ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ: ಬಿ‌.ಎಸ್. ಯಡಿಯೂರಪ್ಪ

0
202

ಶಿಕಾರಿಪುರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಉಸಿರಾಡುತ್ತಿದ್ದು ಉಳಿದೆಲ್ಲಾ ರಾಜ್ಯಗಳಲ್ಲಿ ಮುಳುಗಡೆ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ, ಶಿಕಾರಿಪುರ ಕ್ಷೇತ್ರದ ಶಾಸಕರಾದ ಬಿ.ಎಸ್ ಯಡಿಯೂರಪ್ಪರವರು ಟೀಕಿಸಿದ್ದಾರೆ.

ಗುರುವಾರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಮುದ್ವತಿ ರೆಸಿಡೆನ್ಸಿ ಶಾಲೆಯ ಆಡಿಟೇರಿಯಂನಲ್ಲಿ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾದ ಡಿ‌.ಎಸ್ ಅರುಣ್ ರವರ ಪರವಾಗಿ ಮತಯಾಚನೆ ಮಾಡುತ್ತ ಮಾತನಾಡಿದ ಅವರು, ದೇಶದಲ್ಲಿ ಕರ್ನಾಟಕ ರಾಜ್ಯ ಹೊರತುಪಡಿಸಿ ದೇಶದಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷವಿಲ್ಲ. ಅವರ ಸೊಕ್ಕಿನ, ಧಿಮಾಕಿನ ಮಾತುಗಳಿಂದ ಅವನತಿಯ ಹಾದಿ ಹಿಡಿದಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಇನ್ನಷ್ಟು ತಕ್ಕ ಉತ್ತರವನ್ನು ನಮ್ಮ ಪಕ್ಷದ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭಾ ಸದಸ್ಯರು ಸೇರಿದಂತೆ ನಾವೆಲ್ಲರೂ ಕೂಡಿ ಕೊಡಬೇಕಿದೆ ಎಂದರು.

ಗ್ರಾಮ ಪಂಚಾಯಿತಿಯ ಬಿಜೆಪಿ ಪಕ್ಷದ ಎಲ್ಲಾ ಸದಸ್ಯರು ಒಗ್ಗಟ್ಟಿನ ಪ್ರದರ್ಶನ ತೋರಿಸುವುದರ ಜೊತೆಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳೆಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಂಘಟನೆ, ಯುವಕರ ಸಂಘಟನೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ತಂಡಗಳನ್ನು ಕಟ್ಟಿದರೆ ಮುಂದಿನ ಯಾವುದೇ ಚುನಾವಣೆಗಳನ್ನು ಸುಲಭವಾಗಿ ಗೆಲುವು ಸಾಧಿಸಬಹುದು. ಚುನಾಯಿತ ಪ್ರತಿನಿಧಿಯಾಗಿರು ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರು ನಿಮ್ಮ ಮನೆಬಾಗಿಲಿಗೆ ಬರುವ ಗ್ರಾಮದ ಸಾರ್ವಜನಿಕರಿಗೆ ಸಹಾಯ ಮಾಡುವುದರ ಜೊತೆಗೆ, ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕಾಗಿದೆ. ಅಲ್ಲದೆ ಬೇರೆ ಬೇರೆ ಪಕ್ಷಗಳ ಸದಸ್ಯರನ್ನೂ ಸಹ ಮನವೊಲಿಸಲು ಪ್ರಯತ್ನಿಸಬೇಕಾಗಿದೆ.

ರಾಜ್ಯದಲ್ಲಿ 25 ವಿಧಾನ ಪರಿಷತ್ ಕ್ಷೇತ್ರಗಳಿದ್ದು, ಅದರಲ್ಲಿ ಡಿ.ಎಸ್ ಅರುಣ್ ರವರನ್ನ ಸೇರಿ 20 ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದೇವೆ. ಈ ಕ್ಷೇತ್ರದಲ್ಲಿ ಕನಿಷ್ಠ 15 ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ ಎಂದ ಅವರು, ಈ ರೀತಿ ಗೆಲುವು ಸಾಧಿಸುವುದರಿಂದ ವಿಧಾನಸಭೆಯಲ್ಲಿ ಪಾಸಾದ ಬಿಲ್ ಗಳು ಯಾರ ಕೈ ಕಾಲು ಹಿಡಿಯದೇ ನೇರವಾಗಿ ವಿಧಾನ ಪರಿಷತ್ತಿನಲ್ಲಿ ಪಾಸಾಗಲು ಸಹಾಯವಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಸಂಸದ ಬಿ.ವೈ ರಾಘವೇಂದ್ರರವರು, ಗುರುಮೂರ್ತಿರವರು ಇಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿಕೊಂಡು ಬಂದ ಪ್ರಕಾರ ಕೇವಲ 24 ಗಂಟೆಯೊಳಗೆ ಶಿಕಾರಿಪುರ ತಾಲ್ಲೂಕಿನಲ್ಲಿ ನೀರಾವರಿ, ರಸ್ತೆ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದು, ನನ್ನ ಪ್ರಕಾರ ಇನ್ಯಾವುದೇ ಕೆಲಸಗಳು ಬಾಕಿ ಇರುವುದಿಲ್ಲ ಎಂದು ಕೊಂಡಿದ್ದೇನೆ. ಇದು ಕೇವಲ ಶಿಕಾರಿಪುರ ತಾಲ್ಲೂಕಿನಲ್ಲೇ ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ, ತಾಲ್ಲೂಕುಗಳಲ್ಲೂ ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳಿದರು.

ಸಂಸದ ಬಿ.ವೈ ರಾಘವೇಂದ್ರರವರು ಮಾತನಾಡಿ, ಬಿ.ಎಸ್ ಯಡಿಯೂರಪ್ಪರವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾದರು. ನಾಲ್ಕು ಬಾರಿಯೂ ಅನ್ಯ ಪಕ್ಷಗಳ ಸದಸ್ಯರ ಸಹಕಾರದಿಂದ ಮುಖ್ಯಮಂತ್ರಿಯಾದರು. ಒಂದು ಬಾರಿಯೂ ನಿಚ್ಚಳ ಬಹುಮತದಿಂದ ಆಯ್ಕೆ ಮಾಡಲಾಗಲಿಲ್ಲ ಎಂಬ ಅಳುಕು ನಮ್ಮ ನಿಮ್ಮೆಲ್ಲರ ಮನದಲ್ಲಿದೆ. ನಿಚ್ಚಳ ಬಹುಮತ ಬಾರದೇ ಇದ್ದರೂ ರಾಜ್ಯದ ಮುಖ್ಯಮಂತ್ರಿಯಾದರಲ್ಲ ಎಂಬ ತೃಪ್ತಿ ನಮಗೆ ತಂದಿದೆ. ಪುರಸಭಾ ಸದಸ್ಯರಾಗಲು ವಿರೋಧವಿದಂತಹಾ ಸಮಯದಲ್ಲಿ ನನ್ನ ತಾಯಿಯ ಜೊತೆ ಕೆಲವರು ಮುಂದೆ ನಿಂತು ಪ್ರಚಾರ ಮಾಡುವ ಮೂಲಕ ನನ್ನ ತಂದೆಯು ಗೆಲುವು ಸಾಧಿಸಿದ್ದಾರೆ. ಅವರು ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ ಫಲವಾಗಿ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯ ಸ್ಪರ್ದಿ ಡಿ.ಎಸ್ ಅರುಣ್ ಮಾತನಾಡಿ, 2010 ಕ್ಕೂ ಮೊದಲು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಾಸಿಕ ಕೇವಲ 500 ರೂಪಾಯಿ ಗೌರವಧನ ನೀಡಲಾಗುತ್ತಿತ್ತು. ಬಿ.ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಅದನ್ನು 1000 ರೂಪಾಯಿಗೆ ಹೆಚ್ಚಿಸಿದರು. ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಕೇವಲ ಶೇಕಡಾ 33% ಆದ್ಯತೆ ನೀಡಲಾಗಿತ್ತು. ಅದನ್ನು ಶೇಕಡಾ 50% ರಷ್ಟು ಹೆಚ್ಚಳ ಮಾಡುವುದರ ಮೂಲಕ ಮಹಿಳೆಯರ ಬಲವರ್ಧನೆಗೆ ಮುಂದಾಗಿದ್ದಾರೆ. ನಾನು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್ತಿನಲ್ಲಿ ಚರ್ಚಿಸಿ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಗರ ಹೊಸನಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್, ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here