ಇದೇ ತಿಂಗಳು 30 ರೊಳಗೆ ಡಿ.ಎಂ.ಎ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕ ಸಿ.ಟಿ.ರವಿ ಸೂಚನೆ

0
138

ಚಿಕ್ಕಮಗಳೂರು: ಅಮೃತ್ ಯೋಜನೆಯಡಿ ನಗರದಲ್ಲಿ ನೀರು ಸರಬರಾಜು ಮಾಡಲು 23 ಡಿಎಂಎ(ಡಿಸ್ಟ್ರಿಕ್ಟ್ ಮೀಟರಿಂಗ್ ಏರಿಯಾ)ಗಳನ್ನು ಗುರುತಿಸಲಾಗಿದ್ದು, ಇಲ್ಲಿಯವರೆಗೆ ಕೇವಲ 16 ಡಿ.ಎಂ.ಎ ಗಳು ಪೂರ್ಣಗೊಂಡಿದೆ. ಇನ್ನುಳಿದ 7 ಡಿ.ಎಂ.ಎ ಕಾಮಗಾರಿಗಳನ್ನು ಏಪ್ರಿಲ್ 30 ರೊಳಗೆ ಪೂರ್ಣಗೊಳಿಸದಿದ್ದಲ್ಲಿ ಅನುದಾನವನ್ನು ಕಡಿತಗೊಳಿಸಲಾಗುವುದು ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಚಿಕ್ಕಮಗಳೂರು ನಗರಕ್ಕೆ ಅಮೃತ್ ಯೋಜನೆಯಡಿ ನೀರು ಸರಬರಾಜು ಅಭಿವೃದ್ಧಿ ಪಡಿಸುವ ಯೋಜನೆ ಹಾಗೂ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ನೀರು ಸರಬರಾಜು ಕಾಮಗಾರಿಗೆ 102 ಕೋಟಿ ಅನುದಾನ ನೀಡಲಾಗಿದ್ದು, ಡಿ.ಎಂ.ಎ ಕಾಮಗಾರಿಗಳು ವಿಳಂಬವಾಗುತ್ತಿವೆ. ಹಾಗೂ ಕಳಪೆ ಮಟ್ಟದ ಮೀಟರ್ ಬಾಕ್ಸ್ ಗಳನ್ನು ಹಾಗೂ ನಲ್ಲಿಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಬದಲಾಯಿಸಲು ಸೂಚಿಸಿದರು.

ಪೂರ್ಣಗೊಂಡ ಕಾಮಗಾರಿಗಳನ್ನು ಇಂಜಿನಿಯರ್‌ಗಳ ಸಮ್ಮುಖದಲ್ಲಿ ಜಂಟಿ ತಪಾಸಣೆ ನಡೆಸಿ ನ್ಯೂನತೆಗಳನ್ನು ಸರಿಪಡಿಸಲು ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು. ನೀರು ಸರಬರಾಜು ಹಾಗೂ ಒಳ ಚರಂಡಿ ಕಾಮಗಾರಿಗಳ ಸರ್ವೇ ವರದಿ ಬಂದ ನಂತರ ಕಾಮಗಾರಿಗಳು ಕಳಪೆಯಾಗಿದ್ದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖ್ಯ ಇಂಜಿನಿಯರ್ ಸಿದ್ಧನಾಯಕ್ ಮಾತನಾಡಿ, ಒಟ್ಟು 63 ಸಂಪರ್ಕ ರಸ್ತೆಗಳಲ್ಲಿ ಔಟ್ ಫಾಲ್ ಸಂಪರ್ಕ ನೀಡಲು ಗುತ್ತಿಗೆದಾರರ ಕಾರ್ಯ ನಿರ್ಲಕ್ಷತೆಯಿಂದ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಇನ್ನು 30 ಸಂಪರ್ಕ ರಸ್ತೆಗಳಲ್ಲಿ ಕಾಮಗಾರಿ ಬಾಕಿ ಉಳಿದೆದೆ ಎಂದರು.

ಜೂನ್‌ನಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಅದರೊಳಗೆ ಔಟ್ ಫಾಲ್ ಸಂಪರ್ಕ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೆ, ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಿ ರಾಜ್ಯದಲ್ಲಿ ಯಾವ ಕಾಮಗಾರಿಗಳ ಗುತ್ತಿಗೆಯು ಸಿಗದ ಹಾಗೇ ಮಾಡಲಾಗುವುದು ಎಂದು ಸಿ.ಟಿ.ರವಿ ಎಚ್ಚರಿಸಿದರು.

ಒಳಚರಂಡಿ ಹಾಗೂ ನೀರು ಸರಬರಾಜು ಕಾಮಗಾರಿಗಳಿಗೆ ಪದೇ ಪದೇ ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ಅನಗತ್ಯ ತೊಂದರೆಗಳನ್ನು ನೀಡಬೇಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಮಲ್ಲೇಶ್ ನಾಯಕ್, ನಗರಸಭೆ ಪೌರಾಯುಕ್ತ ಬಸವರಾಜು, ಇಂಜಿನಿಯರ್‌ಗಳು, ಗುತ್ತಿಗೆದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here