ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಕೆ.ವಿ ಶಿವಕುಮಾರ್ ಮತ್ತು ಗೋಪಾಲ್ ಯಡಗೆರೆ ನೇಮಕ

0
319

ಶಿವಮೊಗ್ಗ: ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ `ನಮ್ಮನಾಡು’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ ಶಿವಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿಫಾರಸ್ಸಿನ ಮೇರೆಗೆ ಕೆ.ವಿ ಶಿವಕುಮಾರ್ ಅವರನ್ನು ಮಾಧ್ಯಮ ಅಕಾಡೆಮಿಯಲ್ಲಿ ಸಂಘದ ಪ್ರಾತಿನಿಧಿಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಬಿ.ಕಾಂ. ಎಲ್.ಎಲ್.ಬಿ ಪದವೀಧರರಾದ ಕೆ.ವಿ ಶಿವಕುಮಾರ್ ಸಮಸಮಾಜ ನಿರ್ಮಾಣದ ಆಶಯಗಳೊಂದಿಗೆ ಮತ್ತು ಜನಪರದನಿಯಾಗಿ ಕಳೆದ ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೆ.ವಿ.ಶಿವಕುಮಾರ್ ಸಂಪಾದಕತ್ವದ `ನಮ್ಮ ನಾಡು’ ಕನ್ನಡ ದಿನಪತ್ರಿಕೆಯ ವೃತ್ತಿಪರತೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು 2012ರಲ್ಲಿ `ಆಂದೋಲನ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ‌ ಜಿಲ್ಲಾಧ್ಯಕ್ಷರು ಮತ್ತು ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿಯೂ ಶಿವಕುಮಾರ್ ಅವರು ಪತ್ರಕರ್ತರ ಮತ್ತು ಪತ್ರಿಕೆಗಳ ವೃತ್ತಿಪರ ಹಿತ ಕಾಪಾಡುವಲ್ಲಿ ಸಂಘಟನಾತ್ಮಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೂ ಕಳೆದ 33 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆಯವರು ಉದಯವಾಣಿ ಪತ್ರಿಕೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದು, ಬಳಿಕ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಧಾನ‌ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪತ್ರಿಕೋದ್ಯಮದಲ್ಲಿ ಪರಿಸರ, ತನಿಖಾ ವರದಿಗಳು, ರಾಜಕೀಯ‌ ವರದಿಗಳಲ್ಲಿ ಹೆಸರು ಮಾಡಿದ್ದಾರೆ. ಸಾವಿರಾರು ಜನಪರ ಕಾಳಜಿಯುಳ್ಳ ಲೇಖನಗಳನ್ನು ಬರೆದಿದ್ದಾರೆ. ಮೂಲತಃ ಎನ್. ಆರ್. ಪುರ ತಾಲೂಕಿನ ಯಡಗೆರೆಯ ಶ್ರೀಯುತರು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಪತ್ರಿಕೋದ್ಯಮಕ್ಕೆ ತೊಡಗಿಸಿಕೊಂಡರು. ತರಂಗ, ರೂಪತಾರಾ, ತುಷಾರ ಪತ್ರಿಕೆಗಳಲ್ಲಿ ಸಾಕಷ್ಟು ಮುಖಪುಟ ಲೇಖನಗಳನ್ನು ಬರೆದಿದ್ದು, ನಾಡಿನಾದ್ಯಂತ ಹೆಸರು ಮಾಡಿದ್ದಾರೆ.

ಪತ್ರಿಕಾ ವೃತ್ತಿ ಕ್ಷೇತ್ರದಲ್ಲಿ ಈ ಇಬ್ಬರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಇವರನ್ನು ಮಾಧ್ಯಮ ಅಕಾಡೆಮಿಗೆ ನೇಮಕ ಮಾಡಿದೆ.

ಜಾಹಿರಾತು

LEAVE A REPLY

Please enter your comment!
Please enter your name here