ಒಂದು ಹೆಣ್ಣು ಯಾವಾಗ ತನ್ನ ಸ್ವಂತ ಕಾಲಿನಲ್ಲಿ ನಿಲ್ಲ ಬಲ್ಲಳೋ ಅಂದಿನಿಂದ ಹಲವಾರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ: ನ್ಯಾಯಾಧೀಶ ದೇವರಾಜ್‌ ಹೆಚ್.

0
321

ಶಿಕಾರಿಪುರ: ಒಂದು ಹೆಣ್ಣು ತಾನು ಬಾಲ್ಯದಿಂದಲೂ ಪ್ರೌಢಾವಸ್ಥೆಗೆ ಬರುವವರೆಗೂ ತನ್ನ ತಂದೆ ತಾಯಿಯೊಂದಿಗೆ ಸುಭದ್ರೆಯಾಗಿರುವಳು. ಆಕೆ ಎಂದು ತಾನು ತನ್ನ ಸ್ವಂತ ಕಾಲಿನಲ್ಲಿ ನಿಲ್ಲ ಬಲ್ಲಳೋ ಅಥವಾ ವೈವಾಹಿಕ ಜೀವನದಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸುವವಳೋ ಅಂದಿನಿಂದ ಹಲವಾರು ಸಮಸ್ಯೆ ಎದುರಿಸ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಾಲ್ಲೂಕು ಜೆಎಂಎಫ್ಸಿ ನ್ಯಾಯಾಲಯದ ಸಿವಿಲ್ ಹೆಚ್ಚುವರಿ ನ್ಯಾಯಾಧೀಶರಾದ ದೇವರಾಜ್ ಹೆಚ್ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಹಕ್ಕುಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕಾನೂನಿನ ಪ್ರಕಾರ ಮಹಿಳೆಯರು ಮತ್ತು ಮಕ್ಕಳಿಗೆ ಹೆಚ್ಚಿನ ಭದ್ರತೆಗೆ ಅವಕಾಶವನ್ನು ಕಲ್ಪಿಸಲಾಗಿದ್ದರೂ ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸ ಬೇಕಾಗುತ್ತಿದೆ. ಆಕೆ ಬಾಲಿಕಾ ಸಮಯದಲ್ಲಿ ತನ್ನ ತಂದೆ ತಾಯಿಯೊಂದಿಗೆ ಸುಭದ್ರೆಯಾಗಿರುವಳು. ಎಂದು ತಾನು ತನ್ನ ಸ್ವಂತ ಕಾಲಿನಲ್ಲಿ ನಿಲ್ಲ ಬಲ್ಲಳೋ ಅಥವಾ ವೈವಾಹಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಳೋ ಅಂದಿನಿಂದ ಸಮಸ್ಯೆಗಳ ಕೂಪಕ್ಕೆ ತಳ್ಳಲ್ಪಡುವಳು ಎಂದರು.

ನ್ಯಾಯಾಲಯಗಳಲ್ಲಿ ನೂರರಲ್ಲಿ ಐವತ್ತ ರಷ್ಟು ಪ್ರಕರಣಗಳು ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗುತ್ತಿತ್ತು. ಮಹಿಳೆಯರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ಕಷ್ಟ ನೋವುಗಳ ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿತ್ತು. 2005 ರ ನಂತರ ಕಾನೂನಿನಲ್ಲಿ ಹಲವಾರು ರೀತಿಯಲ್ಲಿ ಬದಲಾವಣೆ ಮಾಡಲಾಗಿ, ಅದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನಿನಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಬಾಲ್ಯದಲ್ಲಿ ತನ್ನ ತಂದೆ ತಾಯಿಯೊಂದಿಗೆ ಸ್ವತಂತ್ರವಾಗಿ ಸುಭದ್ರವಾಗಿ ಬೆಳೆಯುವ ಮಹಿಳೆ, ವಿವಾಹದ ನಂತರ ಗಂಡಿನ ಮನೆಯಲ್ಲಿ ಅವೆಲ್ಲವನ್ನೂ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಒಂದು ವೇಳೆ ಗಂಡನ ಮನೆಯಲ್ಲಿ ಸ್ಥಿತಿವಂತರಾಗಿದ್ದು, ಆಕೆಯ ಗಂಡ ಕೆಟ್ಟ ದಾರಿಯಲ್ಲಿ ಸಾಗಿದರೆ, ಗಂಡನ ಮನೆಯಲ್ಲೂ ಇರುವ ಹಾಗಿಲ್ಲ ತಂದೆಯ ಮನೆಗೂ ಹೋಗುವಂತಿಲ್ಲ. ಒಂದು ವೇಳೆ ವಿಚ್ಛೇದನ ಪಡೆದರೆ ಆಕೆಗೆ ಕೇವಲ ಜೀವನಾಂಶ ನೀಡುವಂತಾಗಿದೆ. ಒಂದು ವೇಳೆ ಗಂಡನ ಮನೆಯಲ್ಲಿ ಆಸ್ತಿ ಸಿಗಬೇಕಾದರೆ, ಗಂಡನು ಮೃತ ಪಟ್ಟಿರಬೇಕು ಇಂತಹಾ ಸಂದಿಗ್ಧ ಸ್ಥಿತಿಯಲ್ಲಿ ಮಹಿಳೆಯರಿದ್ದಾರೆ. ದೇಶದ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ. ಸರ್ಕಾರಗಳು ರಾಜಕೀಯ ಹಕ್ಕು, ಸಾಮಾಜಿಕ ಹಕ್ಕು ತರುವ ರೀತಿಯಲ್ಲಿ ಮಹಿಳಾ ಹಕ್ಕುಗಳ ಕುರಿತು ಅರಿವು ಮೂಡಿಸುವ ಮೂಲಕ ಮಹಿಳೆಯರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಮಹಿಳೆಯರಿಗೂ ಸಹ ಪ್ರತ್ಯೇಕ ಕಾನೂನು ರಚಿಸಬೇಕು.1988 ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ತಂದು 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಉಚಿತ ಕಾನೂನು ಸೇವೆಗಳ ವ್ಯವಸ್ಥೆ ಮಾಡಲಾಗಿದೆ ಎಲ್ಲಾ ರೀತಿಯ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಂತರದಲ್ಲಿ ಮಾತನಾಡಿದ ಇನ್ನೋರ್ವ ನ್ಯಾಯಾಧೀಶೆ ಸರಸ್ವತಿ ಕೆ.ಎನ್, ಗ್ರಾಮೀಣ ಪ್ರದೇಶಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಸರ್ವೊಚ್ಛ ನ್ಯಾಯಾಲಯದಲ್ಲಿ ಸೇರಿದಂತೆ ದೇಶದಾದ್ಯಂತ ಮಹಿಳಾ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇನ್ನೋರ್ವ ನ್ಯಾಯಾಧೀಶರಾದ ಸಂದೇಶ್ ಟಿ.ಎಲ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರ ಸ್ಥಿತಿ ತುಂಬಾ ಶೋಚನೀಯವಾಗಿತ್ತಲ್ಲದೇ, ನಂತರವೂ ಕೂಡ ಅದೇ ರೀತಿ ಮುಂದುವರೆದಿತ್ತು.ಬಾಲ್ಯ ವಿವಾಹ, ವಿವಾಹ ವಿಚ್ಛೇದನ ಪ್ರಕರಣಗಳಿಗೆ ಕಡಿವಾಣ ಹಾಕುವ ಮೂಲಕ ಹೊಸದೊಂದು ಕ್ರಾಂತಿ ಮಾಡಲಾಗಿದೆ. ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗಾಗಿ ಅನೇಕ ರೀತಿಯಲ್ಲಿ ಕಾನೂನು ಜಾರಿಗೆ ತಂದು ಅವರನ್ನು ಸುಭದ್ರೆಯ ಕಡೆ ತರಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಎಂಎಫ್ಸಿ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯಾಯ, ತೇಜಸ್ವಿನಿ ಕೆ.ಎಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಬಿ.ಎಸ್ ರೂಪಾ ರಾವ್, ಇ ಪ್ರೇಮ, ವಕೀಲರ ಸಂಘದ ಅಧ್ಯಕ್ಷ ಕೆರೆಸ್ವಾಮಿ ಗೌಡ, ಕಾರ್ಯದರ್ಶಿ ಹೇಮರಾಜ್ ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here