ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಸರ್ಕಾರ ಕೈಗೊಂಡಿದೆ: ಸಚಿವ ಕೆ.ಎಸ್ ಈಶ್ವರಪ್ಪ

0
189

ಶಿವಮೊಗ್ಗ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜಸಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಜ್ಯೋತ್ಸವ ಸಂದೇಶ ಭಾಷಣ ಮಾಡಿದರು.

ಕನ್ನಡ ಚೆಲುವಿನ ಭಾಷೆಯಾಗಿದೆ. ವಿಶ್ವ ಮಾನ್ಯ ಪಡೆದಿದೆ. ಇಲ್ಲಿನ ಪರಂಪರೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ, ವಿವಿಧ ಧರ್ಮಗಳ ಸಮಾಗಮ, ಎಲ್ಲಾವೂ ಅನನ್ಯವಾಗಿದೆ. ಕನ್ನಡ ಭಾಷೆಗೆ ಎಂದೂ ಸಾವಿಲ್ಲ. ಇದರ ಅಸ್ಮಿತೆಯನ್ನು ನಾವು ಉಳಿಸಿಕೊಳ್ಳಬೇಕು. ಹಾಗಾಗಿಯೇ ಇಂಗ್ಲೀಷ್ ಭಾಷೆ ಅವಶ್ಯಕವಾಗಿದ್ದರೂ ಕೂಡ ಮಾತೃ ಭಾಷೆ ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ವನ್ನು ಸರ್ಕಾರ ಕೈಗೊಂಡಿದೆ. ಕನ್ನಡ ಭಾಷೆಯ ಸೊಗಡಿಗೆ ಧಕ್ಕೆ ಆಗುವುದಿಲ್ಲ ಎಂದರು.

ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಮೌರ್ಯರು, ಕದಂಬರು, ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು,ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫ ಅವರಂಥ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಜಗಜ್ಯೋತಿ ಬಸವಣ್ಣನವರಂಥ ವಚನಕಾರರು ಮತ್ತು ಹಲವಾರು ದಾರ್ಶನಿಕರು ಬಾಳಿ ಬದುಕಿದ ನೆಲ ಹೆಮ್ಮೆಯ ಕನ್ನಡ ನಾಡು ಎಂದರು.

ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಜನ ಸಾಹಿತ್ಯ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಇಡೀ ದೇಶದಲ್ಲೇ 2ನೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ನಮ್ಮ ಕನ್ನಡ ಎಂದರು.

ಹಾಗೆಯೇ ಶಿವಮೊಗ್ಗದ ನೆಲ ಸಮ ಸಮಾಜದ ಪರಿಕಲ್ಪನೆಯ ನೆಲೆವೀಡು, ಕದಂಬರು, ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಸಂಸ್ಥಾನ ಮತ್ತು ಕೆಳದಿ ಮನೆತನ ಈ ಪ್ರದೇಶವನ್ನು ಆಳುತ್ತ ಕನ್ನಡತನದ ಸೊಗಡನ್ನು ಇನ್ನಷ್ಟು ವಿಸ್ತರಿಸುವಲ್ಲಿ ತನ್ನ ಕೊಡುಗೆ ನೀಡಿದೆ. ಅನುಭವ ಮಂಟಪದ ಅಲ್ಲಮಪ್ರಭು ಬಳ್ಳಿಗಾವಿಯವರು, ಅಕ್ಕ ಮಹಾದೇವಿಯವರು ಉಡುತಡಿಯವರು, ಶರಣ ಚಿಂತನೆಗಳ ನೆಲೆವೀಡು ಎಂದೇ ಖ್ಯಾತವಾದ ಕಲ್ಯಾಣ ಚಳುವಳಿಯ ಮೇರು ವ್ಯಕ್ತಿತ್ವಗಳು ಶಿವಮೊಗ್ಗ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಕನ್ನಡ ಸಾರಸ್ವತ ಲೋಕಕ್ಕೆ ಇಬ್ಬರು ರಾಷ್ಟ್ರಕವಿಗಳನ್ನು ಕೊಟ್ಟ ಹಿರಿಮೆ ಅಷ್ಟೇ ಅಲ್ಲ, ಕುವೆಂಪು ಮತ್ತು ಯು.ಆರ್. ಅನಂತಮೂರ್ತಿ ಅವರಂತಹ ಇಬ್ಬರು ಜ್ಞಾನಪೀಠ ಪುರಸ್ಕೃತರನ್ನು ಪೊರೆದ ಮಣ್ಣಿದು ಎಂದರು.

ಈ ವರ್ಷ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಈ ಅಮೃತ ಮಹೋತ್ಸವವನ್ನು ದೇಶಾದ್ಯಂತ ಒಂದು ವರ್ಷ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿವಿಧ ಜನಪರ, ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರೂ ಕೂಡ ಇದಕ್ಕೆ ಕೈಜೋಡಿಸಿರುವುದು ರಾಷ್ಟ್ರಪ್ರೇಮ ಮತ್ತು ಕಲ್ಯಾಣದ ದ್ಯೋತಕವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದು. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ರಾಜ್ಯದಲ್ಲಿ ಅಬಿವೃದ್ಧಿ ಪರ್ವ ಮುಂದೂವರೆದಿದ್ದು, ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ 120 ಸ್ವಚ್ಛ ಸಂಕೀರ್ಣಗಳನ್ನು ನಿರ್ಮಿಸಲಾಗಿದ್ದು, 248 ಕಸ ಸಂಗ್ರಹಿಸುವ ವಾಹನಗಳನ್ನು ಒದಗಿಸಲಾಗಿದೆ. 268 ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳು ಕಾರ್ಯಾರಂಭ ಮಾಡಿವೆ. ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ, ರಸ್ತೆ ಸಂಪರ್ಕ ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮಗಳು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳ್ಳುವ ಹಾದಿಯಲ್ಲಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ನಮ್ಮ ನಾಡು ಇಂದು, ಮುಂದು, ಎಂದೆಂದೂ ಎಲ್ಲಾ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು ಎಂದು ಕರೆ ನೀಡಿದರು.

ಮೇಯರ್ ಸುನೀತಾ ಅಣ್ಣಪ್ಪ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರರಾಮಯ್ಯ, ಪಾಲಿಕೆ ಸದಸ್ಯರಾದ ವಿಶ್ವಾಸ್, ವಿಶ್ವನಾಥ್, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿ.ಪಂ.ಸಿಇಓ ವೈಶಾಲಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮಿ ಪ್ರಸಾದ್ ಸೇರಿದಂತೆ ಹಲವರಿದ್ದರು.

ಇದಕ್ಕೂ ಮುನ್ನ ಸೈನ್ಸ್ ಕಾಲೇಜು ಮೈದಾನ ದಿಂದ ಡಿ.ಎ.ಆರ್. ಪೊಲೀಸ್ ಪೆರೇಡ್ ಮೈದಾನದವರೆಗೆ ಶ್ರೀ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಜಾಹಿರಾತು

LEAVE A REPLY

Please enter your comment!
Please enter your name here