ಚಿಕ್ಕಮಗಳೂರು: ನಾನು ಅಂತಹ ಮನೆ ಕಟ್ಟಬೇಕು, ಇಂತಹ ಮನೆ ಕಟ್ಟಿಸಬೇಕು.. ಆ ಮನೆಯಲ್ಲಿ ಅಷ್ಟು ವೈಭೋಗ ಇರಬೇಕು, ನೋಡಿದವರು ಒಂದು ಕ್ಷಣ ಫಿದಾ ಆಗ್ಬೇಕು.. ಹೀಗೆ ಹತ್ತಾರು ಕನಸುಗಳನ್ನ ಇಟ್ಕೊಂಡು ಮನೆ ಕಟ್ಟಿಸೋದು ಸಾಮಾನ್ಯ. ಆದ್ರೆ ಅದೊಬ್ಬ ವೃದ್ಧನಿಗೆ ಆ ಗುಡಿಸಲೇ ಅರಮನೆ ಆಗಿತ್ತು. ಹತ್ತಾರು ವರ್ಷಗಳಿಂದ ಅಲ್ಲೇ ಆತನ ಸಂಸಾರದ ಬದುಕಿನ ಬಂಡಿ ಸಾಗಿತ್ತು. ಆದ್ರೀಗ ಆ ಗುಡಿಸಲೇ ಮಳೆಗೆ ಅಪ್ಪಚ್ಚಿಯಾಗಿದೆ.. !
ಹೌದು, ಈ ಪೋಟೋದಲ್ಲಿ ಬಿದ್ದು ಹೋಗಿರುವ ತನ್ನ ಅರಮನೆಯನ್ನ ನೋಡುತ್ತಿರುವ ವ್ಯಕ್ತಿಯ ಹೆಸರು ಬೆಳ್ಳ.. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಯಡದಾಳು ಸಮೀಪದ ಎತ್ತುಬುಡಿಕೆ ಗ್ರಾಮದವನು. ದಿನಗೂಲಿ ಕಾರ್ಮಿಕನಾಗಿರುವ ಬೆಳ್ಳನ ವಯಸ್ಸು ಎಪ್ಪತ್ತರ ಅಸುಪಾಸು. ತನ್ನಷ್ಟೇ ವಯಸ್ಸಾಗಿರುವ ಪತ್ನಿ ಜೊತೆ ನಿನಗೆ ನಾನು, ನನಗೆ ನೀನು ಅಂತಾ ಇದೇ ಗುಡಿಸಲಿನಲ್ಲಿ ಬೆಳ್ಳ ವಾಸಮಾಡುತ್ತಿದ್ದ. ಹೊರಗಿನಿಂದ ನೋಡುವರಿಗೆ ಅದೊಂದು ಸಾಮಾನ್ಯ ಗುಡಿಸಲು ಅಷ್ಟೇ.. ಆದ್ರೆ ಬೆಳ್ಳನಿಗೆ ಈ ಗುಡಿಸಲೇ ಅರಮನೆಯ ಸುಖ-ನೆಮ್ಮದಿಯನ್ನ ನೀಡ್ತಿತ್ತು. ಯಾಕಂದ್ರೆ ಕೆಲಸ ಮಾಡಿ ದಣಿವಾದಾಗ ನೆರಳು ನೀಡುತ್ತಿದ್ದ ಸ್ಥಳ ಅದು.. ಬೆಳ್ಳ ಕಣ್ತುಂಬ ನಿದ್ದೆ ಮಾಡಲು ಆಶ್ರಯ ನೀಡಿದ್ದು ಇದೇ ಗುಡಿಸಲು. ಮತ್ತೆ ಕೆಲಸಕ್ಕೆ ಹೊರಡಲು ಅಣಿಯಾದಾಗ ನೆಮ್ಮದಿಯಿಂದ ಒಂದೆರಡು ತುತ್ತು ಅನ್ನ ಉಣ್ಣಲು, ಗಂಜಿ ಕುಡಿಯಲು ಈ ಗುಡಿಸಲೇ ಬೆಳ್ಳನಿಗೆ ಆಸರೆಯಾಗಿತ್ತು.
ಹೀಗೆ ಎಲ್ಲವೂ ಆಗಿದ್ದ ಈ ಗುಡಿಸಲೇ ಬೆಳ್ಳನ ಪಾಲಿಗೆ ಇಂದು ಇಲ್ಲವಾಗಿದೆ. ಮಳೆಯ ಆರ್ಭಟಕ್ಕೆ ಅಪ್ಪಚ್ಚಿಯಾಗಿ ನೆಲಕ್ಕುರುಳಿದೆ. ಆದ್ರೆ ಈ ಬಡಪಾಯಿಯ ಗುಡಿಸಲು ಬಿದ್ದಿದ್ದು ಯಾರಿಗೂ ಲೆಕ್ಕಕ್ಕೇ ಇಲ್ಲ, ಒಬ್ಬ ಸಾಮಾನ್ಯ, ಮಧ್ಯಮ ಅಥವಾ ಶ್ರೀಮಂತನ ಮನೆಯೊಂದು ಬಿದ್ದಿದ್ರೆ ಸರ್ಕಾರಿ ದಾಖಲೆಗಳಲ್ಲಿ ಲೆಕ್ಕಕ್ಕೆ ಸಿಗ್ತಿತ್ತು. ಆದ್ರೆ ಬೆಳ್ಳನ ಗುಡಿಸಲು ಮಾತ್ರ ಸರ್ಕಾರಿ ದಾಖಲೆ ಸೇರಿಲ್ಲ. ಯಾಕಂದ್ರೆ ಎಲ್ಲರಿಗೂ ಅದೊಂದು ಗುಡಿಸಲು. ಆದ್ರೆ ಬೆಳ್ಳನಿಗೆ ಮಾತ್ರ ಅದು ಅರಮನೆಯಂತಹ ಗುಡಿಸಲು. ಗುಡಿಸಲು ಅಂದ್ಮೇಲೆ ಕರೆಂಟೂ, ಗ್ಯಾಸೂ ಎಲ್ಲಾ ದೂರದ ಮಾತು ಬಿಡಿ. ಬೆಳ್ಳ ಪರಿಶಿಷ್ಟ ವರ್ಗಕ್ಕೆ ಬಂದ್ರೂ ಅದನ್ನೆಲ್ಲಾ ತೆಗೆದುಕೊಳ್ಳುವ ಶಕ್ತಿ ಆತನಿಗಿಲ್ಲ, ಯಾಕಂದ್ರೆ ಬೆಳ್ಳನಿಗೆ ಮಾಹಿತಿ ಕೊರತೆ. ಎಲ್ಲಾ ಸರಿಯಾಗಿ ಗೊತ್ತಿದ್ರೆ ಈ ವಯಸ್ಸಲ್ಲಿ ಒಂದು ಮನೆಯನ್ನ ಕಟ್ಟಿಸಿಕೊಳ್ಳದೇ ಇರ್ತಿದ್ನ ಅಲ್ವಾ..?
ಇಲ್ಲಿ ಯಾವ ಜನಪ್ರತಿನಿಧಿಯನ್ನಾಗಲಿ, ಅಧಿಕಾರಿಗಳನ್ನಾಗಲಿ ದೂರಿಲ್ಲ, ದೂರಲ್ಲ. ಯಾಕಂದ್ರೆ ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ ಅನ್ನೋದು ಗೊತ್ತಿರುವ ವಿಚಾರ. ಕೊನೆಯಲ್ಲಿ ಒಂದು ಭಿನ್ನಹ, ಸಾಧ್ಯವಾದ್ರೆ ಬೆಳ್ಳನಿಗೊಂದು ಸೂರು ಕೊಡಿ.
ವರದಿ: ಪ್ರಶಾಂತ್, ಚಿಕ್ಕಮಗಳೂರು
Related