ಏಕವ್ಯಕ್ತಿ ರಂಗೋತ್ಸವಕ್ಕೆ ಚಾಲನೆ | ಕನ್ನಡ ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ: ಡಾ. ನಾಗೇಂದ್ರ ಹೊನ್ನಳ್ಳಿ

0
128

ಶಿವಮೊಗ್ಗ: ಕನ್ನಡ ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿದ್ದು, ಭಾಷೆಯಲ್ಲಿ ವೈವಿದ್ಯತೆ ಇದ್ದರೂ, ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಅವರು ತಿಳಿಸಿದರು.

ಅವರು ಗುರುವಾರ ರಂಗಾಯಣ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಈ ಬಾರಿ ರಾಜ್ಯೋತ್ಸವದ ಅಂಗವಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ನಾಡು, ನುಡಿಯ ಬಗ್ಗೆ ಇನ್ನಷ್ಟು ಅಭಿಮಾನ ಮೂಡಿಸುವ ಇಂತಹ ಕಾರ್ಯಕ್ರಮಗಳು ನಮ್ಮನ್ನು ಇನ್ನಷ್ಟು ಒಗ್ಗೂಡಿಸಲು ಪ್ರೇರಕವಾಗಿದೆ. ಕನ್ನಡ ಏಕೀಕರಣಕ್ಕಾಗಿ ನಡೆದ ಚಳವಳಿಯ ಬಗ್ಗೆ ಎಲ್ಲರಿಗೂ ಇನ್ನಷ್ಟು ಅರಿತುಕೊಳ್ಳುವ ಅಗತ್ಯವಿದೆ. ಕನ್ನಡ ಕೇವಲ ಭಾಷೆಯಲ್ಲ. ಅದು ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ರಂಗಕರ್ಮಿಕ ಸಾಸ್ವೆಹಳ್ಳಿ ಸತೀಶ್, ಏಕವ್ಯಕ್ತಿ ರಂಗ ಪ್ರದರ್ಶನ ಕೇವಲ ಕಲಾವಿದನಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಸವಾಲಿನ ಕಾರ್ಯ. ಏಕವ್ಯಕ್ತಿ ರಂಗ ಪ್ರಯೋಗದಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ. ಸಮಾಜಮುಖಿಯಾದ ವಿಷಯಗಳನ್ನು ಒಳಗೊಂಡ ಏಕವ್ಯಕ್ತಿ ಪ್ರಯೋಗಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರುವ ಅಗತ್ಯವಿದೆ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೆಂದರೆ, ಕನ್ನಡತನವನ್ನು ಉಳಿಸಿಕೊಳ್ಳುವುದಾಗಿದೆ ಎಂದು ಹೇಳಿದರು.

ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಕನ್ನಡಕ್ಕಾಗಿ ನಾವು ಕಾರ್ಯಕ್ರಮದಡಿಯಲ್ಲಿ ರಂಗಾಯಣದ ವತಿಯಿಂದ ಎರಡು ದಿನಗಳ ಕಾಲ ಏಕವ್ಯಕ್ತಿ ರಂಗಪ್ರಯೋಗ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರೀತಿಯನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಲಲಾಗುತ್ತಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಅವರು ಮಾತನಾಡಿದರು. ರಂಗೋತ್ಸವ ಅಂಗವಾಗಿ ಕರಿಯಪ್ಪ ಕವಲೂರು ಅವರು ನಿರ್ದೇಶಿಸಿ, ಅಭಿನಯಿಸಿದ ಸ್ಮಶಾನವಾಸಿಯ ಸ್ವಗತ ಮತ್ತು ಗೋಕುಲ ಸಹೃದಯ ಅವರು ಅಭಿನಯಿಸಿದ ಚಿಟ್ಟೆ ನಾಟಕ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here