ಕಡು ಬಡತನವಿದ್ದರು ಹಾಕಿ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಕು. ಪೂಜಿತ ಗೌಡ

0
497

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದ ವರಾಹಿ ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣ ವನ್ನು ಸರಕಾರಿ ಶಾಲೆಯಲ್ಲಿ ಪಡೆದು ನಂತರ ಕ್ರೀಡಾ ಶಾಲೆಗೆ ಸೇರಿ ಕಠಿಣ ಪರಿಶ್ರಮ ನಿರಂತರ ಅಭ್ಯಾಸದ ಮೂಲಕ ಇಂದು ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸುತ್ತಿದ್ದಾರೆ ಪೂಜಿತ ಗೌಡ.

ಇದೇ ತಿಂಗಳು 12ರಂದು ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ತಂಡದಿಂದ ಪ್ರತಿನಿಧಿಸಿ ಅತ್ಯುತ್ತಮವಾದ ಪ್ರದರ್ಶನ ನೀಡಿ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆಯಲು ಪ್ರಮುಖ ಪಾತ್ರವನ್ನು ವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಬರುವೆ ಗ್ರಾಮದ ನಿವಾಸಿಗಳಾದ ನಾಗೇಶ್ ಗೌಡ ಹಾಗೂ ಪೂರ್ಣಿಮಾ ದಂಪತಿಗಳ ಮಗಳಾದ ಪೂಜಿತ ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿಂಚುತ್ತಿದ್ದಾಳೆ. ಪೂಜಿತ ಪ್ರಸ್ತುತ ಕರ್ನಾಟಕ ಮಹಿಳಾ ಹಾಕಿ ತಂಡದ ಸಹ ಆಟಗಾರ್ತಿಯಾಗಿದ್ದಾಳೆ.

ಕ್ರೀಡಾ ಲೋಕದಲ್ಲಿ ಕೀರ್ತಿ ಪತಾಕಿ :

ಬರುವೆ ಗ್ರಾಮದ ಕಡು ಬಡ ಕುಟುಂಬದಲ್ಲಿ ಜನಿಸಿ ಕಷ್ಟ ಸುಖ, ನೋವುಗಳನ್ನು ನೋಡಿ ಕೃಷಿ ಆಧರಿಸಿ ಜೀವನ ಸಾಗಿಸಿಕೊಂಡು ಬಂದಂತಹ ನಾಗೇಶ್ ಗೌಡ ಪತ್ನಿ ಪೂರ್ಣಿಮಾ ಈ ದಂಪತಿಗಳ ಮಗಳಾದ ಕುಮಾರಿ ಪೂಜಿತ ಇಂದು ರಾಷ್ಟ್ರಮಟ್ಟದಲ್ಲಿ ರಿಪ್ಪನ್‌ಪೇಟೆಯ ಕೀರ್ತಿಪತಾಕೆಯನ್ನು ಕ್ರೀಡಾಲೋಕದಲ್ಲಿ ಹಾರಿಸುತ್ತಿದ್ದಾಳೆ.

ಹೆಚ್ಚು ಅನುಕೂಲಸ್ಥರು ಅಲ್ಲದಿದ್ದರು ತನ್ನ ಮಗಳು ಈ ನಾಡಿಗೆ ಏನಾದರೂ ತನ್ನದೇ ಆದ ಸೇವೆ ಸಲ್ಲಿಸಬೇಕು ಎಂಬ ತಂದೆ-ತಾಯಿಯರ ಕನಸನ್ನು ಇಂದು ಪೂಜಿತ ನನಸಾಗಿಸಿದ್ದಾಳೆ.

ಕಾಮರ್ಸ್ ಪದವಿದರೆ :

ಕುಮಾರಿ ಪೂಜಿತಾ ತನ್ನ ಬಾಲ್ಯದ ಜೀವನವನ್ನು ರಿಪ್ಪನ್‌ಪೇಟೆಯ ಸರಕಾರಿ ಬಾಲಕಿಯರ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ ಮುಂದಿನ ವ್ಯಾಸಂಗಕ್ಕಾಗಿ ಶಿವಮೊಗ್ಗದ ಕ್ರೀಡಾ ಹಾಸ್ಟೆಲ್ ನಲ್ಲಿ 5ನೇ ತರಗತಿಯಿಂದ 07ನೇ ತರಗತಿಯವರೆಗೆ ನಂತರ 08ರಿಂದ 10ನೇ ತರಗತಿ ಕ್ರೀಡಾ ಹಾಸ್ಟೆಲ್ ಮಡಿಕೇರಿಯಲ್ಲಿ ವ್ಯಾಸಂಗ ಮಾಡಿ ಕಾಮರ್ಸ್ ಪದವಿಯನ್ನು ಥೆರೆಶಿಯನ್ ಕಾಲೇಜ್ ಮೈಸೂರಿನಲ್ಲಿ ಮುಗಿಸಿದ್ದಾರೆ.

19ಬಾರಿ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಪ್ರತಿಭೆ:

ಈಕೆಯ ದೃಢ ಅಚಲ ಸ್ಪರ್ಧಾ ಮನೋಭಾವ ಹಾಗೂ ಈ ನಾಡಿಗೆ ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇಂದು ರಾಷ್ಟ್ರಮಟ್ಟದಲ್ಲಿ ಹಾಕಿ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದೆ.

ಪೂಜಿತ ಇದುವರೆಗೆ 19 ಬಾರಿ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ಮುಂದಿನ ದಿನಗಳಲ್ಲಿ ಭಾರತ ದೇಶದ ಪರವಾಗಿ ಅಂತರ್ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಭಾರತ ಹಾಗೂ ಕರ್ನಾಟಕದ ಹಾಕಿ ಕ್ರೀಡೆಯ ಪತಾಕೆಯನ್ನು ಹಾರಿಸಬೇಕೆಂಬ ಅಭಿಲಾಷೆಯನ್ನು ಹೊಂದಿದ್ದಾರೆ.

ಸರಕಾರದಿಂದ ದೊರೆಯದ ಆರ್ಥಿಕ ಸಹಕಾರ :

ರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಆಟಗಾರತಿಯಾಗಿ ಭಾಗವಹಿಸಿಲು ಕಡು ಬಡತನದ ನನ್ನ ಪೋಷಕರ ಹಾಗೂ ತರಬೇತಿದಾರರ ಸಹಕಾರವೇ ಕಾರಣವಾಗಿದೆ. ಸರಕಾರದಿಂದಾಗಲಿ, ಚುನಾಯಿತ ಪ್ರತಿನಿಧಿಗಳಿಂದಾಗಲಿ ಇದುವರೆಗೂ ಯಾವುದೇ ರೀತಿಯ ಆರ್ಥಿಕ ನೆರವು ದೊರೆತಿಲ್ಲ ಎಂದು ಪೂಜಿತ ಗೌಡ ಹೇಳುತ್ತಾರೆ.

ಮಗಳ ಸಾಧನೆ ಹೆಮ್ಮೆ ತಂದಿದೆ:

ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು. ನನಗೆ ಕಡು ಬಡತನವಿದ್ದರು ಅದನ್ನೆಲ್ಲಾ ಸಹಿಸಿಕೊಂಡು ಹಾಕಿ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪೂಜಿತ ಕೀರ್ತಿ ಪಡೆದಿರುವುದು ನನಗೆ ನಮ್ಮ ಊರಿಗೆ ಹೆಮ್ಮೆ ತಂದಿದೆ ಎಂದು ಪೂಜಿತಳ ತಂದೆ ನಾಗೇಶ್ ಗೌಡ ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಲವಾರು ಸಮಸ್ಯೆಗಳ ಮಧ್ಯೆ ಸಾವಿರಾರು ಸ್ಪರ್ಧಾಳುಗಳ ಮಧ್ಯೆ ಸ್ಪರ್ಧಿಸಿ ಗೆದ್ದು ಜಿಲ್ಲಾ, ರಾಜ್ಯ,ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡು ರಾಷ್ಟ್ರ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಮಿನುಗುತ್ತಿರುವ ಈ ಯುವ ಹಾಕಿ ಕ್ರೀಡಾ ಪ್ರತಿಭೆಗೆ ಸರಕಾರ. ಚುನಾಯಿತ ಪ್ರತಿನಿಧಿಗಳು. ಸಂಘ ಸಂಸ್ಥೆ ಗಳು ಆರ್ಥಿಕ ನೆರೆವು ನೀಡಿದರೆ ಅಂತರ್ ರಾಷ್ಟ್ರೀಯ ಕ್ರೀಡಾ ಪಟುವಾಗಲು ಸಹಕಾರಿಯಾಗುವುದು.

ವರದಿ : ಸಬಾಸ್ಟಿನ್ ಮ್ಯಾಥ್ಯೂಸ್
ಜಾಹಿರಾತು

LEAVE A REPLY

Please enter your comment!
Please enter your name here