23.2 C
Shimoga
Sunday, November 27, 2022

ಕಳುವಾದ 1.17 ಕೋಟಿ ರೂ. ಮೌಲ್ಯದ ಅಡಿಕೆ ವಶ ; ಆರೋಪಿಗಳ ಬಂಧನ !

ಸಾಗರ : ಗುಜರಾತ್‌ನ ಅಹ್ಮದಾಬಾದ್‌ಗೆ ಕಳುಹಿಸುತ್ತಿದ್ದ 1.17 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಅಡಿಕೆಯನ್ನು ಸಂಬಂಧಪಟ್ಟವರಿಗೆ ತಲುಪಿಸದೆ ಮಾಲೀಕರಿಗೆ ವಂಚಿಸಿ ಬೇರೆ ಕಡೆ ಸಾಗಿಸಲು ಪ್ರಯತ್ನಿಸಿದ್ದ ವಂಚಕರ ತಂಡವನ್ನು ಮಾಲುಸಹಿತ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.


ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ಅವರ ಗೋದಾಮಿನಿಂದ ಧೋಲಾರಾಮ್ ಹರಿಸಿಂಗ್ ಅವರಿಗೆ ಸೇರಿದ 350 ಚೀಲ ಕೆಂಪಡಿಕೆಯನ್ನು ಅಹಮದಾಬಾದ್‌ಗೆ ರವಾನಿಸಲು ಲೋಡ್ ಮಾಡಿ ಕಳಿಸಲಾಗಿತ್ತು. 245 ಕ್ವಿಂಟಾಲ್ ಕೆಂಪಡಿಕೆಯ ಮೌಲ್ಯ 1,17,60,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.


ಆರೋಪಿಗಳು ಮಾಲನ್ನು ಅಹಮದಾಬಾದ್‌ಗೆ ತೆಗೆದುಕೊಂಡು ಹೋಗದೆ ಕಳ್ಳತನ ಮಾಡಿರುವುದು ಗೊತ್ತಾಗುತ್ತಿದ್ದಂತೆಯೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲಾಗಿತ್ತು. ಪ್ರಕರಣ ಬೇಧಿಸಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಸುಮಾರು 22 ದಿನಗಳ ಕಾಲ ತಾಂತ್ರಿಕತೆ ಮತ್ತು ಬಾತ್ಮೀದಾರರ ಮಾಹಿತಿಗಳನ್ನು ಆಧರಿಸಿ ನ. 18ರಂದು ಮಧ್ಯಪ್ರದೇಶದ ಸಾರಂಗಪುರದಲ್ಲಿ ಪ್ರಕರಣದ ಆರೋಪಿಗಳಾದ ಲಾರಿ ಚಾಲಕ ಇಂದೋರ್‌ನ ರಜಾಕ್ ಖಾನ್, ಅಹಮದಾಬಾದ್‌ನ ಫಾಟಬಿಲೋದ್‌ನ ಲಾರಿ ಚಾಲಕ ಥೇಜು ಸಿಂಗ್, ಮಧ್ಯಪ್ರದೇಶದ ಶಹಜಾಪುರದ ಅನಿಶ್ ಅಬ್ಬಾಸಿ ಅವರನ್ನು ವಶಕ್ಕೆ ಪಡೆದು 25 ಲಕ್ಷ ರೂ. ಮೌಲ್ಯದ ಅಶೋಕ್ ಲೈಲ್ಯಾಂಡ್ ಲಾರಿ ಸಮೇತ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಆರೋಪಿಗಳು ಅಂತರರಾಜ್ಯ ಕಳ್ಳತನದ ಇತಿಹಾಸ ಹೊಂದಿದ್ದು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯದಲ್ಲಿ ಸಹ ಅಪರಾಧ ಎಸಗಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಸಾಗರ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಪ್ರವೀಣಕುಮಾರ್, ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್, ಠಾಣಾ ಸಿಬ್ಬಂದಿಗಳಾದ ಸನಾವುಲ್ಲಾ, ಶ್ರೀಧರ್, ತಾರಾನಾಥ್, ರವಿಕುಮಾರ್, ಹನುಮಂತಪ್ಪ ಜಂಬೂರು, ಪ್ರವೀಣ್ ಕುಮಾರ್ ಪಾಲ್ಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಉಪ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!