾರ್, ಬಾಲಕೃಷ್ಣ ಉಪಸ್ಥಿತರಿದ್ದರು.
Related