ಈ ಬಾರಿ ಸೋಲಿನ ಪ್ರಶ್ನೆಯೇ ಇಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

0
213

ಶಿವಮೊಗ್ಗ: ಕಳೆದ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಆಕಸ್ಮಿಕವಾಗಿ ಸೋತಿದ್ದೇವೆ. ಈ ಬಾರಿ ಸೋಲಿನ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಬಿಜೆಪಿಯಿಂದ ಆಯೋಜಿಸಿದ ಜನಸ್ವರಾಜ್ ಜನಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋತಿದ್ವಿ, ಆದರೆ, ಈ ಬಾರಿ ಬಡ್ಡಿ ಸಮೇತ ಗೆದ್ದೇ ಗೆಲ್ಲುತ್ತೇವೆ ಎಂದರು.

ಮೋದಿ ಅವರು ಪ್ರಧಾನ ಮಂತ್ರಿಯಾಗುವವರೆಗೂ ಗ್ರಾಮೀಣ ಭಾಗದಲ್ಲಿ ದೇಶದ 19 ಕೋಟಿಯ ಮನೆಗೆ 70 ವರ್ಷದಲ್ಲಿ 3 ಕೋಟಿ ಮನೆಗಳಿಗೆ ಮಾತ್ರ ಕುಡಿಯುವ 3 ನೀರು ಕೊಡಲಾಗಿತ್ತು. ಆದರೆ, ಜಲಜೀವನ್ ಯೋಜನೆ ಅಡಿ ಮೋದಿ ಅವರು ಪ್ರಧಾನಿಯಾದ 7 ವರ್ಷದಲ್ಲಿ ಎಂಟೂವರೆ ಕೋಟಿ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಇನ್ನು 10 ಕೋಟಿ ಮನೆಗಳಿಗೆ ನೀರುಕೊಡಬೇಕಿದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಮತ ನೀಡಿರುವ ಜನರ ಋಣ ತೀರಿಸಬೇಕು ಎಂಬ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಎಲ್ಲರಿಗೂ ನೀರು ಒದಗಿಸುವ ಜವಬ್ದಾರಿ ಚುನಾಯಿತ ಪ್ರತಿನಿಧಿಗಳ ಮೇಲಿದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪಪಂ, ಗ್ರಾಪಂ ಸೇರಿದಂತೆ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚಿನ ಸದಸ್ಯರನ್ನು ಗೆದ್ದಿದ್ದೇವೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ನಮ್ಮ ಗೆಲುವು ನಿರಾಯಸ. ಗೆಲುವಿನ ಚುನಾವಣೆ ನಮ್ಮದು. ನಮ್ಮ ಅಭ್ಯರ್ಥಿ ಗೆಲ್ಲಿಸುವುದು ಬಿಜೆಪಿ ಸಂಘಟನೆಯ ತಾಕತ್ತು. ನಮ್ಮ ಬುಟ್ಟಿಗೆ ಕೈ ಹಾಕಲು ಕಾಂಗ್ರೆಸ್‌ಗೆ ಬಿಡಬಾರದು. ನಾವು ಅವರ ಬುಟ್ಟಿಗೆ ಕೈ ಹಾಕಬೇಕು ಎಂದರು.

ಡಿಸಿಸಿ ಬ್ಯಾಂಕ್‌ನಲ್ಲಿ ಪವಾಡ:

ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ಹಿಂದೆ ಪವಾಡಗಳು ನಡೆಯುತ್ತಿದ್ದವು. ಕಬ್ಬಿಣ ಇಟ್ಟು ಬಂಗಾರ ತೆಗೆಯುತ್ತಿದ್ದರು. ನಾನಿಲ್ಲದಿದ್ದರೆ ಡಿಸಿಸಿ ಬ್ಯಾಂಕ್ ಉಳಿಯಲ್ಲ ಎಂದು ಬೀಗುತ್ತಿದ್ದರು ಎಂದ ಅವರು, ಡಿಸಿಸಿ ಬ್ಯಾಂಕ್ ಯಾವುದೋ ಒಬ್ಬ ವ್ಯಕ್ತಿಯ ಆಧಾರದ ಮೇಲೆ ನಿಂತಿಲ್ಲ. ರೈತರ ಶಕ್ತಿಯ ಮೇಲೆ ನಿಂತಿದೆ. ಇದೀಗ ಬ್ಯಾಂಕ್ 18 ಕೋಟಿ ರೂ. ಲಾಭ ಮಾಡಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜದ ಕಟ್ಟಕಡೆ ವ್ಯಕ್ತಿಯ ಸೇವೆ ಮಾಡುವ ಅವಕಾಶ ಸಿಗುವುದು ಗ್ರಾಪಂ ಸದಸ್ಯರಿಗೆ ಮಾತ್ರ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೀರಿ. ಮೋದಿ ನೇತೃತ್ವದ ಸರ್ಕಾರ ಸ್ಮಾರ್ಟ್ ಸಿಟಿಯ ಜೊತೆಗೆ ಸ್ಮಾರ್ಟ್ ವಿಲೇಜ್‌ಗೂ ಆದ್ಯತೆ ನೀಡುತ್ತಿದೆ. ಗ್ರಾಮ ಸಡಕ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳ ಗೆಲವಿಗಾಗಿ ಎಲ್ಲರೂ ಕೆಲಸ ಮಾಡಬೇಕು ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ನಮ್ಮರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳು ಇವೆ. ಇದರಲ್ಲಿ 4 ಬ್ಯಾಂಕ್‌ಗಳು ಸ್ವಲ್ಪ ಅವ್ಯವಸ್ಥೆಯಿಂದ ಕೂಡಿದ್ದವು. ಶಿವಮೊಗ್ಗ, ಕೋಲಾರ, ತುಮಕೂರು ಹಾಗೂ ಗುಲ್ಬರ್ಗಾ ಡಿಸಿಸಿ ಬ್ಯಾಂಕ್ ನಲ್ಲಿ ಅವ್ಯವಸ್ಥೆ ಇತ್ತು. ಈ ಬಗ್ಗೆ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದೆ. ಕಾನೂನು ಬಾಹಿರವಾಗಿ ಏನಾದ್ರೂ ಅವ್ಯವಹಾರ ಇದ್ದರೆ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಆಪರೇಷನ್ ಆರಂಭಿಸಿದೆ. ಅದನ್ನು ಸಕ್ಸಸ್ ಮಾಡುವ ಕೆಲಸವನ್ನು ಮಾಡಿದೆ. ಇಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ 18 ಕೋಟಿ ಲಾಭದಲ್ಲಿದೆ. ಗುಲ್ಬರ್ಗಾ ಡಿಸಿಸಿ ಬ್ಯಾಂಕ್ ಡಿಫಾಲ್ ಆಗಿತ್ತು. ಅದನ್ನು ಸರಿಪಡಿಸಿದ್ದೇವೆ. ರೈತರಿಗೆ ಅತಿ ಹೆಚ್ಚಿನ ಸಾಲವನ್ನು ನೀಡುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ರೈತರಿಗೆ 20 ಸಾವಿರ ಸಾಲ ನೀಡಲು ಯೋಚಿಸಿದ್ದೇವು ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಿಧಾನ ಸಭೆಯಲ್ಲಿ ಪಾಸ್ ಆದ ಬಿಲ್ ವಿಧಾನಪರಿಷತ್‌ನಲ್ಲಿ ಪಾಸ್ ಆದರೆ ಮಾತ್ರ ಕಾನೂನು ಜಾರಿಯಾಗುತ್ತದೆ. ಹಾಗಾಗಿ ಎರಡೂ ಮನೆಯಲ್ಲಿ ಬಹುಮತ ಪಡೆಯಬೇಕಿದೆ. ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಿದ್ದೇವೆ. ಅದರಿಂದ ಏನೇನು ಪರಿಣಾಮ ಆಗಿದೆ ಎಂಬುದು ಗೊತ್ತಾಗಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿರುವಾಗ ಜಾರಿಗೊಳಿಸಿದ ಕಾನೂನುಗಳನ್ನು ನಂತರ ಬಂದ ಸರ್ಕಾರಗಳು ನಿಲ್ಲಿಸುತ್ತಿದ್ದವು. ಕಳೆದ ಬಾರಿಯ ತಪ್ಪುಗಳು ಈ ಬಾರಿ ಆಗಬಾರದು ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಪ್ರಮುಖರಾದ ಸದಾನಂದ ಗೌಡ, ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಅಶೋಕ್‌ನಾಯ್ಕ್, ಭಾರತೀ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಡಿ.ಎಸ್. ಅರುಣ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here