ಈ ಬಾರಿಯ ಚುನಾವಣೆಯಲ್ಲಿ ನಾಜೂಕಯ್ಯ ರಾಜಕಾರಣಿಗೆ ಮತದಾರರಿಂದ ‘ಬೈಪಾಸ್ ‘ ಸರ್ಜರಿ ಪಕ್ಕಾ ; ಬಿ‌.ಜಿ ನಾಗರಾಜ್

0
630

ಹೊಸನಗರ : ಕೇವಲ ಮಾಧ್ಯಮಗಳಲ್ಲಿ ಮಿಂಚುತ್ತಿರುವ ಹಾಗೂ ತಮ್ಮ ಬಾಲಂಗೋಚಿಗಳಿಂದ ಬಹುಪರಾಕ್ ಹಾಕಿಸಿಕೊಳ್ಳುತ್ತಿರುವ ಸಾಗರ, ಹೊಸನಗರ ಕ್ಷೇತ್ರದ ಶಾಸಕರು ನಾಜೂಕಯ್ಯನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಅವರ ವರ್ತನೆಗೆ ಈ ಬಾರಿ ಕ್ಷೇತ್ರದ ಮತದಾರರು ಅವರಿಗೆ ‘ಬೈಪಾಸ್’ ಸರ್ಜರಿ ಮಾಡುವುದು ಪಕ್ಕಾ ಎನಿಸಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಿಸಿದರು.

ವಿಧಾನಸಭಾ ಕ್ಷೇತ್ರ ಕಳೆದುಕೊಂಡ ಮೇಲೆ ಹೊಸನಗರ ಪಟ್ಟಣ ಅಭಿವೃದ್ಧಿಯನ್ನೆ ಕಾಣದೆ ಪ್ರತಿದಿನ ಅವನತಿಯತ್ತ ಸಾಗುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ ಹೊಸನಗರ ಪಟ್ಟಣದ ಹೊರಭಾಗದಿಂದ ಬೈಪಾಸ್ ಮೂಲಕ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿ ಗಡಿಯನ್ನು ಗುರುತಿಸಿ ಪಟ್ಟಣದ ನಾಗರಿಕರ ನಿದ್ದೆಗೆಡಿಸಿದ್ದು ನಾಗರಿಕರು ಬೈಪಾಸ್ ರಸ್ತೆಯನ್ನು ಪಕ್ಕದ ತೀರ್ಥಹಳ್ಳಿ, ಸೊರಬ ಪಟ್ಟಣಗಳಂತೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

ಒಂದು ಕಾಲದಲ್ಲಿ ಹೊಸನಗರದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆಯಿದ್ದು ವಿವಿಧ ಜಲವಿದ್ಯುತ್ ಯೋಜನೆಗಳಿಂದ ಇದೀಗ ಪಟ್ಟಣದ ಜನಸಂಖ್ಯೆ ಐದರಿಂದ ಆರು ಸಾವಿರದಷ್ಟಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಹೊರಭಾಗದಲ್ಲಿ ನಿರ್ಮಿಸಿದರೆ ಹೊಸನಗರ ಪಟ್ಟಣದ ಅಭಿವೃದ್ಧಿಗೆ ಮಾರಕವಾಗಿ ಹೊಸನಗರ ಎಂಬ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗುತ್ತೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ತಮ್ಮ ನಿರ್ಧಾರ ಬದಲಿಸಿ ಪಟ್ಟಣದ ಮುಖಾಂತರವೇ ಹೆದ್ದಾರಿ ನಿರ್ಮಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳು ಲೋಕಸಭಾ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರು ಹೊಸನಗರ ಪಟ್ಟಣದ ಜನರ ಮುಂದಿನ ಭವಿಷ್ಯಕ್ಕಾಗಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹೊಸನಗರ ಪಟ್ಟಣ ಅಭಿವೃದ್ಧಿ ನಿಟ್ಟಿನಲ್ಲಿ ಹೊಸಾನಗರವಾಗಬೇಕೆಂದು ಆಗ್ರಹಿಸಿದವರು. ಈ ಪಟ್ಟಣ ಹಳೆನಗರವಾಗಲು ಬಿಡಬಾರದೆಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಜಿ ಚಂದ್ರಮೌಳಿ, ಜಯಶೀಲಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಭಾಕರ, ಪಪಂ ಸದಸ್ಯ ಕೆ.ಕೆ ಅಶ್ವಿನಿಕುಮಾರ್, ಕಳೂರು ಕಿಟ್ಟ, ನಾಸಿರ್, ಚಂದ್ರಶೇಖರ್ ಶೆಟ್ಟಿ, ಜಯನಗರ ಗುರು ಮೊದಲಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here