ಎಂ.ಗುಡ್ಡೆಕೊಪ್ಪ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ ; ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುವಲ್ಲಿ ತಾರತಮ್ಯವಿಲ್ಲ: ಹರತಾಳು ಹಾಲಪ್ಪ

0
361

ಹೊಸನಗರ: ಕ್ಷೇತ್ರದಲ್ಲಿ ಸಾವಿರಾರು ಅಭಿವೃದ್ಧಿ ಕಾರ್ಯಗಳು ಚಾಲನೆಯಲ್ಲಿವೆ. ಅಭಿವೃದ್ಧಿ ಮಾಡುವ ವಿಷಯದಲ್ಲಿ ತಾರತಮ್ಯವಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ಪಟ್ಟಣಕ್ಕೆ ಸಮೀಪದ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು.

ಏನೂ ಕೆಲಸ ಮಾಡದ ಕೆಲವರು ವೃಥಾ ಆರೋಪ ಮಾಡುತ್ತಾರೆ. ಆದರೆ ತಮ್ಮ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಸಿರುಮಕ್ಕಿ, ಕಳಸವಳ್ಳಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಪಟಗುಪ್ಪ ಸೇತುವೆ ಮುಕ್ತಾಯಗೊಂಡಿದೆ. ಬೆಕ್ಕೋಡಿ ಸೇತುವೆ ಮುಂದಿನ ವರ್ಷ ನಿರ್ಮಾಣವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸಂಪರ್ಕಕ್ಕೆ ವಿಶೇಷ ಆಧ್ಯತೆ ನೀಡಿದ್ದು, ಹಲವು ಹೊಸ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದರು.

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 1 ಸಾವಿರಕ್ಕೂ ಹೆಚ್ಚು ಕಾಮಗಾರಿಗಳು ಚಾಲನೆಯಲ್ಲಿವೆ. ಸಾಗರ ತಾಲೂಕಿನ ಆನಂದಪುರ, ಆವಿನಹಳ್ಳಿ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮನೆಮನೆಗೆ ಕುಡಿವ ನೀರು ಸರಬರಾಜು ಮಾಡುವ ಬಹುಕೋಟಿ ಮೊತ್ತದ ಯೋಜನೆಗಳು ಜಾರಿಯಲ್ಲಿವೆ. ಹೊಸನಗರ ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳಿಗೆ ವರಾಹಿ ನದಿ ನೀರು ಸರಬರಾಜು ಮಾಡುವ 295 ಕೋಟಿ ರೂ. ವೆಚ್ಚದ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ್, ಬಿಳಗೋಡು ಗಣಪತಿ, ಮನೋಧರ, ಪಿಡಿಓ ನಾಗರಾಜ್, ಕಲ್ಯಾಣಪ್ಪಗೌಡ, ಮೆಣಸೆ ಆನಂದ, ರುಕ್ಮಿಣಿರಾಜು, ಗ್ರಾಪಂ ಸದಸ್ಯರಾದ ಶ್ರೀಧರ, ಓಂಕೇಶಗೌಡ, ಪ್ರವೀಣ್, ಮಂಡಾಣಿ ಮೋಹನ ಮತ್ತಿತರರು ಇದ್ದರು.

ಸಚಿವ ಸ್ಥಾನದ ಬೆನ್ನುಬಿದ್ದಿಲ್ಲ:

ಸಚಿವ ಸ್ಥಾನದ ಆಕಾಂಕ್ಷಿ ಹೌದು. ನೀಡಿದಲ್ಲಿ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ಆದರೆ ಸ್ಥಾನ ಪಡೆಯಲೇ ಬೇಕೆನ್ನುವ ಹಂಬಲಕ್ಕಾಗಿ ಅದರ ಬೆನ್ನುಬಿದ್ದಿಲ್ಲ. ಈ ಬಗ್ಗೆ ಯಾರ ಜೊತೆ ಚರ್ಚೆ ಸಹಾ ಮಾಡಿಲ್ಲ. ಅವಧಿ ಕಡಿಮೆ ಇರುವ ಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಾರ‍್ಯಕ್ರಮದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕೊಡಿಸುವುದಕ್ಕಾಗಲಿ, ತೆಗೆಸುವುದಕ್ಕಾಗಲೀ ಶಕ್ತಿಯಿಲ್ಲ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here