ಸಂಸ್ಕೃತಿ ಸಾಮರಸ್ಯ ಬೆಳೆದು ಬರಬೇಕಾಗಿದೆ ; ಕಡೇನಂದಿಹಳ್ಳಿ ಶ್ರೀಗಳು

0 200

ಸೊರಬ ; ಎಲ್ಲೆಡೆ ಅಶಾಂತಿ ಅಸಮಾಧಾನ ಬೆಳೆಯುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ಧರ್ಮ ಸಂಸ್ಕೃತಿ ಸಾಮರಸ್ಯ ಬೆಳೆದು ಬರಬೇಕಾಗಿದೆ. ಧರ್ಮ ಕಾರ್ಯಗಳಲ್ಲಿ ತೊಡಗುವುದರಿಂದ ಶಾಂತಿ ಸಮಾಧಾನ ದೊರೆಯುತ್ತದೆ ಎಂದು ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.

ಅವರು ಬುಧವಾರ ಸಂಜೆ ತಾಲೂಕಿನ ಬಂಕಸಾಣ ಗ್ರಾಮದ ಶ್ರೀ ಹೋಳಿಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಜನವರಿ 30 ರಿಂದ ಫೆಬ್ರುವರಿ 1ರ ವರೆಗೆ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಸೊರಬ ತಾಲೂಕ ಘಟಕದ ಸಂಯೋಗದಲ್ಲಿ ಲೋಕಕಲ್ಯಾಣಾರ್ಥವಾಗಿ ಸರ್ವಾರಿಷ್ಠ ದೋಷ ನಿವಾರಣೆಗಾಗಿ ಹಮ್ಮಿಕೊಂಡಿರುವ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾರುದ್ರಯಜ್ಞ ಪೂರ್ಣಾಹುತಿ ಧರ್ಮ ಸಮಾರಂಭದ ಪೂರ್ವ ಪ್ರಕಟಣೆ ಪತ್ರಿಕೆ ಬಿಡುಗಡೆ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಸೊರಬ ತಾಲೂಕ ಘಟಕ ಪ್ರಾರಂಭಗೊಂಡು 3 ವರ್ಷಗಳು ಪೂರ್ಣಗೊಂಡು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ. ಸಮಾಜದಲ್ಲಿ ನಡೆಯುವ ಧರ್ಮ ಕಾರ್ಯಗಳಲ್ಲಿ ಪುರೋಹಿತರ ಪಾತ್ರ ಹಿರಿದಾಗಿದೆ. ಸಂಸ್ಕಾರ ಹೀನ ಮನುಷ್ಯ ರಾಗ, ದ್ವೇಷ, ಅಸೂಯೆಗಳನ್ನು ಹೊಂದಿ ಅಧರ್ಮದ ಹಾದಿಯಲ್ಲಿ ನಡೆಯುತ್ತಿರುವುದು ನೋವಿನ ಸಂಗತಿ. ದುರ್ಭಿಕ್ಷೆ, ಬರಗಾಲ ಸಮಸ್ತ ವಿಷಪೂರಿತ ವೈರಾಣು ನಿರ್ಮೂಲನೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ ಕ್ಷೇತ್ರದ ಹಾಗೂ ಸಮಸ್ತರ ಸರ್ವಾಂಗೀಣ ಅಭಿವೃದ್ದಿ ಹೊಂದಬೇಕೆಂಬ ಉದ್ದೇಶದಿಂದ ಮಹಾರುದ್ರ ಯಾಗವನ್ನು ಪುರೋಹಿತ ಬಳಗ ಹಮ್ಮಿಕೊಂಡಿರುವು ಸ್ತುತ್ಯಾರ್ಹವಾಗಿದೆ.


ಫೆ.1 ರ ಗುರುವಾರದಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ ಧರ್ಮ ಸಮಾರಂಭ ಜರುಗಲಿದೆ ಎಂದರು.

ಸೊರಬ ತಾಲೂಕ ಪುರೋಹಿತ ಘಟಕದ ಅಧ್ಯಕ್ಷರಾದ ಹಾಲಸ್ವಾಮಿ ಶಾಸ್ತ್ರಿಗಳು ಮಾತನಾಡಿ 3 ದಿನಗಳ ಕಾಲ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ನಿಗದಿತ ಮೊತ್ತ ಸಂದಾಯ ಮಾಡುವುದರ ಮೂಲಕ ಮಹಾರುದ್ರಯಾಗ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವಿದೆ ಅದೇ ರೀತಿ ದಾಸೋಹ ಸೇವೆಯನ್ನು ಸಲ್ಲಿಸಬಹುದಾಗಿದೆ ಎಂದರು.

ಶ್ರೀ ಹೊಳೆಲಿಂಗೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷರಾದ ರಾಜುಗೌಡ್ರ ಪಾಟೀಲ್ ಬಂಕಸಾಣ ಇವರು ಕಾರ್ಯಕ್ರಮದ ಯಶಸ್ಸಿಗೆ ನಾವು ನಮ್ಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಂಪೂರ್ಣವಾಗಿ ಸೇವೆ ಸಹಕಾರ ಸಲ್ಲಿಸುತ್ತೆವೆ ಎಂದರು. ಪುರೋಹಿತ ಸಂಘದ ಹಾಗೂ ಸೇವಾ ಸಮಿತಿಯ ಎಲ್ಲ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!