ಕಳವು ಮಾಡಿದ ಒಂದು ಗಂಟೆಯೊಳಗೆ 5 ಲಕ್ಷ ರೂ. ಹಣ ಪತ್ತೆ ಮಾಡಿದ ಹೊಸನಗರ ಪೊಲೀಸರು ! ಏನಿದು ಘಟನೆ?

0
8600

ಹೊಸನಗರ : ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟಿದ್ದ 5 ಲಕ್ಷ ರೂ‌. ಹಣವನ್ನು ಮಿಂಚಿನ ವೇಗದಲ್ಲಿ ಕಳವು ಮಾಡಿದ ಘಟನೆ ಈ ದಿನ ಮಧ್ಯಾಹ್ನ ಹೊಸನಗರದಲ್ಲಿ ನಡೆದಿದ್ದು, ಪಟ್ಟಣ ಪೊಲೀಸ್ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಘಟನೆ ನಡೆದು ಒಂದು ಗಂಟೆಯೊಳಗೆ ಹಣವನ್ನು ಪತ್ತೆ ಮಾಡಿದ ಪ್ರಸಂಗ ನಡೆದಿದೆ.

ಏನಿದು ಘಟನೆ?

ತಾಲೂಕಿನ ಬಿದನೂರು ನಗರದ ದೇವಗಂಗೆ ವಾಸಿ ವಾಸುದೇವ ಉಡುಪ ಅವರು ಇಂದು ಹೊಸನಗರಕ್ಕೆ ತಮ್ಮ ಮಗನೊಂದಿಗೆ ಮನೆಯಲ್ಲಿ ನಡೆಯುವ ಶುಭಕಾರ್ಯದ ಸಂಬಂಧ ಪಟ್ಟಣದ ಸುಮೇಧ ಅಡಿಕೆ ಮಂಡಿಗೆ ಬಂದು ತಮ್ಮ ಖಾತೆಯಲ್ಲಿರುವ ಹಣದಲ್ಲಿ ಮುಂಗಡವಾಗಿ 5 ಲಕ್ಷ ರೂ. ಹಣವನ್ನು ಪಡೆದು ಮನೆಗೆ ಸಂಬಂಧಪಟ್ಟಂತೆ ಖರೀದಿ ಸಂಬಂಧ ಪಟ್ಟಣದ ನೆಹರೂ ರಸ್ತೆಯ ಗ್ರಾಮೀಣ ಬ್ಯಾಂಕ್ ಪಕ್ಕದ ಹರೀಶ್ ಎಂಬುವವರ ಅಂಗಡಿ ಎದುರು ತಮ್ಮ ಕಾರನ್ನು ನಿಲ್ಲಿಸಿ ವ್ಯಾಪಾರಕ್ಕೆ ತೆರಳಿದ ಸಂಬಂಧದಲ್ಲಿ ಕ್ಷಣಾರ್ಧದಲ್ಲಿ ಅವರ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಹಣವನ್ನು ಎಗರಿಸಿದ ಘಟನೆ ನಡೆಯಿತು.

ಅಂಗಡಿಯಲ್ಲಿ ಖರೀದಿ ಮಾಡಿ ಅಂಗಡಿ ಮಾಲೀಕರಿಗೆ ದುಡ್ಡು ನೀಡುವ ಸಂದರ್ಭದಲ್ಲಿ ತಮ್ಮ ಜೇಬಿನಲ್ಲಿ ದುಡ್ಡು ಕಡಿಮೆ ಇದೆ ಎಂದು ಕಾರಿನಲ್ಲಿದ್ದ ಹಣದ ಕಟ್ಟಿನಲ್ಲಿ ಹಣ ಪಡೆಯಲು ಹೋದಾಗ ಹಣದ ಕಟ್ಟು ಕಾಣೆಯಾಗಿರುವುದು ಕಂಡುಬಂದು ವಿಚಲಿತರಾದರು. ಹಣದ ಕಟ್ಟು ಕಾಣೆಯಾಗಿರುವುದು ತಿಳಿದ ವಾಸುದೇವ ಉಡುಪರು ತಕ್ಷಣ ಅಂಗಡಿಗೆ ತೆರಳಿ ಅಂಗಡಿ ಮಾಲಿಕ ಹರೀಶ ರವರಿಗೆ ಘಟನೆ ಬಗ್ಗೆ ವಿವರಿಸಿದರು.

ಆಗ ಅಂಗಡಿ ಮಾಲೀಕ ಹರೀಶ ಇಲ್ಲಿ ಬೇರೆ ಯಾರು ಬಂದಿಲ್ಲ ನಿಮಗೆ ಯಾರಾದರೂ ಅನುಮಾನ ಬಂದರೆ ಗುರುತಿಸಿ ಎಂದಾಗ ಅದೇ ಅಂಗಡಿಯಲ್ಲಿದ್ದ ಶಿವಮೊಗ್ಗದ ಬರ್ಮಪ್ಪ ನಗರದ ಮಸಾಲೆ ಸಾಮಾನು ವ್ಯಾಪಾರಿ ಮಾರ್ವಾಡಿ ಪ್ರವೀಣ ಎಂಬುವವನು ಮಸಾಲೆ ಪದಾರ್ಥ ಮಾರಾಟ ಮಾಡಲು ಅಂಗಡಿಗೆ ಬಂದಿದ್ದ ಎನ್ನಲಾಗಿದ್ದು ಅವನನ್ನು ವಿಚಾರಿಸಲಾಗಿ ತನಗೇನು ಗೊತ್ತಿಲ್ಲದಂತೆ ನಾಟಕವಾಡಿದ್ದು ಅನುಮಾನದಿಂದ ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದು ಆ ಕ್ಷಣದಲ್ಲೇ ಬಂದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾರ್ವಾಡಿ ಪ್ರವೀಣನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ 5 ಲಕ್ಷ ರೂ.ಗಳ ಹಣದ ಕಟ್ಟನ್ನು ತಾನೇ ಪಡೆದುಕೊಂಡಿರುವುದಾಗಿ ತಿಳಿಸಿ ಪೊದೆಯೊಂದರಲ್ಲಿ ಬಚ್ಚಿಟ್ಟಿದ್ದ ಹಣದ ಕಟ್ಟನ್ನು ಪೊಲೀಸರಿಗೆ ತೋರಿಸಿದ್ದು ಪ್ರವೀಣ ತಪ್ಪೊಪ್ಪಿಕೊಂಡಿದ್ದಾನೆ.

ಶಿವಮೊಗ್ಗ ವಾಸಿ ಪ್ರವೀಣ ತನ್ನ ತಂದೆಯೊಂದಿಗೆ ಕಳೆದ ಐದು ವರ್ಷದಿಂದ ಮಸಾಲೆ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದರು ಪ್ರತಿ ವಾರಕ್ಕೊಮ್ಮೆ ಹೊಸನಗರ ಕಾರಗಡಿವರೆಗೆ ತಮ್ಮ ಮಾರುತಿ ಓಮ್ನಿ ವಾಹನದಲ್ಲಿ ಬಂದು ಅಂಗಡಿಗಳಿಗೆ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಿ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ.

ಹೊಸನಗರ ಪೊಲೀಸರು ಆರೋಪಿ ಪ್ರವೀಣ್ ನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಕೆ ಮಧುಸೂದನ್, ಸಬ್ ಇನ್ಸ್‌ಪೆಕ್ಟರ್ ಎಂ.ಎನ್. ರಾಜೇಂದ್ರ ನಾಯ್ಕ್, ಎಎಸ್ಐ ಸುರೇಶ್, ಶ್ರೀನಿವಾಸ್, ಸಿಬ್ಬಂದಿಗಳಾದ ಕಿರಣ್, ಅಮೃತ್, ಅಶೋಕ್ ನಾಯ್ಕ್, ಮಹೇಶ್ ಮೊದಲಾದವರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here