ಏ.15ರ ಒಳಗೆ ಅನರ್ಹರು BPL ಕಾರ್ಡ್ ಹಿಂತಿರುಗಿಸಿ, ಇಲ್ಲವಾದರೆ ದಂಡ ಮತ್ತು ಕೇಸು ಹಾಕಿಸಿಕೊಳ್ಳಲು ಸಿದ್ಧರಾಗಿ: ತಹಶೀಲ್ದಾರ್ ವಿ.ಎಸ್. ರಾಜೀವ್ ಎಚ್ಚರಿಕೆ

0
1275

ಹೊಸನಗರ: ಸರ್ಕಾರದ ಆದೇಶ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಗಳನ್ನು ಏಪ್ರಿಲ್ 15ರ ಒಳಗೆ ತಾಲ್ಲೂಕು ಕಛೇರಿಗೆ ಹಿಂತಿರುಗಿಸದಿದ್ದರೆ ಅನರ್ಹರು ಪಡೆದಿರುವ ಕಾರ್ಡುದಾರರ ಮೇಲೆ ಕ್ರಿಮಿನಲ್ ಕೇಸ್ ಮತ್ತು ದಂಡ ಹಾಕಿಸಿಕೊಳ್ಳಲು ಸಿದ್ದರಾಗಿರಬೇಕೆಂದು ಹೊಸನಗರದ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಿಳಿಸಿದ್ದಾರೆ.

ಅವರು ತಾಲ್ಲೂಕು ಕಛೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 34,453 ಕಾರ್ಡುದಾರರಿದ್ದು ಅದರಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು 21,386 ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು 4215 ಕಾರ್ಡುದಾರರು ಅಂತ್ಯೋದಯ ಕಾರ್ಡ್ಗಳನ್ನು ಪಡೆದವರಾಗಿದ್ದಾರೆ. ಎಪಿಎಲ್ ಕಾರ್ಡ್ 8852 ಇದ್ದು ಒಂದು ವರ್ಷದಲ್ಲಿ 441 ಕಾರ್ಡ್ಗಳನ್ನು ರದ್ದುಪಡಿಸಲಾಗಿದ್ದು ಸುಮಾರು 2,43,590 ರೂಪಾಯಿಗಳನ್ನು ಸರ್ಕಾರದ ಬೊಕ್ಕಸಕ್ಕೆ ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರ ಸೂತ್ತೋಲೆಯ ಪ್ರಕಾರ ಖಜಾನೆ ಇಲಾಖೆಯಿಂದ ಸಂಬಳ ಪಡೆಯುತ್ತಿರುವ ಎಲ್ಲ ನೌಕರ ವರ್ಗದವರು, ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರಿ ಪ್ರಾಯೋಜನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯುತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ವೃತ್ತಿ ತೆರಿಗೆ, ಪಾವತಿಸುವ ಎಲ್ಲಾ ಕುಟುಂಬಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಆಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತು ನಾಲ್ಕು ಚಕ್ರದ ವಾಹನಗಳನ್ನು ಹೊಂದಿರದ ಎಲ್ಲಾ ಕುಟುಂಬಗಳು ಕುಟುಂಬದ ವಾರ್ಷಿಕ ಆದಾಯವು ರೂಪಾಯಿ 1ಲಕ್ಷದ 20ಸಾವಿರಕ್ಕಿಂತಲೂ ಕಡಿಮೆ ಇರುವ ಕುಟುಂಬಗಳು ಬಿ.ಪಿ.ಎಲ್ ಕಾಡ್ ಹೊಂದಲು ಅರ್ಹರಾಗಿದ್ದು ಇವುಗಳನ್ನು ಬಿಟ್ಟು ಯಾರ‍್ಯಾರು ಸರ್ಕಾರದ ಸೂತ್ತೋಲೆ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದರೆ ಅವರೆಲ್ಲರು ತಕ್ಷಣ ಕಾರ್ಡ್ಗಳನ್ನು ಹಿಂತಿರುಗಿಸಬೇಕೆಂದರು.

ಈ ಸಂದರ್ಭದಲ್ಲಿ ಹೊಸನಗರ ತಾಲ್ಲೂಕಿನ ಆಹಾರ ನಿರೀಕ್ಷಕರುಗಳಾದ ಬಾಲಚಂದ್ರ, ಕವಿರಾಜ್, ನಾಗರಾಜ್ ಹಾಗೂ ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಗ್ರೇಡ್ 2ತಹಶೀಲ್ದಾರ್ ರಾಕೇಶ್, ಶಿರಾಸ್ಥದಾರ್‌ರಾದ ಶ್ರೀಕಾಂತ್ ಹೆಗ್ಡೆ, ಸುಧೀಂದ್ರ ಕುಮಾರ್, ಸುರೇಶ್, ಪ್ರಥಮ ದರ್ಜೆ ಗುಮಾಸ್ತರಾದ ವಿನಯ್ ಎಂ ಆರಾಧ್ಯ, ಚಿರಾಗ್, ರೆವಿನ್ಯೋ ಇನ್ಸ್ಪೇಕ್ಟರ್ ವೆಂಕಟೇಶ್‌ಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here