ಈಸೂರು ಗ್ರಾಮದಲ್ಲಿ ಆತ್ಮಬಲಿದಾನದ ಸೂರ್ಯಗ್ರಹಣ ಶಾಸನ ಹಾಗೂ ಕಲ್ಯಾಣ ಚಾಲುಕ್ಯರ ಎರಡು ಶಾಸನಗಳು ಪತ್ತೆ

0
789

ಶಿಕಾರಿಪುರ: ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಆರ್.ಶೇಜೇಶ್ವರ, ಸಹಾಯಕ ನಿರ್ದೇಶಕರು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಶಿವಪ್ಪನಾಯಕ ಅರಮನೆ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕು ಪಂಚಾಯತಿ ಸದಸ್ಯರಾದ ಈಸೂರು ಜಯಣ್ಣ ಹಾಗೂ ಚುರ್ಚಿಗುಂಡಿ ಮಂಜಪ್ಪ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ಈಸೂರು ಗ್ರಾಮ ಠಾಣದ ಹತ್ತಿರ ಸ್ಥಳೀಯರು ಕರೆಯುವ ಸೊಂಟಮುರುಕ ವೀರಭದ್ರ ಮೂರ್ತಿಯ ಹತ್ತಿರ 12-13ನೇ ಶತಮಾನದ ಆತ್ಮಬಲಿದಾನದ ಸೂರ್ಯಗ್ರಹಣದ 176 ಸೆಂ.ಮೀ ಉದ್ದವಿರುವ ಶಾಸನ. ಈಸೂರು ಗ್ರಾಮದ ಗಡಿ ಬಸವೇಶ್ವರ ದೇವಾಲಯದ ಹತ್ತಿರ 145 ಸೆಂ.ಮೀ ಉದ್ದ, 50 ಸೆಂ.ಮೀ ಅಗಲವಿರುವ ದಾನ ಶಾಸನ, ಸರ್ಕಾರಿ ಪ್ರೌಢಶಾಲೆ ಹತ್ತಿರ 142 ಸೆಂ.ಮೀ ಉದ್ದ ಹಾಗೂ 48 ಸೆಂ.ಮೀ ಅಗಲವಿರುವ ದಾನ ಶಾಸನ ಪತ್ತೆಯಾಗಿವೆ.

ಆತ್ಮಬಲಿದಾನ:

ಆತ್ಮಬಲಿದಾನ ಹಿಂದೂಗಳ ದೃಷ್ಟಿಯಲ್ಲಿ ಮಹತ್ವ ಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದ್ದು, ಆತ್ಮಬಲಿದಾನಗಳಿಗೆ ಭಾರತೀಯ ಧಾರ್ಮಿಕ ಗ್ರಂಥಗಳಲ್ಲಿ ಅವಕಾಶ ಮಾಡಿಕೊಟ್ಟಿವೆ ಎನ್ನಬಹುದು. ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ (ದೇಹತ್ಯಾಗ) ಎನ್ನಬಹುದು. ಆತ್ಮಬಲಿದಾನವು ಆತ್ಮಹತ್ಯೆಗಿಂತ ವಿಶೇಷವಾಗಿದ್ದು ಇದು ಸಮಾಜದ ಒಳಿತಿಗೋಸ್ಕರ ಆಗಿರುವಂತಹದ್ದು ಹಾಗೂ ಪೂರ್ವ ನಿಯೋಜಿತವಾಗಿರುತ್ತದೆ. ಭಾರತದಲ್ಲಿ ಆತ್ಮ ಬಲಿದಾನದ ತ್ಯಾಗವು ಪುರಾತನ ಕಾಲದಿಂದಲೂ ಬಂದಿರುವಂತಹದ್ದಾಗಿದೆ. ಈ ಆತ್ಮ ಬಲಿದಾನದಲ್ಲಿ ಹಲವು ಬಗೆಗಳಿದ್ದು ಅವುಗಳಲ್ಲಿ ಪ್ರಮುಖವಾಗಿ ಸೂರ್ಯಗ್ರಹಣದಂದು ಆತ್ಮಬಲಿದಾನ ಮಾಡಿಕೊಳ್ಳುವುದು ವಿಶೇಷವಾಗಿತ್ತು ಎನ್ನಬಹುದು. ಆತ್ಮಬಲಿದಾನವನ್ನು ಮಾಡಿಕೊಂಡ ವೀರರು ಯಾವುದೇ ಹೊರಾಟದಲ್ಲಿ ಹೋರಾಡಿ ಮಡಿದವರಾಗಿರುವುದಿಲ್ಲ. ಆದರೆ ಯಾವುದೇ ಹೋರಾಟದಲ್ಲಿ ಮಡಿದ ವೀರರಿಗಿಂತ ಇವರೇನು ಕಡಿಮೆಯಿರುವುದಿಲ್ಲ ಎನ್ನಬಹುದು. ಅವುಗಳಲ್ಲಿ ಚಿತಾಪ್ರವೇಶ, ಜಲಪ್ರವೇಶ, ಊರ್ಧ್ವಪತನ ಇವುಗಳ ಮೂಲಕ ಸೂರ್ಯಗ್ರಹಣದಂದು ಆತ್ಮಬಲಿದಾನವನ್ನು ಮಾಡಿಕೊಳ್ಳುತ್ತಿದ್ದರು. ಚಿತಾ ಪ್ರವೇಶ ಎಂದರೆ ಬೆಂಕಿಗೆ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು. ಜಲಪ್ರವೇಶ ಎಂದರೆ ಗಂಗೆ, ವಾರಾಣಾಸಿ, ಪ್ರಯಾಗ, ತುಂಗಭದ್ರೆ ಮೊದಲಾಡೆ ನೀರಿನಲ್ಲಿ ಮುಳುಗಿ ಆತ್ಮಬಲಿದಾನ ಮಾಡಿಕೊಳ್ಳುವುದು ಹಾಗೂ ಊರ್ಧ್ವ ಬಲಿದಾನವು ಬೆಟ್ಟ, ಮರ ಹಾಗೂ ದೇವಾಲಯಗಳ ಶಿಖರಗಳಿಂದ ಕೆಳಗೆ ಬಿದ್ದು ಅಥವಾ ಹಾರಿ ಆತ್ಮಬಲಿದಾನ ಮಾಡಿಕೊಳ್ಳುವಂತಹದ್ದು ಎನ್ನಬಹುದು. ಈ ಆತ್ಮಬಲಿದಾನದಲ್ಲಿ ಸಹಗಮನ ಪದ್ಧತಿ, ಗರುಡ ಪದ್ದತಿ ಹಾಗೂ ಜೈನರ ಸಮಾಧಿ ಮರಣಗಳು ಪ್ರಮುಖವಾಗಿವೆ.

ಸೂರ್ಯಗ್ರಹಣದ ಸಂಕೇತ:

ಸೂರ್ಯಗ್ರಹಣದ ಸಂಕೇತವಾಗಿ ರಾಹು ಅಂದರೆ ಹಾವು ಸೂರ್ಯನನ್ನು ನುಂಗುತ್ತಿರುವುದನ್ನು ಶಿಲ್ಪದಲ್ಲಿ ಕೆತ್ತಿ ತೋರಿಸಲಾಗಿರುತ್ತದೆ. ಸೂರ್ಯನನ್ನು ರಾಹು ನುಂಗುವ ಸಂದರ್ಭ, ಆಗ ಸೂರ್ಯ ಸಂಕಟಪಡುತ್ತಿರುವಂತೆ ತೋರಿಸುವ ಸಹಾನುಭೂತಿಯ ದಿನದಂದು ಆತ್ಮಬಲಿದಾನ ಮಾಡಿಕೊಂಡರೆ ಮೋಕ್ಷ ಪ್ರಾಪ್ತಿಯೆಂದು ಹಿಂದೂಗಳ ಭಾವನೆಯಾಗಿದ್ದು, ಸಮಾಜಕ್ಕೆ ರಾಜ್ಯಕ್ಕೆ ರಾಜರಿಗೆ, ಜನಸಾಮಾನ್ಯರಿಗೆ ಒಳ್ಳೆಯದು ಆಗುತ್ತೆ ಎಂಬ ಕಲ್ಪನೆಯಿಂದ ಈ ದಿನ ಆತ್ಮಬಲಿದಾನ ಮಾಡಿಕೊಳ್ಳುತ್ತಿದ್ದರು ಎನ್ನಬಹುದು.

ಆತ್ಮಬಲಿದಾನದ ಸೂರ್ಯಗ್ರಹಣ ಶಾಸನ:

ಈ ಶಾಸನವು ತುಂಬಾ ತೃಟಿತವಾಗಿದ್ದು ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ್ದಾಗಿದ್ದು, ಈ ಶಾಸನದಲ್ಲಿ ಸೂರ್ಯಗ್ರಹಣದ ಉಲ್ಲೇಖ ಕಂಡುಬರುತ್ತದೆ. ಈ ಸೂರ್ಯಗ್ರಹಣದ ಶಿಲ್ಪವು ಚಚೌಕಾರದಲ್ಲಿದ್ದು ಕೆಳಭಾಗದಲ್ಲಿ ಅಗ್ನಿ ಜ್ವಾಲೆಯಿದ್ದು ಇದು ದೀಪದ ರೀತಿಯಿದೆ, ಜ್ವಾಲೆಯ ಮೇಲೆ ವೀರ ಕೈಮುಗಿದು ನಿಂತಿರುವುದು. ಇದರ ಪಕ್ಕದಲ್ಲಿ ಪೂಜೆ ಮಾಡಿ ನಿಲ್ಲಿಸಿದ ಕೋಲು, ಇದರ ಮೇಲೆ ಶಾಸನವಿರುವುದು. ಮತ್ತೆ ಇದರ ಮೇಲೆ ವೀರ ಕುಳಿತಿರುವುದು. ಅಕ್ಕಪಕ್ಕದಲ್ಲಿ ಚಾಮರಧಾರಣಿಯರು ಮೇಲ್ಭಾಗದಲ್ಲಿ ಸೂರ್ಯನನ್ನು ಹಾವು ನುಂಗುತ್ತಿರುವುದು ಕಂಡುಬರುತ್ತದೆ. ಬಲಭಾಗದಲ್ಲಿ ಚಂದ್ರನಿದ್ದಾನೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹಾಗಲಮನೆಯಲ್ಲಿ ಕಾಲದ ಎರಡು ಆತ್ಮಬಲಿದಾನದ ಸೂರ್ಯಗ್ರಹಣ ಶಾಸನಗಳನ್ನು ಪತ್ತೆ ಮಾಡಲಾಗಿತ್ತು.

ಈಸೂರು ಗಡಿ ಬಸವೇಶ್ವರ ದೇವಾಲಯದ ಹತ್ತಿರದ ಶಾಸನ:

ಈ ತೃಟಿತವಾಗಿದ್ದು, 49 ಸಾಲಿನ ದಾನ ಶಾಸನವಾಗಿದ್ದು, ಕ್ರಿ.ಶ. 1162ರ ಕಲ್ಯಾಣ ಚಾಲುಕ್ಯರ ಕಾಲದ ಆರನೇ ವಿಕ್ರಮಾದಿತ್ಯನ ಕಾಲದ ಶಾಸನವಾಗಿದ್ದು, ಇದರಲ್ಲಿ ಈಸೂರನ್ನು ಈ ಸಮರ ಎಂದು ಕರೆಯಲಾಗಿದ್ದು, ಮಲ್ಲಿಕಾರ್ಜುನ ದೇವಾಲಯಕ್ಕೆ ವಡ್ಡರಾವುಳ ಸುಂಕ, ಪೆರ್ಜುಂಕ ಸುಂಕ, ಎರಡು ಬಿಲ್ಗೊಡೆ ಸುಂಕ ಮೊದಲಾದವನ್ನು ದಾನವಾಗಿ ಬಿಟ್ಟಿರುವುದು ತಿಳಿದುಬರುತ್ತದೆ.

ಸರ್ಕಾರಿ ಪ್ರೌಢಶಾಲೆ ಹತ್ತಿರದ ದಾನ ಶಾಸನ:

ಈ ಶಾಸನವು ತುಂಬಾ ತೃಟಿತವಾಗಿದ್ದು ಕ್ರಿ.ಶ.11-12ನೇ ಶತಮಾನದ ಶಾಸನವಾಗಿದ್ದು, ಇದರಲ್ಲಿ ಗದ್ದೆಯನ್ನು ದಾನ ನೀಡಿರುವ ಉಲ್ಲೇಖ ಕಂಡುಬರುತ್ತದೆ. ಈ ಶಾಸನಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಶಿಕಾರಿಪುರ ತಾಲ್ಲೂಕು ಪಂಚಾಯತಿ ಸದಸ್ಯರಾದ ಈಸೂರು ಜಯಣ್ಣ, ಚುರ್ಚಿಗುಂಡಿ ಮಂಜಪ್ಪ, ರಘು ಎಂ.ಆರ್, ಶಿಕಾರಿಪುರ ಹಾಗೂ ಎಸ್.ಎಂ. ಪ್ರಕಾಶ್, ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಆಗಸಿನ ಬಾಗಿಲು ಇವರುಗಳಿಗೆ ಆರ್‌.ಶೇಜೇಶ್ವರ ಸಹಾಯಕ ನಿರ್ದೇಶಕರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here