ಕಾಡಾನೆ ದಾಳಿಗೆ ಮಹಿಳೆ ಬಲಿ !

0
419

ಚಿಕ್ಕಮಗಳೂರು: ತಾಲ್ಲೂಕಿನ ಕೆಳಗೂರಿನ ಕಾಫಿ ತೋಟದಲ್ಲಿ ಶನಿವಾರ ಆನೆ ಗುದ್ದಿ ತೀವ್ರ ಗಾಯಗೊಂಡಿದ್ದ ಸರೋಜಾ ಬಾಯಿ (45) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸರೋಜಾ ಬಾಯಿ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಲ್ಲೆದೇವರ ತಾಂಡ್ಯದವರು. ದುಡಿಮೆಗಾಗಿ ಕೆಳಗೂರಿನ ಕಾಫಿ ಎಸ್ಟೇಟ್‌ನಲ್ಲಿ ಕುಟುಂಬ ನೆಲೆಸಿದೆ.

ಶನಿವಾರ ಬೆಳಿಗ್ಗೆ 10 ಗಂಟೆ ಹೊತ್ತಿನಲ್ಲಿ ಆನೆಯು ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಕಾಳು ಮೆಣಸು ಹೆಕ್ಕುವ ಕೆಲಸದಲ್ಲಿ ತೊಡಗಿದ್ದ ಸರೋಜಾ ಅವರಿಗೆ ಗುದ್ದಿ ಗಾಯಗೊಳಿಸಿದೆ. ಕುಟುಂಬದವರು, ಗ್ರಾಮಸ್ಥರು ಗಾಯಾಳು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.

‘ಕೆಳಗೂರಿನ ಈರೇಗೌಡ ಅವರ ಮನೋಜ್‌ ಎಸ್ಟೇಟ್‌ಗೆ ಸರೋಜಾ ಬಾಯಿ, ಅವರ ಕೆಲಸಕ್ಕೆ ಹೋಗಿದ್ದರು. ತೋಟಕ್ಕೆ ನುಗ್ಗಿದ ಆನೆ ಅವರ ಬೆನ್ನತ್ತಿದೆ. ಆನೆ ನೋಡಿ ಕಾಲ್ಕಿತ್ತ ಪುತ್ರಿಯು ಅಮ್ಮನಿಗೆ ಓಡುವಂತೆ ಹೇಳಿದ್ದಾರೆ. ಸರೋಜಾ ಓಡುವ ಭರದಲ್ಲಿ ಬಿದ್ದಿದ್ದಾರೆ. ಆನೆ ಅವರ ಮೇಲೆ ಎರಗಿದೆ’ ಎಂದು ತೋಟದ ಕಾರ್ಮಿಕ ಕುಮಾರ ನಾಯಕ್‌ ತಿಳಿಸಿದರು.

‘ತೋಟದಲ್ಲಿ ಆನೆಯ ಓಡಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಮಹಿಳೆಗೆ ಆನೆ ಗುದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ’ ಎಂದು ಉಪ ಅರಣ್ಯಸಂಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here