ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಕೆ.ಬಿ ಪ್ರಸನ್ನ ಕುಮಾರ್

0
360

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಘೋಷಣೆಯಾಗಿತ್ತು. ಆದರೆ ಈಶ್ವರಪ್ಪನವರಿಗೆ ಕೊನೆಯವರೆಗೂ ಟಿಕೆಟ್ ಘೋಷಣೆಯಾಗಿರಲಿಲ್ಲ. ಬಲವಂತದಿಂದ ಟಿಕೆಟ್ ತಂದರು. ಈಶ್ವರಪ್ಪನವರಿಗೆ ಟಿಕೆಟ್ ಘೋಷಣೆ ವಿಳಂಬವಾಗಿದ್ದಕ್ಕೆ ಬಿ.ಎಸ್.ಯಡಿಯೂರಪ್ಪನವರೆ ಕಾರಣ ಎನ್ನುತ್ತಿದ್ದ ಈಶ್ವರಪ್ಪನವರು 2023 ರ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗುವ ಸಂಭವ ಕಡಿಮೆ ಎಂದು ತಿಳಿದು ಸರ್ಕಾರದ ಅವಧಿಯಲ್ಲಾದರೂ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆಯಿಂದ ರಾಜ್ಯಪಾಲರಿಗೆ ಮುಖ್ಯಮಂತ್ರಿ ವಿರುದ್ದ ದೂರು ಸಲ್ಲಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಈಶ್ವರಪ್ಪನವರು ದಕ್ಷ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ. ಕಾನೂನು ಪ್ರಕಾರ ಕೆಲಸ ಮಾಡುವ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಿಸಿದ್ದಾರೆ. ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ಮಾಚೇನಹಳ್ಳಿ ಬಳಿ ಇರುವ ಕಿಯೋನಿಕ್ಸ್ ಸಂಸ್ಥೆಯ ಕಟ್ಟಡದಲ್ಲಿ 3900 ಚದರ ಅಡಿ ಜಾಗವನ್ನು ತಿಂಗಳಿಗೆ ಚದರ ಅಡಿಗೆ 5 ರೂ. ಹಾಗೂ 1 ರೂ. ನಿರ್ವಹಣೆ ಬಾಡಿಗೆ ರೂಪದಲ್ಲಿ ಮಗ ಮತ್ತು ಮೊಮ್ಮಗ ವ್ಯವಹಾರ ನಡೆಸಲು ಕಾನೂನು ಬಾಹಿರವಾಗಿ ನೀಡಿಸಿದ್ದಾರೆ ಎಂದು ಆರೋಪಿಸಿದ ಅವರು ಹುಣಸೋಡು ಸ್ಪೋಟ ಪ್ರಕರಣ ತನಿಖೆ ದಾರಿ ತಪ್ಪುತ್ತಿದೆ. ತಪ್ಪಿತಸ್ಥರನ್ನು ಬಂಧಿಸಬೇಕು. ಹಾನಿಗೊಳಗಾದ ಮನೆಗಳ ರಿಪೇರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಆರ್.ಸಿ.ನಾಯಕ್, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಮೆಹಕ್ ಷರೀಫ್, ಮುಖಂಡರಾದ ಕೆ.ರಂಗನಾಥ್, ಪವನ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here