ಶಿಕಾರಿಪುರ: ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಿಕಾರಿಪುರ ತಾಲ್ಲೂಕಿನ ಕೊಡುಗೆ ಅಪಾರವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹ-ಪ್ರಾಧ್ಯಾಪಕ ಡಾ.ಎಚ್. ಚಿನ್ನಪ್ಪ ಹೇಳಿದರು.
ಪಟ್ಟಣದ ಸುರಭಿ ಭವನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸುರಭಿ ಬಳಗ ಆಶ್ರಯದಲ್ಲಿ ನಡೆದ ಸಾಹಿತ್ಯ,ಸಂಸ್ಕೃತಿ ಸುರಭಿ ಬಳಗ ದತ್ತಿ ಹಾಗೂ ಹಂಚಿನಮನೆ ಗುರುಬಸಪ್ಪ ಪಾರ್ವತಮ್ಮ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಿಕಾರಿಪುರ ತಾಲ್ಲೂಕಿನ ಕೊಡುಗೆ’ ವಿಷಯ ಕುರಿತು ಅವರು ಮಾತನಾಡಿದರು.
ಹಲ್ಮಿಡಿ ಶಾಸನಕ್ಕಿಂತ ಪುರಾತನ ಕನ್ನಡ ಶಾಸನ ಸಿಂಹಕಟಾಂಜನ ಶಾಸನ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ದೊರೆತಿದ್ದು,ಇದೇ ಪುರಾತನ ಶಾಸನವೆಂದು ಘೋಷಣೆ ಮಾಡುವುದು ಬಾಕಿ ಇದೆ. ತಾಲ್ಲೂಕಿನಲ್ಲಿ ಅಕ್ಕಮಹಾದೇವಿ,ಅಲ್ಲಮಪ್ರಭು, ಸತ್ಯಕ್ಕ ಸೇರಿದಂತೆ ಹಲವು ಶಿವಶರಣರು ಜನ್ಮತಾಳಿದ್ದು,ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.
ಬಳ್ಳಿಗಾವಿ ಗ್ರಾಮದ ಕೋಡಿಮಠ ಪುರಾತನ ವಿಶ್ವವಿದ್ಯಾಲಯವಾಗಿದ್ದು,ಬೇಗೂರು ಹಾಗೂ ಸಾಲೂರು ಗ್ರಾಮಗಳು ವಿದ್ಯಾ ಕೇಂದ್ರಗಳಾಗಿದ್ದವು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಯಾವುದೇ ಪಕ್ಷ ಹಾಗೂ ಜಾತಿಗೆ ಸೀಮಿತವಾದ ಸಂಘಟನೆ ಅಲ್ಲ. ಜಾತ್ಯಾತೀತವಾಗಿ,ಪಕ್ಷಾತೀತವಾಗಿ ಕನ್ನಡ ಪರಚಟುವಟಿಕೆ ನಡೆಸುತ್ತಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಚಟುವಟಿಕೆಗಳಿಗೆ ದತ್ತಿದಾನಿಗಳು ದತ್ತಿನಿಧಿ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಕನ್ನಡ ಭಾಷಾಭಿಮಾನ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುರಭಿ ಬಳಗ ಅಧ್ಯಕ್ಷ ಎಚ್.ಜಿ. ಮೃತ್ಯುಂಜಯಪ್ಪ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಓಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಉತ್ತಮವಾಗಿ ಆಯೋಜಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ರಘು ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನಲ್ಲಿ ನಿರಂತರವಾಗಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ನಡೆಯಲಿ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಖುಷಿ ಹಾಗೂ ಅಂಕಿತಾ ಅವರನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಅವರನ್ನು ಸುರಭಿ ಬಳಗ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಕಾನೂರು ನಾಗಪ್ಪ, ಸುರಭಿ ಬಳಗ ಮಾಜಿ ಅಧ್ಯಕ್ಷರಾದ ಹರಿಹರ ಜಯದೇವಪ್ಪ, ಅಂಗಡಿ ಏಕೇಶ್ವರಪ್ಪ, ಪಿ.ಜಯದೇವಯ್ಯ, ಪಾಂಡುರಂಗಶೇಠ್ ರಾಯ್ಕರ್, ಉಪಾಧ್ಯಕ್ಷ ಯು.ಎಸ್. ರುದ್ರಯ್ಯ, ಖಜಾಂಜಿ ಅಶೋಕ್ ಕುಮಾರ್ ಗೋಗಿ, ಸಂಚಾಲಕರಾದ ಎ.ಪಿ. ಉಮೇಶ್, ಸಾಲೂರು ಕುಮಾರ್, ಕಸಾಪ ಕಾರ್ಯದರ್ಶಿಗಳಾದ ನಾಗರಾಜ್ ಆಚಾರ್, ಬಿ.ಎನ್. ಸುನೀಲ್ ಕುಮಾರ್, ಪದಾಧಿಕಾರಿಗಳಾದ ಡಾ.ಪ್ರಕಾಶ್, ನಂದಪ್ರೇಮ್ ಕುಮಾರ್, ಕಾಳಿಂಗರಾವ್, ಬಂಗಾರಪ್ಪ, ಜಿಯಾವುಲ್ಲಾ, ಕಾಶೀಬಾಯಿ ಉಪಸ್ಥಿತರಿದ್ದರು.
Related