ಶಿಕಾರಿಪುರ: ಪಟ್ಟಣದ ಅಂಬೇಡ್ಕರ್ ಬಡಾವಣೆಯ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಉಳ್ಳಿ ಫೌಂಡೇಶನ್ ಹಾಗೂ ಮಾತಂಗ್ಯಮ ಸಮಾಜದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 131ನೇ ಮತ್ತು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮದಿನಾಚರಣೆಯ ಪ್ರಯುಕ್ತ ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಿ ಫೌಂಡೇಶನ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್, ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಮ್ಮ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ನೀಡಿ, ಸಮಾಜದ ಕಟ್ಟ ಕಡೇಯ ವ್ಯಕ್ತಿಗೂ ನ್ಯಾಯ ಮತ್ತು ಶಿಕ್ಷಣ ನೀಡುವಲ್ಲಿ ದಾರಿದೀಪವಾದ ಶ್ರೇಷ್ಠ ವ್ಯಕ್ತಿ ಅಂಬೇಡ್ಕರ್ ರವರು, ಮೈಮೇಲೆ ಹರಿದ ಬಟ್ಟೆ ಇದ್ದರೂ ಚಿಂತೆ ಇಲ್ಲ ಕೈಯಲ್ಲಿ ಒಂದು ಪುಸ್ತಕ ಇರಬೇಕು ಎಂದು ಹೇಳುವ ಮೂಲಕ ಮಹಿಳೆಯರಿಗೂ ಶಿಕ್ಷಣ ನೀಡುವಂತೆ ಪ್ರತಿಪಾದಿಸಿದರು. ಮನುಷ್ಯನಲ್ಲಿ ದಡ್ಡತನವಿದ್ದರೂ ಪರವಾಗಿಲ್ಲ ಆದರೆ ಸಣ್ಣತನವಿರಬಾರದು, ಯಾಕೆಂದರೆ ಮನುಷ್ಯ ಗೌರವ ಕಳೆದುಕೊಳ್ಳುವುದು ತನ್ನ ಸಣ್ಣ ತನದಿಂದಲೇ ಹೊರೆತು, ದಡ್ಡತನ ವಿಂದಲ್ಲ ಎಂದು ಸಾರಿದ್ದಾರೆ. ಬಾಬು ಜಗಜೀವನ್ ರಾಂ ರವರು ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಜನತೆಗೆ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದರು. ಸರ್ವರು ಅದನ್ನು ಪಾಲಿಸಬೇಕಲ್ಲದೇ ಇಂದು ಸಂವಿಧಾನ ಅಪಾಯದಲ್ಲಿದ್ದು, ಅದನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತಂಗೆಮ್ಮ ಸಮಾಜದ ಅಧ್ಯಕ್ಷರಾದ ಪರಮೇಶಣ್ಣ, ಮುಖಂಡರಾದ ಚಂದ್ರಪ್ಪ ಮಾಸ್ಟರ್, ಬಸವರಾಜಪ್ಪ, ಶಿವಪ್ಪ, ಸೋಮಶೇಖರ್ ಶಿವಮೊಗ್ಗಿ, ದೇವೆಂದ್ರಪ್ಪ, ಬೂದ್ಯಪ್ಪ, ದಯಾನಂದ ಗಾಮ ಹಾಗೂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.